ಮಡಿಕೇರಿ, ಏ. 30: ವೈದ್ಯಕೀಯ ವ್ಯವಸ್ಥೆಯಲ್ಲಿ ಸೇವಾ ಮನೋಭಾವ ಮುಖ್ಯವಾಗಿದ್ದು ಸೇವೆಯನ್ನು ಗುರುತಿಸುವ ಮತ್ತು ಪೆÇ್ರೀತ್ಸಾಹಿಸುವ ಗುಣ ಸಮಾಜಕ್ಕೆ ಇರಬೇಕೆಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ. ಕೆ. ಮೋಹನ್ ಕರೆ ನೀಡಿದ್ದಾರೆ. ಕೂಡಿಗೆಯ ರಾಮೇಶ್ವರ ಕೂಡು ಮಂಗಳೂರು ರೈತ ಸಹಕಾರ ಭವನದಲ್ಲಿ ಕುಶಾಲನಗರ ಕೂಡಿಗೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಗಳ ಗೌರವ ಸಲ್ಲಿಸಲಾಯಿತು.
ಹಾಸನ ಹಾಲು ಒಕ್ಕೂಟದ ನಿರ್ದೇಶಕರು ಮತ್ತು ಕೂಡು ಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಕೊರೊನಾ ಎಂಬ ಮಹಾಮಾರಿಯ ನರ್ತನ ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆ ಯರ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪತ್ರಕರ್ತ ಕೆ.ಕೆ. ನಾಗರಾಜಶೆಟ್ಟಿ, ಕೆ. ಎಸ್. ಮೂರ್ತಿ ಮಾತನಾಡಿ, ಕೊರೊನಾ ವಾರಿಯರ್ಸ್‍ಗಳ ಶ್ರಮಿಕ ಸೇವೆಯಿಂದಾಗಿ ಕೊಡಗು ಕೊರೊನಾ ಮುಕ್ತವಾಗಿದೆ. ಅಂತಹ ವಾರಿಯರ್ಸ್‍ಗಳಿಗೆ ಪ್ರಜಾಸತ್ಯ ಪತ್ರಿಕಾ ಸಂಸ್ಥೆಯ ಮುಖ್ಯಸ್ಥ ಡಾ. ನವೀನ್ ಕುಮಾರ್ ವೈದ್ಯಕೀಯ ವ್ಯವಸ್ಥೆಯ ಬೆನ್ನುಲುಬಾಗಿ ಕೆಲಸ ಮಾಡುವವ ರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಮೇಲೆ ಎಲ್ಲೋ ಜರುಗಿದ ದುರ್ಘಟನೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ನಿರ್ಮಲ ಭಾವದಿಂದ ತಮ್ಮ ಸೇವೆಯಲ್ಲಿ ತಾವು ಮುಂದುವರಿಯಬೇಕೆಂದು ಕರೆಕೊಟ್ಟರು.
ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಹಿರಿಯ ಪತ್ರಕರ್ತರಾದ ಬಿ.ಸಿ. ದಿನೇಶ್, ಕೂಡಿಗೆ ಗಣೇಶ್, ಕೆ.ಆರ್. ಜಗದೀಶ್ ಇದ್ದರು.