ಶ್ರೀಮಂಗಲ, ಮೇ 2: ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ಗುಂಡು ಹೊಡೆದುಕೊಂಡು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಫಿ ಬೆಳೆಗಾರ ದಿವಂಗತ ಬಯವಂಡ ಲಕ್ಷ್ಮಣ ಅವರ ಪತ್ನಿ ತಾರಾ (70) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಶುಕ್ರವಾರ ರಾತ್ರಿ ತಮ್ಮ ಮನೆಯ ಪಾಯಿಂಟ್ 22 ಕೋವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಗುಂಡು ಹಾರಿಸಿಕೊಂಡಿದ್ದಾರೆ.ಗೋಣಿಕೊಪ್ಪ ಸಮೀಪ ಜೋಡುಬೀಟಿಯಲ್ಲಿರುವ ಇನ್ನೊಂದು ಮನೆಯಲ್ಲಿ ವಾಸವಿರುವ ಪುತ್ರ ಧರ್ಮಜ ಅವರು ಶನಿವಾರ ಬೆಳಿಗ್ಗೆ ಹೈಸೊಡ್ಲೂರು ಗ್ರಾಮದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಧರ್ಮಜ ಆಗಮಿಸಿದ ಸಂದರ್ಭ ತೀವ್ರ ರಕ್ತ ಸ್ರಾವದಿಂದ ಇನ್ನೂ ಉಸಿರಾಡುತ್ತಿರುವುದು ಗೊತ್ತಾಗಿ, ಪುತ್ರ ಕೂಡಲೇ ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಈ ಸಂದರ್ಭ ಮೃತಪಟ್ಟಿದ್ದಾರೆ.ಮಹಿಳೆಯ ಪತಿ ಲಕ್ಷ್ಮಣ 3 ವರ್ಷದ ಹಿಂದೆ ಮರಣಪಟ್ಟಿದ್ದರು. ಸಮಾಜದಲ್ಲಿ ಸಾಕಷ್ಟು ಸಾರ್ವಜನಿಕ ಕೆಲಸ, ಸಮಾಜಸೇವೆಗೆ ಆರ್ಥಿಕ ನೆರವುಗಳನ್ನು ತಾರಾ ಅವರ ಕುಟುಂಬ ನೀಡುತ್ತಾ ಬಂದಿತ್ತು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಪಟ್ಟಿರುವ ತಾರಾ ಅವರಿಗೆ ವಕೀಲನಾಗಿರುವ ಓರ್ವ ಪುತ್ರನಿದ್ದು, ಹೈಸೊಡ್ಲೂರು ಗ್ರಾಮದಲ್ಲಿ ಕಾಫಿ ತೋಟ ಹೊಂದಿದ್ದು, ಆಗಾಗ ಪುತ್ರ ತನ್ನ ಕುಟುಂಬದೊಂದಿಗೆ ಆಗಮಿಸಿ ಇಲ್ಲಿ ನೆಲೆಸುತ್ತಿದ್ದರು. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.