ನಾಳೆಯಿಂದ ಮದ್ಯ ಮಾರಾಟಕ್ಕೆ ಅವಕಾಶ
ಬೆಂಗಳೂರು, ಮೇ 2 : ಸಿಎಲ್-2 ಮತ್ತು ಎಂಎಸ್‍ಐಎಲ್ ಮದ್ಯದ ಮಳಿಗೆಗಳಲ್ಲಿ ತಾ. 4 ರಿಂದ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮದ್ಯದ ಮಳಿಗೆಗಳಲ್ಲಿ ಐದು ಜನ ಗ್ರಾಹಕರು ಮಾತ್ರ ಇರಬೇಕು. ಮದ್ಯ ಖರೀದಿ ಮಾಡವಾಗ 6 ಅಡಿ ಕಡಿಮೆ ಇಲ್ಲದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮದ್ಯದಂಗಡಿಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು, ಮದ್ಯ ಖರೀದಿಸಲು ಬರುವ ಗ್ರಾಹಕರು ಮತ್ತು ಮದ್ಯ ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮದ್ಯದಂಗಡಿಗಳಲ್ಲಿ ಚಾಚೂ ತಪ್ಪದೆ ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕಾಗಿದೆ. ಸಿಎಲ್-2 ಮತ್ತು ಎಂ.ಎಸ್.ಐ.ಎಲ್. ಮದ್ಯದ ಮಳಿಗೆಗಳು ಹೊರತುಪಡಿಸಿ ಮಾಲ್‍ಗಳು ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಅಬಕಾರಿ ಕಾಯ್ದೆ ಆದೇಶ ಮತ್ತು ಅನ್ವಯಿಸುವ ತತ್ಸಂಬಂಧಿತ ನಿಯಮಗಳನ್ನು ಮದ್ಯದ ಮಳಿಗೆಗಳು ಪಾಲಿಸಬೇಕು. ಸರ್ಕಾರದ ಆದೇಶ ಪಾಲನೆಯಾಗುತ್ತಿದೆಯೇ ಎನ್ನುವುದನ್ನು ಅಬಕಾರಿ ಉಪ ಆಯುಕ್ತರು ಪರಿಶೀಲನೆ ಮಾಡಬೇಕು. ಹಾಗೊಂದು ವೇಳೆ ಆದೇಶ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.