ಮಡಿಕೇರಿ, ಮೇ 2: ಹಸಿರು ಪ್ರದೇಶವಾಗಿ ಇತ್ತೀಚೆಗಷ್ಟೆ ಘೋಷಿಸಲ್ಪಟ್ಟ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ತವರು ಪ್ರದೇಶಕ್ಕೆ ಮರಳುವಿಕೆ ಕಾರ್ಯಕ್ಕೆ ಇದೀಗ ಚಾಲನೆ ದೊರೆತಿದೆ.ಲಾಕ್ಡೌನ್ ಸಡಿಲಿಕೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಲಸೆ ಕಾರ್ಮಿಕರಿಗೂ ಕೂಡ ಅವರ ಪ್ರದೇಶಗಳಿಗೆ ತೆರಳಲು ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇದೀಗ ಆ ಪ್ರಕ್ರಿಯೆ ಚುರುಕುಗೊಂಡಿದೆ.ಈ ನಡುವೆ ಜಿಲ್ಲೆಯಲ್ಲಿ ಸಿಲುಕಿರುವ ಇತರ ರಾಜ್ಯ, ಜಿಲ್ಲೆಗಳ ಜನರು ಮತ್ತು ಹೊರ ಜಿಲ್ಲೆ, ರಾಜ್ಯಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರವರ ಸ್ವಂತ ಊರುಗಳಿಗೆ ತೆರಳಲು ಅಥವಾ ಹಿಂತಿರುಗುವಾಗ ಆರೋಗ್ಯ ತಪಾಸಣೆ ನಡೆಸಲು ಕುಶಾಲನಗರ ಕೊಪ್ಪ ಚೆಕ್ ಪೋಸ್ಟ್ ಬಳಿ ತೆರೆಯಲಾಗಿರುವ ತಪಾಸಣಾ ಕೇಂದ್ರ ಹಾಗೂ ಚೆಕ್ ಪೋಸ್ಟ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ. ಸುಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾ ಕಾರ್ಮಿಕ ಇಲಾಖೆಯು ತಾಲೂಕು ತಹಶೀಲ್ದಾರ್ಗಳ ಸಹಕಾರ ದೊಂದಿಗೆ ವಲಸೆ ಕಾರ್ಮಿಕರನ್ನು ಗುರುತು ಹಚ್ಚಿ ಆನ್ಲೈನ್ನಲ್ಲಿ ಅವರ ಹೆಸರುಗಳು ನೋಂದಾಯಿಸುವ ಕಾರ್ಯ ಇದೀಗ ಭರದಿಂದ ಸಾಗಿದೆ. ಅಲ್ಲದೆ ಅಂತರ ಜಿಲ್ಲಾ ಮಟ್ಟದ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಜಿಲ್ಲಾ ಉಪವಿಭಾಗಾ ಧಿಕಾರಿ ಕಚೇರಿಯಲ್ಲಿ ತ್ವರಿತ ಕಾರ್ಯಕೈಗೊಳ್ಳಲಾಗಿದೆ.
‘ಶಕ್ತಿ’ಗೆ ಮೂಲವೊಂದರಿಂದ ತಿಳಿದು ಬಂದಂತೆ ಜಿಲ್ಲೆಯಲ್ಲಿ ಸುಮಾರು 1,900 ಮಂದಿ ವಲಸೆ ಕಾರ್ಮಿಕರಿರುವುದು ಪತ್ತೆಯಾಗಿದೆ. ಈಗಾಗಲೇ ಆರಂಭಿಕ ಹಂತದಲ್ಲಿ ಸುಮಾರು 900 ಮಂದಿ ತಮ್ಮ ಊರುಗಳಿಗೆ ತೆರಳಲು ಉತ್ಸುಕರಾಗಿ ನೋಂದಾವಣಾ ಪ್ರಕ್ರಿಯೆಗೆ ಒಳಪಟ್ಟಿರುವುದು ಗೊತ್ತಾಗಿದೆ. ಆಶ್ಚರ್ಯವೆಂದರೆ ಒಟ್ಟು ವಲಸೆ ಕಾರ್ಮಿಕರ ಪೈಕಿ ಶೇ. 70 ರಷ್ಟು ಮಂದಿ ಅಂತರರಾಜ್ಯದಿಂದ ಬಂದವರಾಗಿದ್ದು, ಶೇ. 30 ಮಂದಿ ಮಾತ್ರ ಅಂತರ ಜಿಲ್ಲೆಗಳಿಂದ ಬಂದವರೆಂದು ತಿಳಿದು ಬಂದಿದೆ.
