ಈ ನಡುವೆ ಶಿಷ್ಯ ಸಮೂಹದಿಂದ ಪರಿವೃತನಾಗಿ ಅಗಸ್ತ್ಯ ಮುನಿಯು ದೇವ ದೇವಾಧಿಪನಾದ ಈಶ್ವರನ ದರ್ಶನಕ್ಕಾಗಿ ಸಹ್ಯಾದ್ರಿಗೆ ಬಂದನು. ಮುನಿವರ್ಯನಾದ ಅಗಸ್ತ್ಯನು ಋಷ್ಯಾಶ್ರಮಗಳಿಂದ ಕಂಗೊಳಿಸುವ ಬ್ರಹ್ಮಗಿರಿಗೆ ತೆರಳಿದನು. ಅಲ್ಲಿ ವಸಿಷ್ಠಾದಿ ಮಹರ್ಷಿ ಗಳನ್ನು ಸಂದರ್ಶಿಸಿದನು. ಅವರಿಂದ ಆತಿಥ್ಯವನ್ನು ಪಡೆದನು. ಅಲ್ಲಿ ಆಧಾರ ಸ್ವರೂಪಿಣಿಯಾಗಿದ್ದ ಲೋಪಾಮುದ್ರೆಯನ್ನು ದರ್ಶಿಸಿದನು. ಬುದ್ಧಿಶಾಲಿಯಾದ ಅಗಸ್ತ್ಯನು ಶುಚಿಸ್ಮಿತೆಯಾದ ಅವಳೊಂದಿಗೆ” ಸುಂದರ ವದನೆಯಾದ ಲೋಪಾಮುದ್ರೆಯೇ, ನಾನು ಸಂತತಿ ಲಾಭಕ್ಕಾಗಿ ನಿನ್ನನ್ನು ವಂದಿಸುತ್ತೇನೆ” ಎಂದು ಆಕೆಯಲ್ಲಿ ಅರಿಕೆ ಮಾಡಿಕೊಂಡನು. ಯುವತಿಯಾದ ಲೋಪಾಮುದ್ರೆಯು ಅಗಸ್ತ್ಯನು ತನಗೆ ಅನುರೂಪನಾದ ಪತಿಯೆಂದು ನಿರ್ಧರಿಸಿದಳು. ಋಷಿಯ ಮಾತನ್ನು ಮೀರಬಾರದೆಂದು ಅಗಸ್ತ್ಯನ ಮಾತಿಗೆ ಸಮ್ಮತಿಯಿತ್ತಳು. ಅಗಸ್ತ್ಯನು ಬ್ರಹ್ಮನ ಕುವರಿಯನ್ನು ವಿಧಿಪೂರ್ವಕ ವಾಗಿ ಪರಿಗ್ರಹಿಸಿ ವರಿಸಿದನು. ವಿವಾಹದ ಬಳಿಕ ಅವಳೊಡನೆ ಬಹುಕಾಲದವರೆಗೆ ಅಲ್ಲಿಯೇ ವಾಸಿಸುತ್ತಿದ್ದನು. ಆ ಸಂದರ್ಭ ಅಗಸ್ತ್ಯನೊಂದಿಗೆ ವ್ರತಧಾರಕರಾದ ಋಷಿಗಳು, ಹಾಗೂ ಶಿಷ್ಯರೂ ವಾಸಿಸುತ್ತಿದ್ದರು. ಹೀಗಿರುವಾಗ ಒಂದಾನೊಂದು ಸಂದರ್ಭ ಧರ್ಮಿಷ್ಠನಾದ ಅಗಸ್ತ್ಯನು ತನ್ನ ಪತ್ನಿಯನ್ನು ತನ್ನ ಪವಿತ್ರ ಕಮಂಡಲುವಿನಲ್ಲಿರಿಸಿದನು.”