ಮಡಿಕೇರಿ ಏ. 30: ಕೊಡಗು ಜಿಲ್ಲೆಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಮೇ ಮಾಹೆಯಲ್ಲಿ ಎಎವೈ ಹಾಗೂ ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆ.ಜಿ.ಯಂತೆ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಎಎವೈ ಮತ್ತು ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಕುಟುಂಬಗಳ ಪ್ರತೀ ಪಡಿತರ ಚೀಟಿಗೆ 1 ಕೆ.ಜಿ. ತೊಗರಿ ಬೇಳೆಯನ್ನು ಉಚಿತವಾಗಿ ವಿತರಿಸಲಾಗುವುದು. ಈಗಾಗಲೇ ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೂ ಅಕ್ಕಿ ವಿತರಣೆ ಮಾಡುತ್ತಿದ್ದು, ಪ್ರತೀ ಪಡಿತರ ಚೀಟಿ ಅರ್ಜಿಗೆ 10 ಕೆ.ಜಿ. ಅಕ್ಕಿಯಂತೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಕೋವಿಡ್-19 ವೈರಸ್ ಹರಡುವ ಭೀತಿ ಇರುವುದರಿಂದ ಜಿಲ್ಲೆಯ ಆದ್ಯತಾ (ಬಿಪಿಎಲ್ ಮತ್ತು ಎಎವೈ) ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಪಡಿತರ ಆಹಾರ ಧಾನ್ಯಗಳನ್ನು ಮೇ 1 ರಿಂದ ಪಡೆದುಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.