ಅಂತರರಾಜ್ಯಗಳ ಪೈಕಿ ಬಹುತೇಕ ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮಬಂಗಾಳ, ಕೇರಳ ಹಾಗೂ ಅಸ್ಸಾಂಗಳಿಂದ ಬಂದವ ರಾಗಿದ್ದಾರೆ. ಅಂತರ ಜಿಲ್ಲೆಗಳ ಪೈಕಿ ಬೆಂಗಳೂರು, ಮೈಸೂರು, ಮಂಡ್ಯ, ರಾಯಚೂರು, ಚಾಮರಾಜನಗರ, ಬಳ್ಳಾರಿ, ಬಿಜಾಪುರ ಜಿಲ್ಲೆಗಳಿಂದ ಬಂದವರೇ ಬಹುತೇಕರಾಗಿದ್ದಾರೆ.
ಜಿಲ್ಲಾ ಹಿರಿಯ ಕಾರ್ಮಿಕಾಧಿಕಾರಿ ಎಂ.ಎಂ. ಯತ್ನಟ್ಟಿ ಅವರ ಪ್ರಕಾರ ವಲಸೆ ಕಾರ್ಮಿಕರ ಪೈಕಿ ಕಟ್ಟಡ ಕಾರ್ಮಿಕರೆ ಅಲ್ಲದೆ ತೋಟ ಕಾರ್ಮಿಕರೂ ಇದ್ದಾರೆ.
ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರ ಪ್ರಕಾರ ಸದ್ಯದ ಮಟ್ಟಿಗೆ ಅಂತರ ಜಿಲ್ಲಾ ಪ್ರಯಾಣಕ್ಕೆ ವಲಸೆ ಕಾರ್ಮಿಕರ ವೆಚ್ಚವನ್ನು ಆಯಾ ಗುತ್ತಿಗೆದಾರರೆ ಭರಿಸಬೇಕಾಗಿದೆ. ಅಂತರ ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಯವರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
‘ಶಕ್ತಿ’ಗೆ ತಿಳಿದು ಬಂದ ಪ್ರಕರಣವೊಂದರಲ್ಲಿ ಕೊಪ್ಪಳ ಜಿಲ್ಲೆಗೆ ಕೊಡಗಿನಿಂದ ತೆರಳಬೇಕಾದ ಕಾರ್ಮಿಕರ ಪೈಕಿ 20 ಮಂದಿ ಹಾಗೂ ಚಾಲಕ ಸೇರಿದಂತೆ 21 ಮಂದಿಗೆ ಗುತ್ತಿಗೆದಾರ ರೂ. 54 ಸಾವಿರ ಬಸ್ ಶುಲ್ಕ ಪಾವತಿಸುವ ಅನಿವಾರ್ಯತೆ ಉಂಟಾಗಿದೆ. ಬಸ್ನ ಆಸನ ಸಾಮಥ್ರ್ಯ 55 ಆದರೆ ಲಾಕ್ಡೌನ್ ನಿಯಮದಂತೆ ಶೇ. 40 ರಷ್ಟು ಮಾತ್ರ ಪ್ರಯಾಣಿಕರು ತೆರಳಬಹುದಾಗಿದೆ. ಚಾಲಕ ಸೇರಿದಂತೆ 21 ಮಂದಿಗೆ ಮಾತ್ರ ಅವಕಾಶವಿದ್ದು, ಇದರಿಂದಾಗಿ ಪ್ರಯಾಣದರ ದುಬಾರಿಯಾಗುತ್ತದೆ. ಗುತ್ತಿಗೆದಾರರು, ತೋಟ ಮಾಲೀಕರು ವೆಚ್ಚ ಭರಿಸದಿದ್ದರೆ (ಮೊದಲ ಪುಟದಿಂದ) ಕಾರ್ಮಿಕರೆ ತಮ್ಮ ಪ್ರಯಾಣ ವೆಚ್ಚವನ್ನು ಭರಿಸುವುದು ಅನಿವಾರ್ಯವೆನಿಸಿದೆ.
ಈಗಾಗಲೇ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸುಮಾರು 22 ಮಂದಿ ವಲಸೆ ಕಾರ್ಮಿಕರನ್ನು ಅಂತರ ಜಿಲ್ಲೆಗಳಿಗೆ ಕಳುಹಿಸಲು ಸಫಲರಾಗಿರುವುದು ‘ಶಕ್ತಿ’ಯ ಗಮನಕ್ಕೆ ಬಂದಿದೆ.
ಮಡಿಕೇರಿ ತಾಲೂಕಿನಲ್ಲಿ ಈಗಾಗಲೇ ಅಂತರರಾಜ್ಯ ವಲಸೆ ಕಾರ್ಮಿಕರ
ಪೈಕಿ 487 ಮಂದಿಯನ್ನು ಗುರುತಿಸಿ ನೋಂದಾಯಿಸಲಾಗಿದೆ. 217 ಮಂದಿ ಅಂತರ್ ಜಿಲ್ಲಾ ವಲಸೆ ಕಾರ್ಮಿಕರು ನೋಂದಾಯಿ ಸಲ್ಪಟ್ಟಿದ್ದಾರೆ. ಇದು ಗ್ರಾಮಾಂತರ ಪ್ರದೇಶಗಳದ್ದಾಗಿದ್ದರೆ, ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ 40 ಮಂದಿ ಅಂತರ ಜಿಲ್ಲಾ ಪ್ರಯಾಣಕ್ಕೆ ಹಾಗೂ 280 ಮಂದಿ ಅಂತರರಾಜ್ಯ ಪ್ರಯಾಣಕ್ಕೆ ನೊಂದಾಯಿಸಲ್ಪಟ್ಟಿದ್ದಾರೆ.
ವೀರಾಜಪೇಟೆ ವರದಿ
ಕಾರ್ಮಿಕರಾಗಿ ದುಡಿಯಲು ಕೊಡಗಿಗೆ ವಲಸೆ ಬಂದಿದ್ದು ಲಾಕ್ಡೌನ್ ನಂತರ ಕೊಡಗಿನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಮಾಹಿತಿ ಪಡೆದು ನೋಂದಾಯಿಸಲು ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಬೆಳಿಗ್ಗೆ ಕಾರ್ಯಾರಂಭ ಮಾಡ ಲಾಯಿತು. ಅಪರಾಹ್ನ 4ಗಂಟೆಯವರೆಗೆ ಸುಮಾರು 34 ಮಂದಿ ಕಾರ್ಮಿಕರುಗಳು ನೋಂದಾ ಯಿಸಿಕೊಂಡು ಮಾಹಿತಿಯನ್ನು ನೀಡಿದ್ದಾರೆ.
ಸರಕಾರದ ಆದೇಶದಂತೆ ವೀರಾಜಪೇಟೆ ತಾಲೂಕಿನ ವಿವಿಧೆಡೆಗಳ ಗ್ರಾಮ ಪಂಚಾಯಿತಿಗಳಲ್ಲಿ ಹೊರ ರಾಜ್ಯದÀ ಕಾರ್ಮಿಕರುಗಳ ಕುರಿತು ಮಾಹಿತಿ ಹಾಗೂ ನೋಂದಾವಣೆ ಇಂದಿನಿಂದ ಆರಂಭವಾಗಿದೆ. ಇಂದಿನ ತನಕ ಒಟ್ಟು 1424 ಮಂದಿ ಕಾರ್ಮಿಕರ ಮಾಹಿತಿ ದೊರೆತಿದೆ. ಸರಕಾರದ ಆದೇಶದಂತೆ ಅವರುಗಳ ಬೇಡಿಕೆಯ ಮೇರೆಗೆ ಅವರ ವೆಚ್ಚದಲ್ಲಿ ಅವರನ್ನು ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ತವರಿಗೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಕಳಿಸಲಾಗುವುದು. ದಕ್ಷಿಣ ಕೊಡಗಿನಲ್ಲಿ ಈ ಹಿಂದೆಯ ಹೊರ ರಾಜ್ಯದ ಕಾರ್ಮಿಕರುಗಳ ಮಾಹಿತಿ ಪ್ರಕಾರ 1657 ಮಂದಿ ಕಾರ್ಮಿಕರುಗಳಿದ್ದು ಎಲ್ಲರಿಗೂ ಎರಡನೇ ಬಾರಿಗೆ ಆಹಾರ ಕಿಟ್ ಒದಗಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಎಲ್. ನಂದೀಶ್ ತಿಳಿಸಿದರು.
