ಮಡಿಕೇರಿ, ಮೇ 3: ಕೋವಿಡ್-19ರ ಸಂಬಂಧ ಲಾಕ್‍ಡೌನ್‍ನಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಜನ ಹಿಂತಿರುಗಿ ಬರಲು ಕೇಂದ್ರ ಸರಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸುಮಾರು 3000 ಮಂದಿ ಜಿಲ್ಲೆಗೆ ಬರುವ ಸಾಧ್ಯತೆಯಿದ್ದು, ಮುಂದಿನ 20 ದಿನ ಅತ್ಯಂತ ಕಠಿಣ ಸಮಯವಾಗಿದ್ದು, ಕೊಡಗಿನ ಜನತೆ ಕಾನೂನು ಪಾಲನೆಯೊಂದಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದ್ದಾರೆ.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಉಪಸ್ಥಿತಿ ಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಮಾರ್ಗಸೂಚಿ ಬಗ್ಗೆ ಸುದೀರ್ಘ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಕರ್ನಾಟಕದ ವಿವಿಧ ಕಡೆಗಳಿಂದ 706, ಹೊರ ರಾಜ್ಯಗಳಿಂದ 279, ಹೊರ ರಾಷ್ಟ್ರಗಳಿಂದ 10 ಮಂದಿ, ಹೀಗೆ ಒಟ್ಟು 995 ಮಂದಿ ಕೊಡಗಿಗೆ ಮರಳಲು ನೋಂದಾವಣೆ ಮಾಡಿಕೊಂಡಿ ರುವುದಾಗಿ ತಿಳಿಸಿದರು. ಹೊರ ರಾಜ್ಯಗಳಿಂದ ಬರಲು ಇಚ್ಚಿಸುವವರಲ್ಲಿ ಕೇರಳದಿಂದ 209, ತಮಿಳುನಾಡಿ ನಿಂದ 66, ಮಹಾರಾಷ್ಟ್ರದಿಂದ 4 ಮಂದಿ ಅರ್ಜಿ ಸಲ್ಲಿಸಿದ್ದು, ಇದೀಗ ನೋಂದಣಿ ಆಗಿರುವ 995ರ ಸಂಖ್ಯೆ ಅಂದಾಜು 3000ಕ್ಕೆ ಏರಿಕೆ ಆಗಬಹುದು ಎಂದು ವಿವರಿಸಿದ ಅನೀಸ್, ಈ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಕಾಪಾಡಿಕೊಂಡು ಬಂದಿರುವ ಆರೋಗ್ಯಕರ ವಾತಾವರಣವನ್ನು ಮುಂದಿನ 20 ದಿನಗಳಲ್ಲಿ ಅತ್ಯಂತ ಕಠಿಣವಾಗಿ ಜನತೆ ಅನುಸರಿಸಬೇಕಿದೆ ಎಂದರು.

ಇದೇ ರೀತಿ ಕೋವಿಡ್-19ರ ಸಂಬಂಧ ಲಾಕ್‍ಡೌನ್‍ನಿಂದ ಅಂತರರಾಜ್ಯ, ಅಂತರ ಜಿಲ್ಲೆಯಲ್ಲಿ ಸಿಲುಕಿರುವ ಜನರು ಅವರವರ ಸ್ವಂತ ಊರುಗಳಿಗೆ ಒಂದು ಬಾರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಬಗ್ಗೆಯೂ ಅವರು ವಿವರಿಸಿದರು.

ಅಂತರ ರಾಜ್ಯದ ಜನರನ್ನು ಜಿಲ್ಲೆಯಿಂದ ಕಳುಹಿಸುವ ಬಗ್ಗೆ

ಕೋವಿಡ್-19ರ ಸಂಬಂಧ ಲಾಕ್‍ಡೌನ್‍ನಿಂದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಬಗ್ಗೆ ಕೇಂದ್ರ ಸರಕಾರದ ಒಳಾಡಳಿತ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರದಿಂದ ಮಾರ್ಗಸೂಚಿಯನ್ನು ಹೊರಡಿಸಲಾದ ಬಗ್ಗೆ ಮಾಹಿತಿ ನೀಡಿದರು.

ಅದರಂತೆ ಲಾಕ್‍ಡೌನ್‍ನಿಂದ ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಬೇರೆ ರಾಜ್ಯಗಳ ಜನರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಬಗ್ಗೆ ವಹಿಸಲಾಗುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಬೇರೆ ರಾಜ್ಯಗದ ಜನರು ಅವರ ಸ್ವಂತ ಊರುಗಳಿಗೆ ತೆರಳಲು ಇಚ್ಚಿಸಿದಲ್ಲಿ ಅರ್ಜಿಯನ್ನು hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್ ಮೂಲಕ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ವೆಬ್‍ಸೈಟ್ ಮೂಲಕ ನೋಂದಾಯಿಸಲು ಸಾಧ್ಯವಾಗದವರು ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಖ್ಯಾಧಿಕಾರಿ, ನಗರಸಭಾ ಪೌರಾಯುಕ್ತರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಈ ನೋಂದಣಿ ಕಾರ್ಯವು ಸಂಪೂರ್ಣವಾಗಿ ಉಚಿತ ವಾಗಿರುತ್ತದೆ. ಈ ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ

(ಮೊದಲ ಪುಟದಿಂದ) ಜನರನ್ನು ಕಳುಹಿಸುವ ಕಾರ್ಯದ ಉಸ್ತುವಾರಿಯನ್ನು ಜವರೇಗೌಡ, ಉಪವಿಭಾಗಾಧಿಕಾರಿ, ಮಡಿಕೇರಿ ಇವರಿಗೆ ನೀಡಲಾಗಿದೆ.

ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಸರಕಾರದಿಂದ ಅನುಮತಿ ದೊರೆತ ನಂತರ ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬೇರೆ ರಾಜ್ಯದ ಜನರನ್ನು ಕಳುಹಿಸಲು ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆಯನ್ನು ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳೊಂದಿಗೆ ಕಲ್ಪಿಸಲಾಗುವುದು.

ಜನರು ನಿಗದಿಪಡಿಸಿದ ದರವನ್ನು ಪಾವತಿಸಿ ಸದರಿ ಬಸ್‍ಗಳಲ್ಲಿ ಪ್ರಯಾಣಿಸಬೇಕಾಗುವುದು. ಮಡಿಕೇರಿ, ನಾಪೋಕ್ಲು, ವೀರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆ ಮತ್ತು ಕುಶಾಲನಗರದಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಜನರನ್ನು ಕಳುಹಿಸಲು ಮುಂಚಿತವಾಗಿ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಲಾಗುವುದು.

ಜಿಲ್ಲೆಗೆ ಮರಳುವ ಬಗ್ಗೆ

ಕೋವಿಡ್-19ರ ಸಂಬಂಧ ಲಾಕ್‍ಡೌನ್‍ನಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರೂ ಸಹ ಜಿಲ್ಲೆಗೆ ಹಿಂತಿರುಗಲು ಅರ್ಜಿಯನ್ನು hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್ ಮೂಲಕ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕಾಗಿರುತ್ತದೆ.

ಅಲ್ಲದೆ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ತಮ್ಮ ಕುಟುಂಬ ಸದಸ್ಯರ ಬಗ್ಗೆ ಕುಟುಂಬದವರು ಕೊಡಗು ಜಿಲ್ಲೆಯ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಖ್ಯಾಧಿಕಾರಿ, ನಗರಸಭಾ ಪೌರಾಯುಕ್ತರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈಗಾಗಲೇ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ.

ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರನ್ನು ಜಿಲ್ಲೆಗೆ ಕರೆ ತರುವ ಕಾರ್ಯದ ಉಸ್ತುವಾರಿಯನ್ನು ರಾಜು, ಉಪನಿರ್ದೇಶಕರು, ಕೃಷಿ ಇಲಾಖೆ ಇವರಿಗೆ ವಹಿಸಲಾಗಿದೆ.

ಸ್ವಂತ ಊರುಗಳಿಗೆ ತೆರಳುವ/ಮರಳುವ ಬಗ್ಗೆ

ಕೋವಿಡ್-19ರ ಸಂಬಂಧ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಜನರು ಅವರ ಸ್ವಂತ ಊರುಗಳಿಗೆ ತೆರಳಲು ತಾ. 4 ರಿಂದ (ಇಂದಿನಿಂದ) ಅನ್ವಯವಾಗುವಂತೆ ಮುಂದಿನ ಎರಡು ವಾರಗಳವರೆಗೆ ಕೇವಲ ಒಂದು ಬಾರಿ ಪ್ರಯಾಣಕ್ಕೆ ಮಾತ್ರ ಅನುಮತಿ ನೀಡುವಂತೆ ರಾಜ್ಯ ಸರಕಾರದಿಂದ ಆದೇಶವಾಗಿದೆ.

ಆದ್ದರಿಂದ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರ ಸ್ವಂತ ಊರುಗಳಿಗೆ ಬರಲು ತಾವು ಸಿಲುಕಿರುವ ಜಿಲ್ಲೆ, ವಿಭಾಗದ ವ್ಯಾಪ್ತಿಯ ಜಿಲ್ಲಾಧಿಕಾರಿ, ಆರಕ್ಷಕ ಉಪ ಅಧೀಕ್ಷಕರನ್ನು ಸಂಪರ್ಕಿಸಿ ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ಪಡೆದು ಪ್ರಯಾಣಿಸಬಹುದಾಗಿದೆ.

ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳ ವಲಸೆ ಕಾರ್ಮಿಕರು ಅವರವರ ಸ್ವಂತ ಊರುಗಳಿಗೆ ತೆರಳಲು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ನೋಂದಾಯಿಸಿ, ದೃಢೀಕರಿಸಿಕೊಂಡು ಉಪವಿಭಾಗಾಧಿಕಾರಿಯವರಿಂದ ಒಂದು ಕಡೆಗೆ ಮತ್ತು ಒಂದು ಬಾರಿ ಪ್ರಯಾಣಕ್ಕೆ, ಒಂದು ದಿನಕ್ಕೆ ಮಾತ್ರ ಅನುಮತಿಯನ್ನು ಪಡೆದು ಪ್ರಯಾಣಿಸಬಹುದಾಗಿದೆ.

ಈ ವರೆಗೆ ಜಿಲ್ಲೆಯಿಂದ ಒಟ್ಟು 779 ವಲಸೆ ಕಾರ್ಮಿಕರಿಗೆ ಜಿಲ್ಲೆಯಿಂದ ತೆರಳಲು ಅನುಮತಿ ನೀಡಲಾಗಿದೆ. ವಲಸೆ ಕಾರ್ಮಿಕರನ್ನು ಹೊರತು ಪಡಿಸಿದಂತೆ ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳ ಜನರು ಅವರವರ ಸ್ವಂತ ಊರುಗಳಿಗೆ ತೆರಳಲು ಆರಕ್ಷಕ ಉಪಾಧೀಕ್ಷರನ್ನು ಸಂಪರ್ಕಿಸಿ ಒಂದು ಕಡೆಗೆ ಮತ್ತು ಒಂದು ಬಾರಿ ಪ್ರಯಾಣಕ್ಕೆ, ಒಂದು ದಿನಕ್ಕೆ ಮಾತ್ರ ಅನುಮತಿ ಪಡೆದು ಪ್ರಯಾಣಿಸಬಹುದಾಗಿದೆ.