ಗೋಣಿಕೊಪ್ಪಲು, ಏ. 29: ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆಗೆ ಹೆಜ್ಜೇನು ಅಡ್ಡಿಯಾಗಿದ್ದು, ಕಾರ್ಯಾಚರಣೆ ಮುಂಚೂಣಿಯಲ್ಲಿದ್ದ ಸಾಕಾನೆಗಳು ಜೇನು ನೊಣಗಳ ಕಡಿತದಿಂದ ಹಿಂದೆ ಸರಿಯುತ್ತಿವೆ. ಕಾಡಿನ ಒಳಗೆ ಹೆಜ್ಜೆ ಇಡಲು ಭಯ ಪಡುತ್ತಿವೆ.ಜೇನು ನೊಣಗಳು ಆನೆ ಮಾವುತರಿಗೆ, ಅರಣ್ಯ ಸಿಬ್ಬಂದಿಗಳಿಗೆ ಕಚ್ಚಿದ ಪರಿಣಾಮ ಹುಲಿ ಸೆರೆಯ ಕಾರ್ಯಾ ಚರಣೆಗೆ ಹಿನ್ನೆಡೆ ಉಂಟಾಗಿದೆ. ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಜಾನುವಾರುಗಳ ಮೇಲೆ ವ್ಯಾಘ್ರನ ದಾಳಿ ಮುಂದುವರೆದಿದ್ದು, ಹುಲಿ ಸೆರೆಗೆ ಸಾರ್ವಜನಿಕರು, ರೈತ ಸಂಘ ಒತ್ತಾಯ ಹೇರಿದ ಪರಿಣಾಮ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹುಲಿ ಸೆರೆಗೆ ಹಸಿರು ನಿಶಾನೆ ತೋರಿದ್ದರು. ಇದರಿಂದ ಅರವಳಿಕೆ ತಜ್ಞ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳು ಹುಲಿ ಸೆರೆಗೆ ನಡಿಕೇರಿ ಗ್ರಾಮದ ಕಳ್ಳಿಚಂಡ ವಿವೇಕ್ ಅವರ ಲೈನ್ ಮನೆಯಲ್ಲಿ ಹಾಗೂ ಭತ್ತದ ಗದ್ದೆಯಲ್ಲಿ ಟೆಂಟ್ ನಿರ್ಮಿಸಿ ಕಾರ್ಯಾಚರಣೆ ಆರಂಭಿಸಿದ್ದರು.ಸಂಜೆ ವೇಳೆಯಲ್ಲಿ ಹುಲಿ ಕಾರ್ಯಾಚರಣೆಗೆ ಸಮೀಪದ ಕಾಡಿನಲ್ಲಿ ತೆರಳಿದ ಸಂದರ್ಭ ಕಾಡಿನಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ಗೂಡಿಗೆ ಅಡಚಣೆ ಆದ ಪರಿಣಾಮ ಜೇನು ನೊಣಗಳು ಕಾರ್ಯಾ ಚರಣೆಯಲ್ಲಿದ್ದ ಸಾಕಾನೆಗಳಿಗೆ, ಮಾವುತರಿಗೆ, ಸಿಬ್ಬಂದಿಗಳಿಗೆ

ಹಾಗೂ ಅಧಿಕಾರಿಗಳ ಮೇಲೆ ದಾಳಿ ಮಾಡಿವೆ.