ಸಾಬ್ರವೀತ್ಕುಪಿತಾಗಸ್ತ್ಯಂ ಯದಾ ಮಾಂ ತ್ವಮುಪೇಕ್ಷಸೇ” ಆಗ ಕಾವೇರಿಯು ಕುಪಿತಳಾಗಿ “ಅಗಸ್ತ್ಯನೇ, ನನ್ನನ್ನು ನೀನು ಉಪೇಕ್ಷೆ ಮಾಡಿದಾಗ ಸಲಿಲೇಶ್ವರನಾದ ಸಮುದ್ರಕ್ಕೆ ಹೊರಟು ಹೋಗುವೆನು” ಎಂದು ಮುನ್ನೆಚ್ಚರಿಕೆಯನ್ನಿತ್ತಳು. ಹೀಗಿರಲು ಒಂದು ದಿನ ಅಗಸ್ತ್ಯನು ತನ್ನ ಆಪ್ತ ಶಿಷ್ಯರನ್ನು ಕರೆದು ಹೀಗೆ ಹೇಳಿದನು:-ರಕ್ಷಧ್ವಂ ಕುಂಡಿಕಾಂ ಶಿಷ್ಯಾಃ ಯಥಾಹಂ ಪ್ರಾಪ್ತವಾನಿಹ, ಕನಕಾಂ ದ್ರಷ್ಟುಮಿಚ್ಛಾಮಿ ಸ್ನಾನಾರ್ಥಂ ದ್ವಿಜಪುಂಗವಾಃ-ಎಲೈ ಶಿಷ್ಯರೇ, ನೀವು ನನ್ನ ಕಮಂಡಲುವನ್ನು ನೋಡಿಕೊಳ್ಳಿ. ಬ್ರಾಹ್ಮಣೋತ್ತಮರೇ, ನಾನು ಸ್ನಾನ ಮಾಡುವ ಉದ್ದೇಶದಿಂದ ಕನಕೆಯತ್ತ ತೆರಳುತ್ತೇನೆ.. ಅದೇ ರೀತಿ ಅಗಸ್ತ್ಯನು ಕನಕಾದ್ವಾರಕ್ಕೆ ತೆರಳಿ ವಿಧಿಪೂರ್ವಕವಾಗಿ ಸ್ನಾನ ಮಾಡಿದನು.
ಲೋಪಾಮುದ್ರಾ ತು ಸಾ ದೇವೀ ಕೋಪಾತ್ ಸ್ಫುರಿತಲೋಚನಾ, ವವೃಧೇ ಬ್ರಹ್ಮ ತನಯಾ ಸಮುದ್ರ ಇವ ಪರ್ವಣಿ, ಜಗಾಮ ಕುಂಡಿಕಾಂ ಭಿತ್ವಾ ಸ್ರವಂತೀ ಜಲರೂಪಿಣೀಂ-ಇತ್ತ ಬ್ರಹ್ಮಪುತ್ರಿಯಾದ ಲೋಪಾಮುದ್ರಾದೇವಿಯು ಸಿಟ್ಟಿನಿಂದ ಕಣ್ಣುಗಳನ್ನು ಕೆರಳಿಸುತ್ತಾ ಪರ್ವಕಾಲದಲ್ಲಿ ಸಮುದ್ರವು ವೃದ್ಧಿಯನ್ನೈದುವಂತೆ ವೃದ್ಧಿ ಹೊಂದಿದಳು. ಕಮಂಡಲುವನ್ನು ಭೇದಿಸಿ ಹೊರ ಹೊರಟಳು. ನಾತಿದೂರಂ ಗತೇ ಕಾಲೇ ವಾಯಸೇನ ಚ ಕರ್ಷಿತಂ ದೃಷ್ಟ್ವಾ ತಿರ್ಯಗ್ಗತಂ ಪಾತ್ರಂ ತೋಯಹೀನಂ ಕಮಂಡಲುಂ-ಅಷ್ಟರಲ್ಲಿ ಒಂದು ಕಾಗೆಯು ಕೂಡ ಕಮಂಡಲುವನ್ನು ಎಳೆಯಿತು. ಶಿಷ್ಯೋಪಿ ಕುಂಡಿಕಾಂ ವೋಢನ್ ಸ್ಖಲಿತಃ ಪತಿತೋ ಭುವಿ ಅಲ್ಲದೆ, ಕಮಂಡಲುವನ್ನು ಕೈಯಲ್ಲಿ ಎತ್ತಿ ಹಿಡಿದು ನಿಂತಿದ್ದ ಶಿಷ್ಯನು ಕೂಡ ಜಾರಿ ನೆಲದ ಮೇಲೆ ಬಿದ್ದನು.” ತೀರ್ಥೈಗಾಂಗೈಃ ಕುಂಡಿಕಾಸ್ಥೈಸ್ತಸ್ಯ ಭಾರ್ಯಾ ವಿನಿರ್ಗತಾ, ಮಂದಂ ಮಂದಂ ಯಯೌ ಸಾಧ್ವೀ ಕಾವೇರೀ ಯೋಜನತ್ರಯಂ” ಕಮಂಡಲುವಿನೊಳಗಿದ್ದ ಗಂಗೆಯೇ ಮೊದಲಾದ ತೀರ್ಥಗಳೊಡನೆ ಅಗಸ್ತ್ಯನ ಮಡದಿಯೂ ಹೊರಟಳು. ಅವಳು ಮೂರು ಯೋಜನ ದೂರ ಮೆಲ್ಲ ಮೆಲ್ಲನೆ ಪ್ರಯಾಣ ಮಾಡಿದಳು. ಕಮಂಡಲುವಿನಿಂದ ಜಲರೂಪಿಣಿಯಾಗಿ ಹರಿಯುತ್ತಿರುವ ಲೋಪಾಮುದ್ರೆಯನ್ನು ಕಂಡು ಶಿಷ್ಯರು ಅವಸರದಿಂದ ಎದ್ದರು. ಶತ ಪ್ರಯತ್ನ ಮಾಡಿ ಆಕೆಯನ್ನು ತಡೆಯಲು ಯತ್ನಿಸಿದರು. ಅಂತರ್ಹಿತಾ ಚ ಸಾ ದೇವೀ ಕ್ಷಣಾದೇವ ವಿನಿರ್ಗತಾ-ಆಕೆ ಕ್ಷಣ ಮಾತ್ರದಲ್ಲಿ ಅದೃಶ್ಯಳಾಗಿ ಹೊರ ಹೊರಟಳು. ಅಷ್ಟರಲ್ಲಿ ಅಗಸ್ತ್ಯನು ಸ್ನಾನ-ಸಂಧ್ಯಾವಂದನೆ ಮುಗಿಸಿ ಕನಕಾ ದ್ವಾರ ದಿಂದ ಹೊರಟನು. ಅಲ್ಲಿಂದ ಹಿಂತಿರುಗಿ ಬಂದಾಗ ಪತ್ನಿ ಲೋಪಾಮುದ್ರೆ ಜಲ ರೂಪಿಣಿಯಾಗಿ ಹರಿ ಯುತ್ತಿದ್ದಳು. “ದೇವೈರ್ಮುನಿ ಭಿರತ್ಯುಗ್ರೈಸ್ಸಾರ್ಥಂ ಬ್ರಹ್ಮಾ ಪಿತಾಮಹಃ ಆಯಯೌ ಕುಂಡಿಕಾತೀರಂ ಯಕ್ಷೈಸ್ಸಿದ್ಧೈಶ್ಚ ಕಿನ್ನರೈಃ ತತ್ರ ತೀರ್ಥಾನಿ ನದ್ಯಶ್ಚ ಕ್ಷೇತ್ರಾಣ್ಯ ಪ್ಯಾಶ್ರಮಾಣಿಚ” ಆ ಪುಣ್ಯಕಾಲದಲ್ಲಿ ಪಿತಾಮಹ ಬ್ರಹ್ಮದೇವನು ದೇವತೆಗಳೊಡಗೂಡಿ, ಮುನಿಗಳೊಡನೆಯೂ, ಯಕ್ಷ, ಕಿನ್ನರ, ಸಿದ್ಧರೊನೆಯೂ ಕುಂಡಿಕಾತೀರಕ್ಕೆ ಬಂದನು. ಆಗ ವಿಹ್ವಲನಾಗಿದ್ದ ಅಗಸ್ತ್ಯನನ್ನು ಸಮಾಧಾನಗೊಳಿಸಿ ಬ್ರಹ್ಮನು ಕಾವೇರಿ ಉದ್ಭವಗೊಂಡ ಕಮಂಡಲು ಮೂಲದ ಕುಂಡಿಕೆಯ ಸ್ಥಳದಲ್ಲಿಯೇ ತನ್ನ ತೇಜಸ್ಸನ್ನು ಪಸರಿಸಿ ತೀರ್ಥ ಕೇಂದ್ರವಾಗಿಸಿದನು. ಬಳಿಕ ಅಗಸ್ತ್ಯನೊಂದಿಗೆ ತಿಳಿಸಿ ತನ್ನ ಲೋಕಕ್ಕೆ ತೆರಳಿದನು. ಅಗಸ್ತ್ಯನು ಆ ಕುಂಡಿಕೆಯನ್ನು ಹೀಗೆ ಪ್ರಾರ್ಥಿಸಿದನು;- “ಪಾವನೆಯಾದ ಕುಂಡಿಕೆಯೇ, ಯಾವ ಮಾನವರು ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ಸಮಯದಲ್ಲಿಯಾಗಲಿ, ಇತರ ಕಾಲದಲ್ಲಿಯಾಗಲಿ ಬಂದು ಮಿಂದರೆ ಅವರಿಗೆ ಕೂಡಲೇ ಪುಣ್ಯಪ್ರದಾನ ಮಾಡು. ಅವರ ಪಾಪಗಳು ಬೆಂಕಿಯಲ್ಲಿ ಹತ್ತಿಯ ರಾಶಿಯು ಉರಿದು ಹೋಗುವಂತೆ ನಾಶವಾಗಲಿ” ಎಂದಾಗ ಕುಂಡಿಕೆಯಿಂದ ಪ್ರತಿಧ್ವನಿ ಕೇಳಿಬಂದಿತು. ಇದರಿಂದಾಗಿ ಕಾವೇರಿ ಮೂಲದ ಕುಂಡಿಕೆಯ ಶಕ್ತಿಯು ಬ್ರಹ್ಮಕುಂಡವೆಂದು ಪ್ರಖ್ಯಾತಿ ಹೊಂದಿದಳು. ಲೋಪಾಮುದ್ರೆಯು ಕಾವೇರಿ ನದಿಯಾಗಿ ಪರಿವರ್ತನೆಗೊಂಡು ಹರಿಯುತ್ತಿದ್ದುದನ್ನು ಗಮನಿಸಿದ ಅಗಸ್ತ್ಯನು:-ತಿಷ್ಠ ತಿಷ್ಠ ವರಾರೋಹೇ ಶುದ್ಧೇ ಪಾಪವಿನಾಶಿನಿ, ಮಾಂ ಭಜಸ್ವ ಯಥಾ ಪೂರ್ವಂ ಲೋಪಾಮುದ್ರೇ ಮಮ ಪ್ರಿಯೇ ಭದ್ರೇ, ಕಿಮರ್ಥಂ ಕಲ್ಯಾಣಿ ಮಾಂ ವಿಹಾಯ ವಿನಿರ್ಗತಾ ಸ್ತ್ರಿಯ ಸ್ವಭಾವತಃ ಕ್ರೂರಾಃ ಕಂಚಿದಪ್ಯಸಹಿಷ್ಣವಃ ಯಥಾ ಪೂರ್ವಂ ಭಜೇ ಭದ್ರೇ ಮಮ ಪ್ರಾಣಸ್ಯ ವಲ್ಲಭೇ “ ಎಲೈ, ಸುಂದರಿಯೇ ಹಾಗೂ ಪಾವನಳೇ, ಪಾಪನಾಶಿನಿಯೇ ನಿಲ್ಲು ನಿಲ್ಲು, ಕಲ್ಯಾಣಿಯೇ, ನನ್ನನ್ನು ಬಿಟ್ಟು ಏತಕ್ಕೆ ಹೊರಟಿರುವೆ? ಮಹಿಳೆಯರು ಸ್ವಾಭಾವಿಕವಾಗಿಯೇ ಕಠಿಣ ಮನಸ್ಸಿನವರು. ಅಲ್ಪವಾದ ಅಪರಾಧವನ್ನೂ ಸಹಿಸಲಾರರು. ಪ್ರಾಣಕಾಂತೆಯೇ, ಮೊದಲು ನನ್ನನ್ನು ಸೇರಿಕೊಂಡಿದ್ದಂತೆ ಈಗಲೂ ಇರುವವಳಾಗು” ಎಂದು ಮನೋಭಿಲಾಷೆಯನ್ನು ವ್ಯಕ್ತಪಡಿಸಿದನು. ಈ ಮಾತಿಗೆ ಸ್ಪಂದಿಸಿದ ಆಕೆ “ತಸ್ಯ ತದ್ವಚನಂ ಶ್ರುತ್ವಾ ಲೋಪಾಮುದ್ರಾ ದ್ವಿಧಾಕರೋತ್” ಎರಡು ರೂಪ ತಾಳಿ ದಳು. ಏಕಾಗಸ್ತ್ಯೇನ ಸಹಿತಾ ಲೋಪಾಮುದ್ರೇತಿ ಸಂಜ್ಞಿತಾ, ಕವೇರತನ ಯಾತ್ವಾಚ್ಚ ಕಾವೇರಿತ್ಯ ಪರಾಭವೇತ್- ಲೋಪಾಮುದ್ರೆಯೆಂಬ ಹೆಸರಿನಿಂದ ಮೊದಲನೇ ರೂಪ ದಿಂದ ಅಗಸ್ತ್ಯನ ಬಳಿಯಿದ್ದಳು. ಕವೇರನಿಗೆ ಮಗಳಾಗಿರುವದರಿಂದ ಇನ್ನೊಂದು ರೂಪದಿಂದ ಕಾವೇರಿಯಾದಳು. ಸಮಸ್ತ ಜೀವಿಗಳ ಕಲ್ಯಾಣಕ್ಕಾಗಿ ಕಾವೇರಿಯು ತೀರ್ಥರೂಪವನ್ನು ತಾಳಿದಳು. ಅಷ್ಟರಲ್ಲಿ ಆಕೆಯನ್ನು ಕುರಿತು ಅಗಸ್ತ್ಯನು ಕಾವೇರೀಂ ಪ್ರಾಹ ಸ ಮುನಿರ್ಭದ್ರೇ ಮಾರ್ಗಂ ವದಾಮಿ ತೇ, ಸರ್ವತೀರ್ಥಮಿತೋ ಗಚ್ಛ ಭಾಗಂ ಡಾಖ್ಯಂ ತತೋ ವ್ರಜ, ಸಪ್ತ ಕೋಟೀಶ್ವರಂ ಪಶ್ಚಾತ್ ಹೇಮಯಾ ಸಹ ಸುಂದರಿ, ಕೂಪಾಧಿಪಂ ಹರಂ ಗತ್ವಾ ಹರಿಶ್ಚಂದ್ರಂ ವ್ರಜಾಮಲೇ, ವಲಂಬುರಿಂ ತತೋಗತ್ವಾ ಲವಣೇಶಂ ನಮಸ್ಕುರು, ದುರ್ಗಂ ಗತ್ವಾಥ ಕೌಬೇರಂ ಗಜಾಹ್ವಯಮತಃ ಪರಂ, ಗೋಮುಖೀಂ ಯಾಹಿ ಸುಶ್ರೋಣೀ ಶ್ರೀಪತೇರಾಶ್ರಮಂ ವ್ರಜ, ಮಾರ್ಕಂಡೇಯಾಶ್ರಮಂ ಗತ್ವಾ ಕಪಿಲಂ ಗಚ್ಛ ಸುವ್ರತೇ, ಚಂದ್ರ ಪುಷ್ಕರಣೀಂ ಗತ್ವಾ ಶ್ವೇತಜಂಬ್ವಾಧಿಪಂ ಪುನಃ, ಸಮುದ್ರ ಯಾಹಿ ಕಲ್ಯಾಣಿ ಸರ್ವ ಭೂತ ಹಿತಾಯವೈ, ಶಿವಲಿಂಗಪ್ರತಿಷ್ಠಾಂಚ ತೀರಯೋರುಭಯೋರಪಿ, ಯೋಜನೇ ಯೋಜನೇ ಕೃತ್ವಾ ರಕ್ಷಾರ್ಥಂ ಪೂಜಯಾಮ್ಯಹಂ “ಎಲೈ ಶೋಭನೆಯೇ, ನಾನು ನಿನಗೆ ದಾರಿಯನ್ನು ಹೇಳಿಕೊಡುವೆನು. ಎಲೈ ಸುಂದರಿಯೇ, ಇಲ್ಲಿಂದ ನೀನು ಸರ್ವತೀರ್ಥಕ್ಕೆ ಹೋಗು. ಅಲ್ಲಿಂದ ಭಾಗಂಡ ಕ್ಷೇತ್ರಕ್ಕೆ ಪ್ರಯಾಣ ಮಾಡು. ಬಳಿಕ ಹೇಮೆಯ ಜೊತೆ ಸಪ್ತಕೋಟೇಶ್ವರ ಕ್ಷೇತ್ರಕ್ಕೆ ತೆರಳು. ಎಲೈ, ಪಾವನೆಯೇ, ಕೂಪಸ್ವಾಮಿಯಾದ ಹರನಲ್ಲಿಗೆ ಹೋಗಿ ಹರಿಶ್ಚಂದ್ರಕ್ಕೆ ತೆರಳು. ಅಲ್ಲಿಂದ ವಲಂಬುರಿಗೆ ಹೋಗಿ ಲವಣೇಶನನ್ನು ನಮಸ್ಕರಿಸು. ತರುವಾಯ ಕೌಬೇರ ದುರ್ಗಕ್ಕೆ ಹೋಗಿ ಅಲ್ಲಿಂದ ಗಜಕ್ಷೇತ್ರಕ್ಕೆ ತೆರಳು. ಸೌಂದರ್ಯವತಿಯಾದ ಕಾವೇರಿಯೇ, ಅಲ್ಲಿಂದ ಗೋಮುಖಿಗೂ, ಶ್ರೀಪತಿ ಕ್ಷೇತ್ರಕ್ಕೂ ಹೋಗು, ಸುವ್ರತೆಯೇ,ಅಲ್ಲಿಂದ ಮಾರ್ಕಂಡೇಯನ ಆಶ್ರಮಕ್ಕೆ ಪ್ರಯಾಣ ಮಾಡಿ, ಕಪಿಲನ ಬಳಿಗೆ ಹೋಗು, ತಿರುಗಿ ಚಂದ್ರಪುಷ್ಕರಣಿಗೆ ಪಯಣ ಹೊರಟು ಶ್ವೇತ ಜಂಬೂಸ್ಥಲ ಸ್ವಾಮಿಯ ಸನ್ನಿಧಿಗೆ ತೆರಳು. ಕಲ್ಯಾಣಿಯೇ, ಅನಂತರ ಸಮುದ್ರಕ್ಕೆ ಹೋಗುವವಳಾಗು.