ಜಗದಗಲ ಇರುವ ಜನರನ್ನೆಲ್ಲಾ ಧಗಧಗಿಸುತ್ತಿರುವ ಅಗೋಚರ ಶಕ್ತಿ ಕೊರೊನಾ ಎಂಬ ವೈರಸ್ ಜನ ಸಂಕುಲದ ದೈನಂದಿನ ವ್ಯವಹಾರ ಗಳಿಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಖಜಾನೆಗಳಿಗೆ ಮಾಡಿರುವ ಮೈನಸ್ ಅಪಾರ. ಅಷ್ಟೇ ಅಲ್ಲ, ಪೇಟೆ ಪಟ್ಟಣಗಳ ಜಂಜಾಟದ ಬದುಕಿಗೆ ಸಿಲುಕಿದ್ದ ಅಲ್ಲಿನ ಜನರು ಕೌಟುಂಬಿಕ ಸಂಬಂಧಗಳ ಸಮ್ಮಿಲನಕ್ಕೂ ಸಮಯ ಕೊಡಲಾಗದ ಮಂದಿಯನ್ನು ಒಂದು ಕಡೆ ಕಟ್ಟಿ ಹಾಕಿ, ಮತ್ತೆಲ್ಲೂ ಹೋಗದ ಹಾಗೆ ಮನೆಯೊಳಗೆ ಕೂರುವಂತೆ ಮಾಡಿದ್ದು; ಅದೊಂದು ರೀತಿಯಲ್ಲಿ ಮಾನಸಿಕವಾದ ಒಳ ಬೇಗುದಿಗಳನ್ನು ಲಾಕ್‍ಡೌನ್ ಹುಟ್ಟುಹಾಕಿದೆ. ಆದರೆ, ಎಲ್ಲಕ್ಕಿಂತ ಮಿಗಿಲಾದ, ಭಾರತೀಯ ಪರಂಪರೆಯ ಮೇರು ಕೊಂಡಿಯೇ ಆಗಿರುವ, ಇಂದಿನ ಯುವಜನಾಂಗ ಸಂಪೂರ್ಣ ಕಡೆಗಣಿಸಿದ್ದ ಕೃಷಿ ಚಟುವಟಿಕೆಯತ್ತ ಯುವ ಜನಾಂಗ ಮುಖ ಮಾಡುವಂತೆ ಮಾಡಿದ್ದು ಮಾತ್ರ ಗಮನೀಯವಾದ ಅಂಶ. ನಗರ ಪ್ರದೇಶಗಳಲ್ಲಿ ಬೇರೆ ಬೇರೆ ಉದ್ಯೋಗಗಳನ್ನು ಅವಲಂಭಿಸಿಕೊಂಡು ಇದ್ದಂತಹ ಯುವಜನಾಂಗ ಕೊರೊನಾದಿಂದಾಗಿ ಹಳ್ಳಿಗಳತ್ತ ಮುಖ ಮಾಡಿದ್ದರಿಂದಾಗಿ, ಬೇಸಾಯ ಕಾಣದೆ ಭೂಮಿಯ ಉಳುಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ರೈತಾಪಿಗಳ ಮುಖದಲ್ಲಿ ಒಂದಷ್ಟು ಖುಷಿಯನ್ನು ಕಾಣುವಂತೆ ಮಾಡಿದೆ. ಅದಕ್ಕೊಂದು ತಾಜಾ ನಿದರ್ಶನವೆಂಬಂತೆ ಮಡಿಕೇರಿ-ಮೈಸೂರು ಹೆದ್ದಾರಿಯ ಬಸವನಹಳ್ಳಿ ಬಳಿ ಒಂದು ಜೋಡಿ ಎತ್ತುಗಳು ವಾಹನಗಳೇ ಸಂಚರಿಸದ ವಿಶಾಲವಾದ ರಸ್ತೆಯಲ್ಲಿ ವಿರಾಜಮಾನವಾಗಿ ಸಾಗುತ್ತಿದ್ದ ಚಿತ್ರಣ ಗೋಚರಿಸಿತು.