(ಮೊದಲ ಪುಟದಿಂದ) ಹೆಜ್ಜೇನುಗಳ ಕಡಿತದಿಂದ ಭಯಗೊಂಡ ಸಾಕಾನೆಗಳು ಕಾಡನ್ನು ಪ್ರವೇಶ ಮಾಡಲು ನಿರಾಕರಿಸಿವೆ. ಇದರಿಂದಾಗಿ ಹುಲಿ ಕಾರ್ಯಾಚರಣೆ ಮೊಟಕುಗೊಳಿಸಿ ಮತ್ತೆ ಬುಧವಾರ ಕಾರ್ಯಾಚರಣೆ ಆರಂಭಿಸಲಾಯಿತು. ಸುಮಾರು ನಾಲ್ಕು ಕಿ.ಮೀ. ಸುತ್ತಳತೆಯ ವಿಸ್ತೀರ್ಣದಲ್ಲಿ ಹುಲಿರಾಯ ಸುತ್ತಾಟ ನಡೆಸಿದ್ದು 8 ವರ್ಷದ ಪ್ರಾಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆ ವೇಳೆ ಹುಲಿಯು ಕಾಣಿಸಿಕೊಂಡಿದ್ದು, ಆನೆಯ ಮೇಲಿದ್ದ ಡಾ. ಮುಜೀಬ್ ಅರವಳಿಕೆ ಚುಚ್ಚು ಮದ್ದು ಸಿಡಿಸುವಷ್ಟರಲ್ಲಿ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮಾಯವಾಗಿದೆ ಎಂದು ಮಾಧ್ಯಮಕ್ಕೆ ಡಾ.ಮುಜೀಬ್ ಮಾಹಿತಿ ಒದಗಿಸಿದರು. ಹುಲಿ ಸೆರೆಗಾಗಿ 5 ಸಾಕಾನೆಗಳು ಶ್ರಮಿಸುತ್ತಿವೆ. ವಿವಿಧ ಸ್ಥಳಗಳಲ್ಲಿ ಹುಲಿ ಸೆರೆಗೆ ಬೋನನ್ನು ಅಳವಡಿಸಿದ್ದು, ಬೋನಿನ ಒಳಗೆ ಮೇಕೆಯನ್ನು ಕಟ್ಟಲಾಗಿದೆ. ಹುಲಿಯ ಚಲನ ವಲನ ತಿಳಿಯಲು ಕ್ಯಾಮರಾ ಅಳವಡಿಸಲಾಗಿದೆ. ಆನೆ ಕಾವಾಡಿಗಳು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸ್ಥಳದಲ್ಲಿ ಡಿಎಫ್‍ಓ ಶಿವಶಂಕರ್, ಎಸಿಎಫ್ ಶ್ರೀಪತಿ, ಆರ್‍ಎಫ್‍ಓ ಅರಮಣಮಾಡ ತೀರ್ಥ ಹಾಗೂ ಅಶೋಕ್, ನಾಗರಹೊಳೆ ಹುಲಿ ಸಂರಕ್ಷಣೆ ಆನೆ ಪ್ರಭಾರಕ ಮುಜೀಬ್ ರೆಹಮಾನ್, ಡಿಆರ್ ಎಫ್ ಓ ದಿವಾಕರ್ ಹಾಗೂ ಮಂಜುನಾಥ್, ಅರಣ್ಯ ರಕ್ಷಕರು, ಆರ್‍ಆರ್‍ಟಿ ತಂಡ ಬೀಡು ಬಿಟ್ಟಿದ್ದು, ಹುಲಿ ಸೆರೆಯ ಆಶಾಭಾವನೆಯಲ್ಲಿದ್ದಾರೆ. 5 ಸಾಕಾನೆ ಗಳಿಗೆ ಬೇಕಾದ ಆಹಾರಗಳನ್ನು ಮತ್ತಿಗೋಡು ಆನೆ ಶಿಬಿರದಿಂದ ತರಲಾಗುತ್ತಿದ್ದು, ಸ್ಥಳೀಯರು ತಮ್ಮ ತೋಟದಲ್ಲಿರುವ ಹಲಸಿನ ಸೊಪ್ಪುಗಳನ್ನು ನೀಡುತ್ತಿದ್ದಾರೆ. ಸಿಬ್ಬಂದಿಗಳು ಕ್ಯಾಂಪ್‍ನಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಹೇಗಾದರೂ ಹುಲಿಯನ್ನು ಸೆರೆ ಹಿಡಿಯಲೇಬೇಕೆಂಬ ಹಠದಲ್ಲಿರುವ ಸಿಬ್ಬಂದಿಗಳಿಗೆ ಗ್ರಾಮದ ಜನರು ಸಹಕಾರ ನೀಡುತ್ತಿದ್ದಾರೆ.