ಮಡಿಕೇರಿ, ಮೇ 2 : ಆರು ದಶಕಗಳ ಹಿಂದೆ ಅಂದಿನ ಕೊಡಗು ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ದೊಂದಿಗೆ ಗ್ರಾಮಸ್ಥರ ಜಾನುವಾರು ಗಳಿಗಾಗಿ ಮಂಜೂರುಗೊಳಿಸಿದ್ದ 89.06 ಎಕರೆ ಗೋಮಾಳ ಜಾಗವನ್ನು ಗ್ರಾಮಸ್ಥರ ವಿರೋಧದ ನಡುವೆಯೂ ಇತ್ತೀಚೆಗಿನ ಕೆಲವು ಅಧಿಕಾರಿಗಳು ಅನ್ಯ ಉದ್ದೇಶಗಳಿಗೆ ಬಳಸುವದರೊಂದಿಗೆ ಇತರರಿಗೆ ಮಂಜೂರು ಗೊಳಿಸುತ್ತಿರು ವದಾಗಿ ಅಸಮಾಧಾನ ಕೇಳಿ ಬರುತ್ತಿದೆ.ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 315/1ರಲ್ಲಿ 89.06 ಎಕರೆ ಜಮೀನನ್ನು ಅಂದಿನ ಜಿಲ್ಲಾಧಿಕಾರಿಗಳು, ಬಾಳುಗೋಡು, ಬೇಟೋಳಿ, ಆರ್ಜಿ ಗ್ರಾಮಸ್ಥರ ಬೇಡಿಕೆಯಂತೆ ಗೋಮಾಳ ಜಾಗವಾಗಿ ಮಂಜೂರುಗೊಳಿಸಿದ್ದು, ಈ ಜಾಗ ಇತ್ತೀಚಿನ ತನಕವೂ ಉಳಿದುಕೊಂಡು ಬಂದಿದೆ. (ಮೊದಲ ಪುಟದಿಂದ) ಅನಂತರದಲ್ಲಿ ಕೆಲವು ಅಧಿಕಾರಿಗಳು ಈ ಜಾಗವನ್ನು ಖಾಸಗಿ ಮಂದಿಗೆ ವಿಂಗಡಿಸಿ ಹಂಚಲು ಮುಂದಾಗಿದ್ದಾರೆ. ಆದರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಜಾನುವಾರುಗಳ ಮೇವಿಗಾಗಿ ಕಾಯ್ದಿರಿಸಿರುವ ಗೋಮಾಳ ಅನ್ಯ ಉದ್ದೇಶಗಳಿಗೆ ಪರಭಾರೆ ಮಾಡದಂತೆ ಆಕ್ಷೇಪಿಸಿದ್ದಾರೆ. ಅಲ್ಲದೆ, ಈ ಸಂಬಂಧ ಗೋಮಾಳ ಜಾಗ ರಕ್ಷಣಾ ಸಮಿತಿ ಮುಖಾಂತರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ, ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಅಧಿಕಾರಿಗಳು, ಪ್ರಸ್ತುತ 89.06 ಎಕರೆ ಜಾಗದಲ್ಲಿ ವಿವಿಧ ಉದ್ದೇಶಗಳಿಗೆ ವಿಂಗಡಿಸಿ ಹಂಚಿಕೆ ಮಾಡಿದ್ದು, ಉಳಿಗೆ ಜಾಗ 47.4 ಎಕರೆಯಷ್ಟು ಮಾತ್ರ ಖಾಲಿ ಇರುವದಾಗಿ ಪ್ರಮಾಣಪತ್ರ ನೀಡಿದ್ದಾರೆ. 2016ರಲ್ಲಿ ಈ ವೇಳೆ ಅಧಿಕಾರಿಗಳಿಗೆ ಮರು ನಿರ್ದೇಶನ ನೀಡಿರುವ ನ್ಯಾಯಾಲಯ ಖಾಲಿ ಜಾಗದೊಂದಿಗೆ ಅತಿಕ್ರಮಣ ತೆರವಿಗೂ ಆದೇಶಿಸಿರುವದು ಕಂಡುಬರುತ್ತದೆ.

ಈ ಆದೇಶ ಹೊರಬಿದ್ದ ಬಳಿಕವೂ ಕೆಲವು ಇಲಾಖೆಗಳಿಂದ ಜಾಗವನ್ನು ಸರಕಾರಿ ಕಟ್ಟಡ ಹಾಗೂ ಖಾಸಗಿ ಮಂದಿಗೆ ಹಂಚಿಕೆ ಮಾಡುವ ಯತ್ನ ನಡೆದಿದ್ದು, ಇದು ನ್ಯಾಯಾಂಗ ನಿಂದನೆ ಎಂದು ತೆರ್ಮೆಕಾಡು ಗೋಮಾಳ ಜಾಗ ಸಂರಕ್ಷಣಾ ಸಮಿತಿಯ ಪ್ರಮುಖರು ಟೀಕಿಸಿದ್ದಾರೆ. ಅಲ್ಲದೆ ಕಳೆದ ಆರು ದಶಕಗಳಿಂದ ಗೋಮಾಳವಾಗಿ ಉಳಿಸಿಕೊಂಡು ಬಂದಿರುವ ಜಾಗವನ್ನು ಯಥಾಸ್ಥಿತಿ ಉಳಿಸುವಂತೆ ಆಗ್ರಹಿಸಿದ್ದು, ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸು ವದಾಗಿ ಎಚ್ಚರಿಸಿದ್ದಾರೆ.