ಸರಕಾರದÀ ನಿರ್ದೇಶನದಂತೆ ಜಿಲ್ಲೆಯಲ್ಲೂ ಲಾಕ್‍ಡೌನ್‍ನಲ್ಲಿ ಸ್ವಲ್ಪ ಸಡಿಲಿಕೆಗೊಳಿಸಿರುವ ಜಿಲ್ಲಾಡಳಿತ ಮದ್ಯದಂಗಡಿ ಹಾಗೂ ಆಭರಣ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಈ ಹಿಂದಿನಂತೆ ವಾರದ ನಾಲ್ಕು ದಿನಗಳಲ್ಲಿ ಮಾತ್ರ ವ್ಯಾಪಾರ ವಹಿವಾಟುಗಳು ಮುಂದುವರಿಯಲಿದ್ದು, ಮದ್ಯದಂಗಡಿಗಳು ಬೆ. 9 ರಿಂದ ಸಂಜೆ ನಾಲ್ಕು ಗಂಟೆ ತನಕ ಮಾತ್ರ ತೆರೆಯಲು ಅವಕಾಶ ಕಲ್ಪಿಸಿದೆ.ಜಿಲ್ಲೆಯ ಗಡಿ ಪ್ರದೇಶಗಳಾದ ಕುಟ್ಟ, ಕರಿಕೆ, ಮಾಕುಟ್ಟ ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಪ್ರತಿಯೊಂದು ಮದ್ಯದಂಗಡಿಗಳು ಏಕಕಾಲದಲ್ಲಿ ಕೇವಲ 5 ಮಂದಿಯನ್ನು ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಬೇಕು. ಇತರರು ಕನಿಷ್ಟ 3 ಅಡಿ ಅಂತರ ಕಾಯ್ದುಕೊಳ್ಳಲು ಗುರುತು ಮಾಡಬೇಕು. ಈ ಬಗ್ಗೆ ಅಬ್ಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಿಗಾವಹಿಸಲಿವೆ. ತಾ. 4 ರಿಂದ (ಇಂದಿನಿಂದ) ಬೆಳಿಗ್ಗೆ 6 ರಿಂದ 4 ತನಕ ಆಟೋ ಹಾಗೂ ಬಾಡಿಗೆ ಕಾರು ಚಾಲನೆಗೆ ಅವಕಾಶವಿದ್ದು, ಆಟೋದಲ್ಲಿ ಒಬ್ಬ ಪ್ರಯಾಣಿಕ ಹಾಗೂ ಬಾಡಿಗೆ ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

ಜಿಲ್ಲೆಗೆ ಮುಂದಿನ ದಿನಗಳಲ್ಲಿ ಸುಮಾರು 3 ಸಾವಿರ ಮಂದಿಯ ಪ್ರವೇಶ ಇರುವುದರಿಂದ ಸಾರ್ವಜನಿಕ ಬಸ್ ಸಂಚಾರ ವ್ಯವಸ್ಥೆ ಬಗ್ಗೆ ತೀರ್ಮಾನವನ್ನು ತಡೆಹಿಡಿದಿರುವುದಾಗಿ, ಮುಂದಿನ ಬೆಳವಣಿಗೆ ಅನುಸರಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ವಿವರಿಸಿದರು.

ಪೊಲೀಸ್ ಇಲಾಖಾ ವ್ಯವಸ್ಥೆ ಕುರಿತು ವಿವರಣೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಮುಂದಿನ ದಿನಗಳಲ್ಲಿ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ವಾಹನಗಳು ಓಡಾಡುವ ಸಂಭವವಿರುವುದರಿಂದ ಬಂದೋಬಸ್ತನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು.

ಕಳೆದ 45 ದಿನಗಳ ವ್ಯವಸ್ಥೆಗೂ, ಮುಂದಿನ ದಿನಗಳ ಸ್ಥಿತಿಗೂ ಬದಲಾವಣೆಯಿದ್ದು, ಗಡಿ ಭಾಗದ ಬಂದೋಬಸ್ತ್ ಕುರಿತು ಮಡಿಕೇರಿಯ ಕಂಟ್ರೋಲ್ ರೂಂ ಕೊಠಡಿಯಿಂದಲೇ ಗಮನ ಹರಿಸಲಾಗುವುದು ಎಂದರು. ಇದುವರೆಗೆ 1763 ವಾಹನಗಳನ್ನು ವಶಪಡಿಸಿ ನಂತರ ಬಿಡುಗಡೆಗೊಳಿಸಲಾಗಿದ್ದು, ಇನ್ನು ಮುಂದೆ ಅನಾವಶ್ಯಕವಾಗಿ ತಿರುಗುವವರ ವಿರುದ್ಧ ಕಠಿಣ ಕ್ರಮ ಕಾದಿದೆ ಎಂದು ಎಚ್ಚರಿಸಿದರು.

ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಬಾರದಿರುವುದು, ಉಗುಳುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ರೂ. 100 ದಂಡ ವಿಧಿಸಲಾಗುವುದು ಎಂದು ಸುಮನ್ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಸಿದರು.