ಕುಶಾಲನಗರ, ಏ 30: ಸ್ಥಳೀಯ ವಯೋವೃದ್ಧ ಅನಾರೋಗ್ಯ ಪೀಡಿತರೊಬ್ಬರಿಗೆ ಅಗತ್ಯವಾಗಿದ್ದ ಆಯುರ್ವೇದ ಜೀವರಕ್ಷಕ ಔಷಧಿಗೆ ಬೇಡಿಕೆ ಸಲ್ಲಿಸಿದ ಮೇರೆಗೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಮೂಲಕ ತಕ್ಷಣ ಕುಶಾಲನಗರಕ್ಕೆ ಔಷಧಿ ರವಾನೆಯಾದ ಕುರಿತು ವರದಿಯಾಗಿದೆ. ಕುಶಾಲನಗರದ ರಾಧಾಕೃಷ್ಣ ಬಡಾವಣೆ ನಿವಾಸಿ ಗೋವಿಂದರಾಜ್ ಎಂಬವರು ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರತಿ ತಿಂಗಳು ದಾವಣಗೆರೆಗೆ ತೆರಳಿ ತನ್ನ ಅನಾರೋಗ್ಯಕ್ಕೆ ಹೋಮಿ ಯೋಪತಿ ಔಷಧಿ ಪಡೆಯುತ್ತಿದ್ದರು. ಪ್ರಸ್ತುತ ಲಾಕ್‍ಡೌನ್ ಹಿನ್ನೆಲೆಯಲ್ಲಿ ದಾವಣಗೆರೆಗೆ ತೆರಳಲಾಗದೆ ಸಂಕಷ್ಟಕ್ಕೀಡಾಗಿದ್ದು, ಔಷಧಿಯನ್ನು ತರಿಸಲೂ ಕೂಡ ಸಂಪರ್ಕ ವ್ಯವಸ್ಥೆಯಿಲ್ಲದೆ ತೊಂದರೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಗೋವಿಂದರಾಜ್ ಅವರ ಪುತ್ರ ಸುಖೇಶ್ ಈ ಕುರಿತು ನೆರವಿಗಾಗಿ ಮನವಿ ಮಾಡಿದ್ದರು.”ನನ್ನ ತಂದೆಗೆ 75 ವರ್ಷವಾಗಿದ್ದು, ಇದೀಗ ಕೊರಿಯರ್ ಸೇವೆ, ಸಮರ್ಪಕ ಅಂಚೆ ವ್ಯವಸ್ಥೆಯೂ ಇಲ್ಲದಿರುವದರಿಂದ ನೆರವು ನೀಡುವಂತೆ ಕೋರಿದ್ದರು. ಇದಾದ ನಂತರ ಸುಖೇಶ್ ಅವರಿಗೆ ಅಂಚೆ ಇಲಾಖೆಯಿಂದ ಕರೆ ಬಂದಿದ್ದು ಶೀಘ್ರ ಔಷಧಿಯನ್ನು ತಲುಪಿಸುವದಾಗಿ ಭರವಸೆ ದೊರಕಿತ್ತು. ಇಂದು ಆ ಭರವಸೆ ಈಡೇರಿದ್ದು ಗೋವಿಂದ ರಾಜ್ ಅವರಿಗೆ ಔಷಧಿ ಕೈ ಸೇರಿದೆ. ಸುಖೇಶ್ ಅವರು ಟ್ವೀಟ್ ಮಾಡಿದ ಬಳಿಕ ಕೇವಲ 3 ದಿನಗಳಲ್ಲಿ ಔಷಧಿ ತಲುಪಿರುವ ಬಗ್ಗೆ ಅವರು ಸಂತೃಪ್ತಿ ವ್ಯಕ್ತÀಪಡಿಸಿದರು. ಮನವಿ ಮೇರೆಗೆ ತಕ್ಷಣ ಔಷಧಿಯನ್ನು ಕುಶಾಲನಗರಕ್ಕೆ ತಲುಪಿಸುವ ಕಾರ್ಯಕ್ಕೆ ನೆರವು ದೊರೆತಿದೆ ಎಂದು ಗೋವಿಂದರಾಜ್ ತಿಳಿಸಿದ್ದಾರೆ.

ಇನ್ನೊಂದೆಡೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಕುಶಾಲನಗರದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಪತ್ರ ತಲುಪಿದೆ. ಕಳೆದ ಎರಡು ದಿನಗಳ ಹಿಂದೆ ತನ್ನ ಹುಟ್ಟುಹಬ್ಬ ಆಚರಿಸಿದ ಸಂದರ್ಭ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ತನಗೆ ಶುಭಾಶಯ ಪತ್ರ ಬಂದಿರುವ ಬಗ್ಗೆ ಕುಶಾಲನಗರ ಬಿಜೆಪಿ ಪ್ರಮುಖರಾದ ವೈಶಾಖ್ ತಿಳಿಸಿದ್ದಾರೆ.