ಕೂಡಿಗೆ, ಏ. 2: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಉಳುಮೆ ಮಾಡುವಷ್ಟು ಪ್ರಮಾಣದ ಮುಂಗಾರು ಮಳೆ ಬಿದ್ದಿರುವುದರಿಂದ ಈ ಭಾಗದ ಅನೇಕ ರೈತರು ಕೃಷಿ ಚಟುವಟಿಕೆಗಳಿಗೆ ಉಳುಮೆ ಕೆಲಸ ಪ್ರಾರಂಭ ಮಾಡಿರುತ್ತಾರೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 110ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಮುಂಗಾರು ಮಳೆಯನ್ನು ಅವಲಂಭಿಸಿರುವ ಕೃಷಿ ಭೂಮಿ ಇದೆ.

ಈ ಪ್ರದೇಶವು ಅರೆ ಮಲೆನಾಡು ಪ್ರದೇಶವಾಗಿದು ಹೆಚ್ಚಿನ ಭೂಮಿಯಲ್ಲಿ ಮಣ್ಣಿನ ಅನುಗುಣವಾಗಿ ಮಳೆ ಆಧಾರಿತವಾದ ಬೆಳೆಯನ್ನು ಬೆಳೆಯಲು ಇಲ್ಲಿನ ರೈತರು ಸಿದ್ಧರಾಗಿದ್ದಾರೆ. ಈ ವ್ಯಾಪ್ತಿಯ ಚಿಕ್ಕತ್ತೂರು, ಸಿದ್ದಲಿಂಗಪುರ, ಅಳುವಾರ, 6ನೇ ಹೊಸಕೋಟೆ, ಹಳೆಕೋಟೆ, ಸೀಗೆಹೊಸೂರು, ಹೆಬ್ಬಾಲೆ, ಶಿರಂಗಾಲ ಭಾಗಗಳಲ್ಲಿ ಮುಂದಿನ ತಿಂಗಳುಗಳಲ್ಲಿ ಮುಸುಕಿನ ಜೋಳದ ಬಿತ್ತನೆಗೆ ಸಾವಿರಾರು ಎಕರೆ ಪ್ರದೇಶವನ್ನು ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ

ಈ ಭಾಗದ ರೈತರು ವರ್ಷಂಪ್ರತಿ ಸಾವಿರಾರು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳದ ಬೆಳೆಯನ್ನು ಬೆಳೆದುಕೊಂಡು ನೂರಾರು ಲಾರಿಗಳಷ್ಟು ಲೋಡ್ ಮುಂಬಯಿ ಮತ್ತು ಬೆಂಗಳೂರು ಕೆಲವು ಪಶು ಆಹಾರ ಕಂಪೆನಿಗಳಿಗೆ ಸಾಗಿಸುತ್ತಿದ್ದರು.

ಈ ವ್ಯಾಪ್ತಿಯ ಎಲ್ಲಾ ಸಹಕಾರ ಸಂಘಗಳಲ್ಲಿ ವಿವಿಧ ಕಂಪೆನಿಯ ರಸಗೊಬ್ಬರ, ಸಾವಯುವ ಗೊಬ್ಬರ, ಸುಣ್ಣ ಸೇರಿದಂತೆ ಹಲವಾರು ಬಗೆಯ ಜೋಳ ಬೀಜ ಮತ್ತು ಔಷಧಿಗಳ ಸಂಗ್ರಹ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಮುಚ್ಚಲ್ಪಟ್ಟಿದ ಎಲ್ಲಾ ಸಹಕಾರ ಸಂಘಗಳ ಕೃಷಿ ಉಪಕರಣದ ಮಳಿಗೆಗಳು ಮತ್ತು ಆಯಾ ಊರಿನ ಕೃಷಿ ಸಂಬಂಧಿಸಿದ ಅಂಗಡಿಗಳಲ್ಲಿ ಬಿತ್ತನೆ ಬೀಜಗಳ ಮಾರಾಟ ಮಾಡಲು ಅನುಕೂಲವಾಗುವಂತೆ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ಅಧಿಕಾರಿಗಳು ಕೃಷಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಉತ್ತಮವಾದ ಬೀಜಗಳನ್ನು ಮಾರಾಟ ಮಾಡುವಂತೆ ಸೂಚನೆ ನೀಡಿರುತ್ತಾರೆ.

-ಕೆ.ಕೆ. ನಾಗರಾಜಶೆಟ್ಟಿ