ಹೊರ ರಾಜ್ಯಗಳಾದ ಬಿಹಾರ್, ಒರಿಸ್ಸಾ, ಜಾರ್ಖಂಡ್, ಗುಜರಾತ್, ರಾಜಸ್ತಾನ ಸೇರಿದಂತೆ ಉತ್ತರ ಭಾರತದ ವಿವಿಧ ಸ್ಥಳಗಳಿಂದ ಕೊಡಗಿಗೆ ಕಾರ್ಮಿಕರುಗಳು ವಲಸೆ ಬಂದಿರುವುದಾಗಿ ಮಾಹಿತಿಯಿಂದ ಗೊತ್ತಾಗಿದೆ.
ಸೋಮವಾರಪೇಟೆ ವರದಿ
ಸೋಮವಾರಪೇಟೆ ತಾಲೂಕಿನಿಂದ ಹೊರ ರಾಜ್ಯಕ್ಕೆ ತೆರಳಲು ಈಗಾಗಲೇ 1186 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಸೋಮವಾರಪೇಟೆಯಿಂದ ತಮಿಳುನಾಡಿಗೆ ತೆರಳಲು 990 ಮಂದಿ, ಅಸ್ಸಾಂಗೆ 57, ಬಿಹಾರಕ್ಕೆ 62, ಕೇರಳಕ್ಕೆ 51, ಮಧ್ಯಪ್ರದೇಶಕ್ಕೆ 9, ಪಶ್ಚಿಮಬಂಗಾಳಕ್ಕೆ 64, ಉತ್ತರ ಪ್ರದೇಶಕ್ಕೆ 23, ಒರಿಸ್ಸಾಕ್ಕೆ 6, ಆಂದ್ರಪ್ರದೇಶಕ್ಕೆ 25, ಮಹಾರಾಷ್ಟ್ರಕ್ಕೆ 4, ಜಾರ್ಖಂಡ್ಗೆ 12 ಮಂದಿ ತೆರಳಲು ಈಗಾಗಲೇ ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಹೋಬಳಿವಾರು ಅಂಕಿ ಅಂಶಗಳ ಪ್ರಕಾರ ಸುಂಟಿಕೊಪ್ಪ ಹೋಬಳಿಯಿಂದಲೇ 771 ಮಂದಿ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ಕೋರಿದ್ದು, ಕುಶಾಲನಗರದಿಂದ 83, ಸೋಮವಾರಪೇಟೆ ಕಸಾಬ ಹೋಬಳಿ ವ್ಯಾಪ್ತಿಯಿಂದ 125, ಶಾಂತಳ್ಳಿಯಿಂದ 74, ಕೊಡ್ಲಿಪೇಟೆಯಿಂದ 36, ಶನಿವಾರಸಂತೆಯಿಂದ 195 ಮಂದಿ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ತಾ. 2.5.2020ರ ಸಂಜೆ ವೇಳೆಗೆ ಒಟ್ಟಾರೆಯಾಗಿ 1186 ಮಂದಿ ಹೊರ ರಾಜ್ಯದವರು ಪಾಸ್ಗಾಗಿ ಕಾಯುತ್ತಿದ್ದಾರೆ.
ಹೊರರಾಜ್ಯಕ್ಕೆ ತೆರಳುವ ಮಂದಿಯ ಮಾಹಿತಿಯನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಧಾನಸೌಧಕ್ಕೆ ಮಾಹಿತಿ ರವಾನೆಯಾಗಿದೆ. ರಾಜ್ಯ ಸರ್ಕಾರ ನಿಯೋಜಿಸಿರುವ ನೋಡಲ್ ಅಧಿಕಾರಿಗಳಾದ ಅರುಣ್ ಚಕ್ರವರ್ತಿ ಮತ್ತು ರಾಜಕುಮಾರ್ ಖತ್ರಿ ಅವರುಗಳು ಆಯಾ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ, ಆ ಸರ್ಕಾರಗಳಿಂದ ಅನುಮತಿ ಪಡೆದ ನಂತರ ರಾಜ್ಯದಿಂದ ಹೊರತೆರಳಲು ಅವಕಾಶ ಕಲ್ಪಿಸಲಾಗುತ್ತದೆ.
