(ವಿಶೇಷ ವರದಿ ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ 2: ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಕಂಡಿದ್ದೇವೆ, ಕೇಳಿದ್ದೇವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಆದರೆ ತಾನೇ ಹೆತ್ತ ಕರುಳಿನ ಕುಡಿಗೆ ಕಷ್ಟದಲ್ಲಿ ಆಸರೆಯಾಗಿ ನಿಲ್ಲಬೇಕಾದ ತಾಯಿ ತನ್ನ ಮಗಳನ್ನು ಬಿಟ್ಟು ತೆರಳಿದವಳು ಇಂದಿಗೂ ಇತ್ತ ಸುಳಿಯಲೇ ಇಲ್ಲ."ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬ ಗಾದೆ ಮಾತಿದೆ ಆದರೆ ಈಕೆಗೆ ಮಾತ್ರ ಈ ಗಾದೆ ಮಾತು ಅನ್ವಯಿಸುದಿಲ್ಲವೆಂಬಂತಿದೆ.

ಗೋಣಿಕೊಪ್ಪಲುವಿನ ಮೂರನೇ ವಿಭಾಗದ ನಿವಾಸಿ ಮುಸ್ತಫಾ ಎಂಬ ಯುವಕನದ್ದು ತುಂಬಿದ ಸಂಸಾರ ಮುಸ್ತಫಾನಿಗೆ ಮನೆಯವರು ಸೇರಿ ಕಳೆದ 15 ವರ್ಷದ ಹಿಂದೆ ವಿವಾಹ ಮಾಡಿಸಿದರು. ಬಡತನದ ಬೇಗೆಯಿಂದಲೇ ಬಂದ ಮುಸ್ತಫಾನ ಸಂಸಾರಕ್ಕೆ ಹೆಣ್ಣು ಮಗಳು ಪದಾರ್ಪಣೆ ಮಾಡಿದಳು. ಹುಟ್ಟುವಾಗಲೇ ವಿಶೇಷಚೇತನೆಯಾಗಿ ಬರುಬರುತ್ತ ಶಾಪವಾಗಿ ಪರಿಣಮಿಸಿತು.

ಹಲವಾರು ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೌದ್ಧಿಕ ಕೊರತೆಯಿಂದ ದಿನ ಕಳೆಯುತ್ತಿದ್ದ ಬಾಲೆ ಇನ್ನು ಸರಿಯಾಗುವದಿಲ್ಲ ಎಂದು ಮನವರಿಕೆ ಯಾಗುತ್ತಿದ್ದಂತೆಯೇ ಹೆತ್ತ ತಾಯಿ ತನ್ನ ಗಂಡ ಹಾಗೂ ಮಗುವನ್ನು ಬಿಟ್ಟು ದೂರದ ಬೆಂಗಳೂರು ಸೇರಿದವಳು ಇಂದಿಗೂ ಇತ್ತ ಸುಳಿಯಲಿಲ್ಲ.

ತನ್ನ ಮಗಳ ಆರೈಕೆಗೆ ಪತ್ನಿ ಸಹಕಾರಿಯಾಗಬಹುದು ಎಂದು ಹಂಬಲದಿಂದ ಕಾಯುತ್ತಿದ್ದ ಪತಿ ಮುಸ್ತಫಾ ಯಾವಾಗ ಪತ್ನಿ ವಾಪಾಸು ಬರಲಾರಳು ಎಂದು ಖಾತ್ರಿಯಾಗುತ್ತಿದ್ದಂತೆಯೇ ಇನ್ನೂ ಕಾದು ಪ್ರಯೋಜನ ಇಲ್ಲವೆಂದು ತಿಳಿದು ತನ್ನ ಮಗಳ ಆರೈಕೆಯನ್ನು ತಾನೇ ನಿರ್ವಹಣೆ ಮಾಡಲು ಆರಂಭಿಸಿ ಇಂದಿಗೆ 11 ವರ್ಷ ತುಂಬಿದೆ. ಮಗಳಿಗೆ ಇದೀಗ 14 ವರ್ಷ ನಡೆಯುತ್ತಿದೆ.

ಅಂಗವಿಕಲ ಕಲ್ಯಾಣ ಇಲಾಖೆಯ ಮಾಸಿಕ ಪಿಂಚಣಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು ಅತ್ಯಲ್ಪ ಪ್ರಮಾಣದಲ್ಲಿ ಬರುವ ಹಣದಿಂದ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೆ ಅನುಕೂಲವಾಗುತ್ತಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ಮುಸ್ತಫಾ ದಿನ ನಿತ್ಯ ಕೂಲಿ ಕೆಲಸಕ್ಕೆ ತೆರಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಮುಂಜಾನೆ ಮಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿ ಸಮೀಪದಲ್ಲಿಯೇ ಸಿಗುವ ಕೆಲಸಕ್ಕೆ ತೆರಳುತ್ತಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ ಆಗಮಿಸಿ ಮಗಳಿಗೆ ಊಟ ಬಡಿಸಿ ಮತ್ತೆ ಆತುರಾತುರಾವಾಗಿಯೇ ಮನೆಯಿಂದ ಹೊರಡುತ್ತಾರೆ. ಸಂಜೆಯ ವೇಳೆಯಲ್ಲಿ ಆಗಮಿಸಿ ಮಗಳಿಗೆ ಸ್ನಾನ ಮಾಡಿಸುವುದರಿಂದಿಡಿದು ಎಲ್ಲಾ ಕೆಲಸಗಳನ್ನೂ ತಾನೇ ನಿಭಾಯಿಸುತ್ತಾ ದಿನ ದೂಡುತ್ತಿದ್ದಾರೆ.

