ಮಡಿಕೇರಿ, ಮೇ 2: ಸಹಕಾರ ಸಂಘಗಳ ಮೂಲಕ ರೈತರು ಪಡೆದಿರುವ ಸಾಲದ ಮರು ಪಾವತಿ ಹಾಗೂ ಹೊಸ ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಾರ್ಚ್ 30 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಈತನಕ ಡಿಸಿಸಿ ಬ್ಯಾಂಕ್‍ಗಳು ಹಾಗೂ ಸಹಕಾರ ಸಂಘಗಳ ಮನವಿಯಂತೆ ಇನ್ನೂ ಯಾವುದೇ ಪರಿಷ್ಕøತ ಆದೇಶ-ಮಾರ್ಗಸೂಚಿ ಹೊರಬಿದ್ದಿಲ್ಲ.
ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಮಾರ್ಚ್ 30 ರಂದು ಸರಕಾರ ಹೊರಡಿಸಿರುವ ಸುತ್ತೋಲೆಯಲ್ಲಿನ ಮಾರ್ಗಸೂಚಿಯನ್ನೇ ಅನುಸರಿಸುವಂತೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮೂಲಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಏ. 30 ರಂದು ಡಿಸಿಸಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ಸಂಘಗಳಿಗೆ ಸುತ್ತೋಲೆ ರವಾನಿಸಿದ್ದಾರೆ.ಇತ್ತೀಚೆಗೆ ರಾಜ್ಯ ಸರಕಾರವು ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಣೆಗೆ ಸಂಬಂಧಿಸಿದಂತೆ 30.3.2020 ರಂದು ಹೊಸ ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ಸೂಚಿಸಿದ್ದ ಹಲವು ಷರತ್ತುಗಳಿಂದಾಗಿ ರೈತರಿಗೆ ಭಾರೀ ತೊಂದರೆಯಾಗಲಿದೆ ಎಂಬ ಕಾರಣದಿಂದಾಗಿ ಇದಕ್ಕೆ ಆಕ್ಷೇಪ ವ್ಯಕ್ತಗೊಂಡಿತ್ತು. ಈ ಬಗ್ಗೆ ಬಂದ ಒತ್ತಡಗಳ ಹಿನ್ನೆಲೆಯಲ್ಲಿ ಸದರಿ ಆದೇಶವನ್ನು ಹಿಂಪಡೆದು ಇದನ್ನು ಪರಿಷ್ಕøತಗೊಳಿಸುವಂತೆ ಡಿಸಿಸಿ ಬ್ಯಾಂಕ್‍ನ ಮೂಲಕ ಸಹಕಾರ ಸಚಿವರು ಸೇರಿದಂತೆ ಸರಕಾರಕ್ಕೆ ಮನವಿ ಮಾಡಲಾಗಿತ್ತು.
ಶಾಸಕ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ವಿಶೇಷವಾಗಿ ಗಮನ ಸೆಳೆದಿದ್ದು, ಸಹಕಾರ ಸಚಿವರು ಹಿಂದಿನ ಆದೇಶ ವಾಪಸ್ಸು ಪಡೆದು ಪರಿಷ್ಕøತ ಮಾರ್ಗ ಸೂಚಿ ಹೊರಡಿಸುವ ಭರವಸೆ ನೀಡಿದ್ದ ಕುರಿತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾಹಿತಿ ನೀಡಿದ್ದರು.
ಆದರೆ ಇದೀಗ ಏಪ್ರಿಲ್ ಕಳೆದರೂ ಸರಕಾರದಿಂದ ಯಾವುದೇ ಪರಿಷ್ಕøತ ಮಾರ್ಗಸೂಚಿ ಬಂದಿಲ್ಲ. ಈ ಕಾರಣದಿಂದಾಗಿ ಇದೀಗ ಡಿಸಿಸಿ ಬ್ಯಾಂಕ್ ಸರಕಾರದ ಹಿಂದಿನ (ಮಾ. 30) ಮಾರ್ಗಸೂಚಿ ಪಾಲನೆಗೆ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ಪ್ರಮುಖ ಸಮಸ್ಯೆಗಳೇನು...?
* ಮಾ. 30ರ ಸುತ್ತೋಲೆಯಂತೆ ಒಂದು ಕುಟುಂಬಕ್ಕೆ ಗರಿಷ್ಠ ರೂ. 3 ಲಕ್ಷದವರೆಗೆ ಮಾತ್ರ ಬಡ್ಡಿ ವಿನಾಯಿತಿ ಸೌಲಭ್ಯ ಸಿಗಲಿದೆ. ಇದು ಈ ಹಿಂದೆ ಸದಸ್ಯರೆಲ್ಲರಿಗೂ ಸಿಗುತ್ತಿತು.
* ಸಾಲ ಪಡೆದ ರೈತ ಸರಕಾರಿ / ಸರಕಾರಿ ಸೌಮ್ಯದ ಸಂಸ್ಥೆಗಳಲ್ಲಿ ನೌಕರರನಾಗಿದ್ದು, ಮಾಸಿಕ ರೂ. 20,000 ವೇತನ / ಪಿಂಚಣಿ ಪಡೆಯುತ್ತಿರುವ ಅಥವಾ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಬಡ್ಡಿ ಪ್ರೋತ್ಸಾಹ ಧನ ದೊರೆಯುವುದಿಲ್ಲ.
* ಸಹಕಾರ ಸಂಘಗಳು ರೈತರಿಗೆ ಕೇಂದ್ರದ ಮಾನದಂಡದಂತೆ ಶೇ. 7ರ ಬಡ್ಡಿ ದರದಲ್ಲಿ ಸಾಲ ವಿತರಿಸಬೇಕು.
* ಕೆಲವು ಸೌಲಭ್ಯಕ್ಕೆ ಆಧಾರ್ ಪಡೆಯುವುದು ಕಡ್ಡಾಯವಾಗಲಿದೆ.
* ರೈತರು ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸ ಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಪ್ರೋತ್ಸಾಹ ಧನ ಅನ್ವಯವಾಗಲಿದೆ.
* ಭೂ ಮಾಲೀಕತ್ವ ಯಾವುದೇ ವ್ಯಕ್ತಿಯ ಹೆಸರಿನಲ್ಲಿದ್ದರೂ ಸಹ ಪಹಣಿಯಲ್ಲಿ ಸಾಗುವಳಿದಾರನ ಹೆಸರು ಬೇರೆ ಇದ್ದರೆ ಅಂತಹ ಪ್ರಕರಣಗಳಲ್ಲಿ ಭೂ ಮಾಲೀಕತ್ವ ಹೊಂದಿರುವ ವ್ಯಕ್ತಿಗೆ ಸಾಲ ವಿತರಿಸತಕ್ಕದ್ದಲ್ಲ.
* ಸ್ಕೇಲ್ ಆಫ್ ಫೈನಾನ್ಸ್ ಮತ್ತು ಬೆಳೆ ವಿಮೆ ಆಧಾರದ ಮೇಲೆ ಮಂಜೂರಾದ ಸಾಲದ ಮಿತಿಗೆ ಮಾತ್ರ ಬಡ್ಡಿ ರಿಯಾಯಿತಿ ಅನ್ವಯವಾಗಲಿದೆ.