ಕೊಡಗು ಕರ್ನಾಟಕ ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ. ದೇಶ ಮಾತ್ರವಲ್ಲ ವಿದೇಶಗಳಲ್ಲೂ ತನ್ನ ವಿಶಿಷ್ಟತೆಗಳಿಂದ ಹೆಸರಾಗಿದೆ. ಸಂಸ್ಕøತಿ ಇರಬಹುದು, ಪ್ರಾಕೃತಿಕತೆ-ಭೌಗೋಳಿಕತೆ, ಆಹಾರ ಪದ್ಧತಿ-ಆಭರಣಗಳು, ಹಬ್ಬ ಹರಿದಿನಗಳು, ಭೂಕಾಯ್ದೆ-ಜಮ್ಮಾ, ಸೈನಿಕ-ಪರಂಪರೆ ಕ್ರೀಡೆ ಈ ರೀತಿಯಾಗಿ ಕೊಡಗಿನ ವಿಶೇಷತೆಗಳು ಒಂದಲ್ಲಾ ಒಂದು.

ಇಂತಹ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅದರಲ್ಲೂ ಇತ್ತೀಚೆಗೆ ಹಲವಾರು ರೀತಿಯ ಬದಲಾವಣೆಗಳು ಕಂಡು ಬರುತ್ತಿವೆ. ಇಲ್ಲಿನ ಮೂಲನಿವಾಸಿಗಳು, ಬೇರೆಡೆಗೆ ತೆರಳುತ್ತಿರುವ ಪ್ರಸಂಗಗಳು, ವಿಶಿಷ್ಟ ಹಕ್ಕು ಹೊಂದಿದ್ದ ತಲತಲಾಂತರಗಳಿಂದ ಪರಂಪರಾಗತವಾಗಿ ಮುಂದುವರೆ ಯುತ್ತಿದ್ದ ಆಸ್ತಿ-ಪಾಸ್ತಿಯ ಮಾರಾಟ, ಜನತೆ ಪಾಶ್ಚಾತ್ಯ ಸಂಸ್ಕøತಿಯತ್ತ ವಾಲುವದರೊಂದಿಗೆ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯದ ಭಾವನೆ ತೋರುವದು, ನಗರಗಳತ್ತ ದೇಶದ ವಿವಿಧ ಭಾಗ-ವಿದೇಶಗಳಲ್ಲಿ ನೆಲೆಕಾಣಲು ಉತ್ಸುಕತೆ ತೋರುತ್ತಿದ್ದಂತಹ ಘಟನಾವಳಿಗಳು ಬಹುಶಃ ಭಾರೀ ಚರ್ಚೆಗೂ ಗ್ರಾಸವಾಗುತ್ತಿತ್ತು. ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಇಲ್ಲಿನ ಮೂಲನಿವಾಸಿಗಳ, ಸಮಾಜದವರು, ಜನಪ್ರತಿನಿಧಿಗಳು, ಕೊಡಗಿನ ಜನರು ತಮ್ಮ ಆಸ್ತಿಯನ್ನು ಪರಭಾರೆ ಮಾಡದಿರುವಂತೆ ವಿವಿಧ ಸಭೆ-ಸಮಾರಂಭಗಳಲ್ಲಿ ಕರೆ ನೀಡುವದು, ಸಲಹೆ ನೀಡುತ್ತಿದ್ದುದೂ ಕಂಡು ಬರುತ್ತಿತ್ತು. ಆದರೂ ಇದು ಗಂಭೀರ ರೀತಿಯಲ್ಲಿ ಪರಿಗಣಿಸಲ್ಪಡುತ್ತಿರಲಿಲ್ಲ.