ಬಾಡಿಗೆ ಮನೆಯ ಮಹಡಿಯಲ್ಲಿ ವಾಸಿಸುವ ಮುಸ್ತಫಾ ಮಗಳನ್ನು ಎತ್ತಿಕೊಂಡು ಹೋಗುವುದು, ಇಳಿಸುವ ಸಂದರ್ಭ ಪಡುತ್ತಿರುವ ಕಷ್ಟ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದೆ. ವಯಸ್ಸಿಗೆ ಬಂದ ಮಗಳನ್ನು ಯಾವುದೇ ಅಂಜಿಕೆ ಇಲ್ಲದಂತೆ ಎಲ್ಲವನ್ನು ತಂದೆ ಮುಸ್ತಫಾ ನಿರ್ವಹಣೆ ತಂದೆಯ ಲಾಲನೆ-ಪಾಲನೆಯಲ್ಲಿರುವ ಈ ಬಾಲೆಯ ಸಂಕಷ್ಟ ಅರಿತು ಮಾಧ್ಯಮ ಸ್ಪಂದನ ತಂಡ ತಾತ್ಕಾಲಿಕ ನೆರವು ಒದಿಗಿಸಿದೆ.

ತಾಯಿ ತೊರೆದು ಹೋಗಿರುವ ಮಗಳ ಪಾಲನೆ ಮಾಡುತ್ತಿರುವ ತಂದೆಯ ಒಳ್ಳೆಯತನ ಮತ್ತು ಕುಟುಂಬದ ಸಂಕಷ್ಟವನ್ನು ಮಾಧ್ಯಮ ಸ್ಪಂದನ ತಂಡದ ಎಚ್.ಕೆ. ಜಗದೀಶ್ ಬೆಳಕಿಗೆ ತಂದಿದ್ದರು.

ಕೂಲಿ ಕೆಲಸ ಮಾಡುವ ಇವರಿಗೆ ಕೆಲಸ ಇಲ್ಲದರಿಂದ ಸಮಸ್ಯೆ ಆಗಿತ್ತು. ಮಾಧ್ಯಮ ಸ್ಪಂದನ ತಂಡದ ಕೆ.ಎಸ್. ಸುನೀಲ್ ದಾನಿಗಳ ಮೂಲಕ ಆಹಾರ ಕಿಟ್ ಒದಗಿಸಿದ್ದಾರೆ.ಮಾಡುತ್ತಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಬಾಲೆಯ ಕಷ್ಟದಲ್ಲಿ ಆಗಿಂದಾಗ್ಗೆ ಭಾಗಿಯಾಗುತ್ತಾ ಊಟ, ಬಟ್ಟೆ ನೀಡಿ ಸಹಾಯ ಮಾಡುತ್ತಿದ್ದಾರೆ.

ಮಗಳ ಕೂದಲನ್ನು ಬಾಚುತ್ತಾ, ಮಗಳನ್ನು ನಗಿಸುವ ಪ್ರಯತ್ನ ಮಾಡುವ ತಂದೆ ತನ್ನ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಾರೆ.

ಮುಸ್ತಫಾನ ಸಹಾಯಕ್ಕೆ ದಾನಿಗಳು, ಸಂಘ,ಸಂಸ್ಥೆಗಳು ಮುಂದೆ ಬರಬೇಕು ಕೈಲಾದ ಸಹಾಯ ಹಸ್ತ ನೀಡಿದರೆ ಈ ಹೆಣ್ಣು ಮಗಳಿಗೆ ಸಹಾಯ ಮಾಡಿದಂತಾಗುತ್ತದೆ. ದೇಶಾದ್ಯಂತ ಲಾಕ್‍ಡೌನ್ ಆರಂಭದಿಂದಲೂ ಮುಸ್ತಫಾನಿಗೆ ದಿನನಿತ್ಯದ ಕೂಲಿ ಕೆಲಸವಿಲ್ಲದೆ ಕಷ್ಟದಲ್ಲಿಯೇ ದಿನ ದೂಡುತ್ತ ಅಕ್ಕ ಪಕ್ಕದವರು ನೀಡುವ ಸಹಾಯ ಸ್ವೀಕರಿಸುತ್ತ ಮಗಳ ಆರೈಕೆ ಮುಂದುವರಿಸುತ್ತಿದ್ದಾರೆ.

ಮುಸ್ತಫಾನ ಮೊ.ಸಂಖ್ಯೆ 9341224542