ಈ ಸಂದರ್ಭ ಆ ಎತ್ತುಗಳನ್ನು ಕಂಡು ಅವುಗಳ ಪಾಲಕನನ್ನು ಮಾತನಾಡಿಸಿದಾಗ, ‘ಸರ್, ನಾನು ಸಾಫ್ಟ್ ವೇರ್ ಇಂಜಿನಿಯರ್. ಹೆಸರು ಆಕಾಶ್ ಅಂತ. ಇಲ್ಲೇ ಯಾರೋ ಕೃಷಿಕರ ಬಳಿ ರೂ. 80 ಸಾವಿರ ಕೊಟ್ಟು ಖರೀದಿಸಿ ನಮ್ಮೂರಿಗೆ ಒಯ್ಯುತ್ತಿದ್ದೇನೆ. ನನಗೆ ಕೃಷಿ ಅಂದರೆ ಈಗಂತು ತುಂಬಾ ಆಸಕ್ತಿ. ನಮಗೆ ಐದು ಎಕರೆ ಕೃಷಿ ಭೂಮಿ ಇದೆ. ನನ್ನ ಅಪ್ಪನೇ ಆ ಕಾಲದಿಂದಲೂ ಒಬ್ಬರೇ ಕೃಷಿ ಮಾಡುತ್ತಾ ಇದ್ದರು. ನಾನು ಯಾವುದಾದರು ರಜೆ ಸಿಕ್ಕಾಗ ಮಾತ್ರ ನೆಂಟರ ರೀತಿ ನಮ್ಮೂರಿಗೆÀ ಬಂದು ಹೋಗುತ್ತಾ ಇದ್ದೆ. ಮನೆಗೆ ಬಂದರೂ ಕೂಡ ನಮ್ಮ ಅಪ್ಪ ಜಮೀನಿನಲ್ಲಿ ಏನು ಮಾಡುತ್ತಿದ್ದಾರೆ. ಹೇಗೆ ಮಾಡುತ್ತಾರೆ. ನಮ್ಮ ಜಮೀನು ಎಲ್ಲಿ ಮತ್ತು ಎಷ್ಟು ಇದೆ. ಎಂಬುದನ್ನು ಕೂಡ ತಿಳಿಯಲಾರದಷ್ಟು, ಅಪ್ಪನ ಜೊತೆ ಸೇರಿ ಕೃಷಿ ಪಾಠ ಕಲಿಯಲಾರದಷ್ಟು ನಗರದ ನರಕದ ಜೀವನಕ್ಕೆ ಒಗ್ಗಿ ಹೋಗಿದ್ದೆ. ಕೆಲಸ ಬಿಟ್ಟು ಊರಿಗೆ ಬರುವಂತೆ ಪೋಷಕರು ಈ ಹಿಂದೆ ಕೋರಿದ್ದರು. ಎಷ್ಟು ಕರೆದರೂ ಕೂಡ, ಊರಿಗೆ ಬರಲೊಪ್ಪದ ನನ್ನನ್ನು ಮತ್ತು ನನ್ನಂತಹ ಇನ್ನೂ ಅನೇಕ ಯುವಕರನ್ನು ಕಣ್ಣಿಗೆ ಕಾಣದ ಆ ಒಂದು ವೈರಸ್ ಬಲವಂತವಾಗಿ ಕಣ್ಣಿಗೆ ಕಾಣುವ ನಮ್ಮ ಅಪ್ಪ ಅಮ್ಮಂದಿರ ಬಳಿ ಬಂದು ಸೇರುವಂತೆ ಮಾಡಿತು. ಈಗ ನನಗೆ ನಗರದ ಜೀವನವೇ ಬೇಡ. ಇದೀಗ ಹೇಗಿದ್ದರೂ ಉತ್ತಮ ಮಳೆ ಆಗಿದೆ. ಭೂಮಿಯನ್ನು ಉಳುಮೆ ಮಾಡಲು 80 ಸಾವಿರ ರೂ ಕೊಟ್ಟು ಒಂದು ಜೋಡಿ ಎತ್ತು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಮನದಾಳ ಹಂಚಿಕೊಂಡ ಯುವಕನನ್ನು ನೋಡಿ, ಅವನಂತಹ ಅನೇಕರಲ್ಲಿ ಮೂಡಿಸಿರುವ ಬದಲಾವಣೆ ನೋಡಿ ಒಂದು ಕ್ಷಣ ಕೊರೊನಾಕ್ಕೆ ಧನ್ಯವಾದ ಹೇಳದೇ ಇರಲಾಗದು ಎನ್ನಿಸಿತು.

- ಕೆ.ಎಸ್. ಮೂರ್ತಿ