ಈ ಸನ್ನಿವೇಶದ ನಡುವೆ ಇದೀಗ ಕೊರೊನಾ ಎಂಬ ‘ಮಹಾಮಾರಿ’ ಈ ಬಗ್ಗೆ ಚಿತ್ತಹರಿಸುವಂತೆ ಮಾಡುತ್ತಿದೆ ಎಂಬದು ಅತಿಶಯೋಕ್ತಿಯಲ್ಲ. ಒಂದು ರೀತಿಯಲ್ಲಿ ಇತರೆಡೆಗಳಿಗೆ, ವಿದೇಶಗಳಿಗೆ ಹೋಲಿಸಿದರೆ ಕೊಡಗು ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿದೆ. ಉದ್ಯೋಗದ ಕಾರಣವೋ, ಹಣಕಾಸಿನ ಸುಸ್ಥಿತಿಯೋ, ಆಧುನಿಕತೆಯ ಮೋಹವೋ ಅಥವಾ ಇನ್ನಿತರ ಅನಿವಾರ್ಯತೆಗಳು, ಮತ್ತಿತರ ಹಲವು ಕಾರಣಗಳಿಂದಾಗಿ ಕೊಡಗನ್ನು ಬಿಟ್ಟು, ಜಿಲ್ಲೆಯ ಬಗ್ಗೆ, ಜಿಲ್ಲೆಯ ಹಿಂದಿನ ಬದುಕಿನ ಬಗ್ಗೆ ಒಂದಷ್ಟು ನಿರ್ಲಕ್ಷ್ಯ ಮಾಡುತ್ತಿದ್ದವರು, ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದವರು ಇದೀಗ ಕೊಡಗಿನ ‘ಜಪ’ ಮಾಡುವಂತಾಗಿದೆ. ಕನಸು-ಮನಸ್ಸಲ್ಲೂ ಊಹಿಸದ ಮಾದರಿಯಲ್ಲಿನ ಈಗಿನ ಬೆಳವಣಿಗೆಗಳಿಂದಾಗಿ ಹಲವು ಚರ್ಚೆಗಳು, ಕೆಲವಾರು ಘಟನೆಗಳು, ಪ್ರಸಂಗ ಗಳು ಜಿಲ್ಲೆಯನ್ನು, ತಾಯಿ ನೆಲವನ್ನು ಮೂಲ ಸಂಸ್ಕøತಿಯನ್ನು ಮರೆತಂತಿದ್ದ ವರಿಗೆ ತವರನ್ನು ನೆನಪಿಸುತ್ತಿದೆ. ಬಂಧು-ಬಳಗವನ್ನು ನೆನಪಿಗೆ ತರುತ್ತಿದೆ. ಬಾಲ್ಯದ ದಿನಗಳ ಮೆಲುಕನ್ನು ಮರುಕಳಿಸುತ್ತಿರುವ ಮೂಲಕ ಅನೇಕ ರೀತಿಯಲ್ಲಿ ಅದೇಕೋ, ಏನೋ ಕೊಡಗನ್ನು, ಹಿಂದಿನ ಗತವೈಭವವನ್ನು ನೆನಪಿಗೆ ತರುತ್ತಿದೆ ಎಂಬಂತಹ ಉದಾಹರಣೆಗಳು. ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಹೊರಗೆ ಮಾಡಬಹುದಾದ ಕೆಲವಾರು ಚಟುವಟಿಕೆಗಳನ್ನು ಜಿಲ್ಲೆಯಲ್ಲಿಯೇ ನಡೆಸಬಹುದಾಗಿದೆ ಎಂಬ ಭಾವನೆ ಮೂಡುತ್ತಿದೆ. ಪ್ರಸ್ತುತ ಕೊಡಗಿನ ಕೃಷಿ ಪರಸ್ಪರ ಬಾಂಧವ್ಯದ ಕಲ್ಮಶ ರಹಿತ ಬದುಕು ಯುವಜನಾಂಗ ವನ್ನು ಆಕರ್ಷಿಸುತ್ತಿದೆ. ಕಳೆದ ಹಲವು ತಿಂಗಳುಗಳ ಹಿಂದೆ ದೈವಾಧೀನರಾಗಿ ರುವ ಮನೆಯಪಂಡ ಸತೀಶ್ ಅವರು (ಬಿ.