ಸಕಲ ಜೀವಿಗಳ ಕಲ್ಯಾಣಕ್ಕಾಗಿಯೂ, ನಿನ್ನ ರಕ್ಷಣೆಗಾಗಿಯೂ ಎರಡು ದಂಡೆಗಳಲ್ಲಿಯೂ ಒಂದೊಂದು ಯೋಜನ ದೂರದಲ್ಲಿ ಶಿವಲಿಂಗಗಳನ್ನು ಪ್ರತಿಷ್ಠೆ ಮಾಡುವೆನು ಎಂದು ಅಗಸ್ತ್ಯನು ನುಡಿದನು. ಅಗಸ್ತ್ಯನು ಹೇಳಿದ ರೀತಿಯಲ್ಲಿಯೇ ಮೊದಲು ಕಾವೇರಿಯು ಭಗಂಡಾಶ್ರಮಕ್ಕೆ ಹೊರಟು ಅಲ್ಲಿಂದ ಅಗಸ್ತ್ಯನು ತಿಳಿಸಿದ್ದ ದಾರಿಯಲ್ಲಿ ಸಾಗಿ ಸಾಗರವನ್ನು ಸೇರಿದಳು.
ಅಗಸ್ತ್ಯೋ ಭಗವಾನ್ ಸಾಕ್ಷಾತ್ ಕುಂಡಿಕಾಯಾಸ್ತಟೇ ಶುಭೇ ಶಿವಪ್ರತಿಷ್ಠಾಮಕರೋತ್ಸರ್ವಭೂತಹಿತೇ ರತಃ, ಯೋಜನೇ ಯೋಜನೇ ಶಂಭುಂ ಸ್ಥಾಪ್ಯ ಯೋಗೀ ಮಹಾತಪಾಃ, ಪೂಜಾಂ ಕೃತ್ವಾಥ ವಿಧಿವಜ್ಜಗಾಮ ಮಲಯಾಚಲಂ ಭಗವಾನ್ ಅಗಸ್ತ್ಯನು ಕುಂಡಿಕೆಯ ಸುಂದರವಾದ ದಂಡೆಯಲ್ಲಿ ಪ್ರತಿಯೊಂದು ಯೋಜನಕ್ಕೂ ಒಂದೊಂದರಂತೆ ಶಿವಲಿಂಗಗಳನ್ನು ಪ್ರತಿಷ್ಠೆ ಮಾಡಿ ವಿಧಿಪ್ರಕಾರ ಪೂಜೆಯನ್ನು ಮಾಡಿ ಬಳಿಕ ಮಲಯ ಪರ್ವತಕ್ಕೆ ಪ್ರಯಾಣ ಮಾಡಿದನು. (ಎರಡನೇ ಅಧ್ಯಾಯ ಮುಗಿಯಿತು. ಎರಡನೇ ಅಧ್ಯಾಯ ದೊಂದಿಗೆ ನಾಲ್ಕನೇ ಹಾಗೂ ಐದನೇ ಅಧ್ಯಾಯದಲ್ಲಿರುವ ಕಾವೇರಿಯು ತೀರ್ಥ ರೂಪಿಣಿಯಾಗಿ ಹರಿಯುವ ಕತೆಗಳ ಕೆಲವು ಅಗತ್ಯ ಅಂಶಗಳನ್ನೂ ಪೂರಕವಾಗಿ ಇಲ್ಲಿ ಸೇರಿಸಿಕೊಳ್ಳಲಾಗಿದೆ. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)