ಹೊರ ರಾಜ್ಯ, ಜಿಲ್ಲೆಗಳಿಗೆ ತೆರಳುವ ಕಾರ್ಮಿಕರಿಗೆ ಆಯಾ ತೋಟಗಳ ಮಾಲೀಕರು ಅಥವಾ ಗುತ್ತಿಗೆದಾರರೇ ಅರ್ಜಿ ಸಲ್ಲಿಸಿ, ವಾಹನದ ವ್ಯವಸ್ಥೆ ಕಲ್ಪಿಸಿ ಪಾಸ್ಗಾಗಿ ಕಾಯುತ್ತಿದ್ದು, ಸರ್ಕಾರದಿಂದ ಅನುಮತಿ ಬಂದ ನಂತರ ಇಲ್ಲಿಂದ ತೆರಳಲು ಅನುಮತಿ ನೀಡಲಾಗುತ್ತದೆ.
ಇನ್ನು ಹೊರ ಜಿಲ್ಲೆಗೆ ತೆರಳುವವರು ಪ್ರಾರಂಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಮ್ಮ ವಾಹನದ ಸಂಪೂರ್ಣ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ನಂತರ ಪಿಡಿಓ ಅವರು ಶೇ .40 ರಷ್ಟು ಪ್ರಯಾಣಿಕರ ಸಾಗಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿ, ಅರ್ಜಿದಾರರ ಅರ್ಜಿಯನ್ನು ದೃಡೀಕರಿಸಬೇಕು.
ನಂತರ ಆಯಾ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ‘ಫೀವರ್ ಟೆಸ್ಟ್’ ಮಾಡಿಸಿ, ತಾಲೂಕು ಆರೋಗ್ಯಾಧಿಕಾರಿಗಳ ಮೇಲು ಸಹಿಯೊಂದಿಗೆ ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಇದನ್ನು ತಹಶೀಲ್ದಾರ್ ದೃಢೀಕರಿಸಿ ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿ, ಪಾಸ್ ವಿತರಿಸಲು ಶಿಫಾರಸ್ಸು ಮಾಡಬೇಕು. ಅಲ್ಲಿಂದ ಪಾಸ್ ಬಂದ ನಂತರ ಕಂದಾಯ ಪರಿವೀಕ್ಷಕರು ವಾಹನದ ಸಂಖ್ಯೆ, ದಾಖಲಾತಿ, ಸಾಮಾಜಿಕ ಅಂತರವನ್ನು ಪರಿಶೀಲಿಸಿ, ದೃಢಿಕರಿಸಿ ಇಲ್ಲಿಂದ ತೆರಳಲು ಅನುಮತಿ ನೀಡಬೇಕಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಶಕ್ತಿ’ಗೆ ತಿಳಿಸಿದ್ದಾರೆ.
ಈಗಾಗಲೇ ತಾಲೂಕಿನಿಂದ ಹೊರ ಜಿಲ್ಲೆಗೆ ತೆರಳಲು 361 ಮಂದಿ ಅರ್ಜಿ ಸಲ್ಲಿಸಿದ್ದಾರೆ. ತಾಲೂಕಿನಿಂದ ಹಾವೇರಿಗೆ ತೆರಳಲು 17, ರಾಯಚೂರಿಗೆ 18, ಬಳ್ಳಾರಿಗೆ 125, ಚಾಮರಾಜನಗರಕ್ಕೆ 174, ದಾವಣಗೆರೆಗೆ 8, ಚಿಕ್ಕಮಗಳೂರಿಗೆ 6, ಬಿಜಾಪುರಕ್ಕೆ 3, ಬೆಳಗಾಂಗೆ 10 ಮಂದಿ ತೆರಳಲು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಬಹುತೇಕ ಮಂದಿಗೆ ಪಾಸ್ ವಿತರಿಸಲಾಗಿದೆ.
ಅಂತೆಯೇ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ, ಕಂಪೆನಿ ಸೇರಿದಂತೆ ಖಾಸಗಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂದಿ ಇದೀಗ ವಾಪಸ್ ತೆರಳಲು ಮುಂದಾಗುತ್ತಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.