ಜೆ.ಪಿ. ಪ್ರಮುಖರಾದ ಕಾಂತಿ ಅವರ ಪತಿ) ತಮ್ಮ ಅನುಭವವೊಂದನ್ನು ಹೇಳಿಕೊಂಡಿದ್ದರು. ಅದೇನೆಂದರೆ ಯಾವದೇ ಒಂದು ಕುಗ್ರಾಮದಲ್ಲಿ ಹುಟ್ಟಿಬೆಳೆದವರು ಸಹಜವೆಂಬಂತೆ ಪಕ್ಕದ ಪಟ್ಟಣವನ್ನು ಅರಸುತ್ತಾರೆ, ಬಯಸುತ್ತಾರೆ. ಇದು ಸಣ್ಣಪಟ್ಟಣ, ತಾಲೂಕು, ನಗರ, ಜಿಲ್ಲೆ, ರಾಜ್ಯದ ಗಡಿದಾಟಿ ಬರುತ್ತದೆ. ಇದರ ಬಳಿಕ, ಇದರ ವ್ಯಾಮೋಹ, ಆಸಕ್ತಿ ದೇಶದಿಂದ ವಿದೇಶದತ್ತಲೂ ಸಾಗುತ್ತದೆ. ಮಕ್ಕಳು ಇದರಂತೆ ಒಂದು ಹಂತ ತಲುಪಿ ವಿದೇಶಕ್ಕೆ ಹಾರಿದ ಮೇಲೆ ಅಲ್ಲಿನ ಭಾರೀ ಮೌಲ್ಯದ ಫ್ಲ್ಯಾಟ್-ಬಂಗಲೆಗಳಲ್ಲಿ ಉಳಿಯುವವರು ಕೇವಲ ವಯಸ್ಸಾದ ತಂದೆ-ತಾಯಿ ಮಾತ್ರ. ಈ ವೇಳೆ ಅವರಿಗೆ ಅನಿಶ್ಚಿತತೆ ಕಾಡಲಾರಂಭಿಸುತ್ತದೆ. ಕುಟುಂಬಸ್ಥರು, ಬಂಧು-ಬಳಗದವರು ದೂರ, ನೆರೆ-ಕರೆಯವರು, ಅಪರಿಚಿತರು ಮಾತುಕತೆಗೆ ಯಾರೂ ಸನಿಹದಲ್ಲಿರುವದಿಲ್ಲ. ಇಂತಹ ಪರಿಸ್ಥಿತಿ ಎದುರಾದಾಗ ಹುಟ್ಟಿ-ಬೆಳೆದ ಜಾಗ ನೆನಪಾಗುತ್ತದೆ ಎಂದು ದಿವಂಗತ ಸತೀಶ್ ನುಡಿದಿದ್ದರು. ಇವರ ಅನುಭವದಂತೆ ಆ ಸಂದರ್ಭದಲ್ಲಿ ಈ ರೀತಿಯ ಕಾರಣದಿಂದಾಗಿ ಮುಂಬೈ ಮಹಾನಗರದಲ್ಲಿ ನೆಲೆಕಂಡಿದ್ದ ಹಲವಾರು ಕೊಡಗಿನ ಕೊಡವ ಕುಟುಂಬದವರು ಮಕ್ಕಳು ವಿದೇಶಕ್ಕೆ ತೆರಳಿದ ಬಳಿಕ ಈ ಅತಂತ್ರ ಭಾವನೆಗೆ ಒಳಗಾಗಿದ್ದರು. ಬಳಿಕ ಅಲ್ಲಿನ ಆಸ್ತಿ-ಪಾಸ್ತಿಯನ್ನು ಸಿಕ್ಕಿದ ಹಣಕ್ಕೆ ಮಾರಾಟ ಮಾಡಿ ಬರುವಂತಾಗಿತ್ತು. ಇದು ಒಂದು ರೀತಿಯಾದರೆ ಈಗಿನ ಸಾಂಕ್ರಾಮಿಕ ರೋಗವಾಗಿ ಆತಂಕ ಸೃಷ್ಟಿಸಿರುವ ಕೊರೊನಾ ಹೆಮ್ಮಾರಿ ಕೂಡ ಕೊಡಗನ್ನು ಹಲವರಿಗೆ ಅನೇಕ ರೀತಿಯಲ್ಲಿ ನೆನಪಿಗೆ ತರಿಸುತ್ತಿದೆ ಎನ್ನಬಹುದೇನೋ... ಕೊಡಗಿನ ಪರಿಸರ ತೋಟ, ಗದ್ದೆಗಳ ನೆನಪಾಗುತ್ತಿದೆ ಈಗ ಅನೇಕರಿಗೆ. ?ಶಶಿ ಸೋಮಯ್ಯ