ಮಡಿಕೇರಿ, ಏ. 30: ಕೆಲವೊಂದು ಕ್ಷೇತ್ರಗಳು ಜನರ ಹಾಗೂ ಸರಕಾರಗಳ ಕಣ್ಣಿಗೆ ಬೇಗ ಬೀಳುತ್ತವೆ. ಆ ಕ್ಷೇತ್ರಗಳಲ್ಲಿರುವವರ ಸೇವೆಯನ್ನು ಪರಿಗಣಿಸಿ ಸನ್ಮಾನಗಳು, ಪ್ರಶಸ್ತಿಗಳು ಲಭಿಸುತ್ತವೆ. ಹಲವಷ್ಟು ಮಂದಿ ಆ ಮೂಲಕ ಸಮಾಜ ಸೇವಕರೆಂದು ಗುರುತಿಸಲ್ಪಡುತ್ತಾರೆ.ಹಲವು ಕ್ಷೇತ್ರಗಳಿವೆ. ಅವುಗಳ ಅವಶ್ಯಕತೆಯಾಗಲಿ, ಅಗತ್ಯವಾಗಲಿ, ಪ್ರಾಮುಖ್ಯತೆಯಾಗಲಿ ಯಾರಿಗೂ ತಿಳಿಯುವುದೇ ಇಲ್ಲ. ಅಂತಹ ಕ್ಷೇತ್ರಗಳಲ್ಲಿ ಒಂದು ಸಮುದ್ರಯಾನದಲ್ಲಿ ಇಡೀ ವಿಶ್ವಾದಾದ್ಯಂತ ಸಂಚರಿಸಿ ಜನ ಕೋಟಿಗೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುವ ಸಮುದ್ರಯಾನಿಗಳ ಕೆಲಸ. ಮನೆ, ಮಠ ಬಿಟ್ಟು ವಾತಾವರಣದ ಕ್ಲಿಷ್ಠಕರ ಸಂದರ್ಭಗಳಲ್ಲಿಯೂ ಜೀವದ ಹಂಗನ್ನು ತೊರೆದು ತಿಂಗಳುಗಟ್ಟಲೆ ಸರಕು ಸರಂಜಾಮುಗಳನ್ನು ಹೊತ್ತು ಹಡಗಿನಲ್ಲಿಯೇ ತಂಗುವ ಸಮುದ್ರಯಾನಿಗಳ ಬದುಕು ಒಂದು ರೀತಿಯ ಯಾತನಾಮಯದ್ದು. ಶತಮಾನಗಳಿಂದಲೇ ಹಡಗಿನ ಮೂಲಕ ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ. ವಿಶ್ವದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸಾಮಗ್ರಿಗಳನ್ನು ಸರಬರಾಜು ಮಾಡುವ ದೈತ್ಯ ಶಕ್ತಿ ಈ ಹಡಗಿನದ್ದಾದರೂ ಅದರಲ್ಲಿ ದುಡಿಯುವವರಿಗೆ ತ್ಯಾಗ ಹಾಗೂ ಸೇವೆಯ ಮನೋಭಾವ ಇರಬೇಕು. ತಿಂಗಳುಗಟ್ಟಲೆ ನೆಲವನ್ನೂ ನೋಡಲಾಗದೆ ನೀರಿನ ಮಧ್ಯೆ ಬದುಕು ಸವೆಸುವ ಸಮುದ್ರಯಾನಿಗಳಿಗೆ ದೈಹಿಕ ಬಳಲಿಕೆ ಜೊತೆ ಮಾನಸಿಕ ಅಸಮತೋಲನವೂ ಆಗುವುದಿದೆ. ಮನೆ, ಮಠ, ಸಂಸಾರ, ಸಾಮಾಜಿಕ ಸುಖ, ಸ್ನೇಹಿತರು ಎಲ್ಲವನ್ನೂ ಬಿಟ್ಟು ಕರ್ತವ್ಯ ಪ್ರಜ್ಞೆ, ಜವಾಬ್ದಾರಿ ಮತ್ತು ಸೇವಾ ಮನೋಭಾವದಿಂದ ದುಡಿಯುವ ಇಂತಹ ಮಹಾನಿಯರನ್ನು ಸಮಾಜ ಗುರುತಿಸುವುದೇ ಇಲ್ಲ. ವೀರಸೇನಾನಿಗಳಂತೆ ಸಂದರ್ಭ ಬಂದಾಗ ವೈರಿಗಳನ್ನು ಹಿಮ್ಮೆಟ್ಟುವ ಜವಾಬ್ದಾರಿಗಳು ಕೂಡ ಇವರದ್ದು. ರಜೆಯ ಕೊರತೆ, ಒಂಟಿತನದ ನೋವು, ಅಪರಾಧ ಕೃತ್ಯಗಳು, ಕುಟುಂಬವನ್ನು ಸಂಪರ್ಕಿಸಲು ಉಂಟಾಗುವ ಇಂಟರ್‍ನೆಟ್ ಕೊರತೆ, ಆರೋಗ್ಯ ಸಮಸ್ಯೆ ಹೀಗೆ ಹಲವಾರು ನೋವುಗಳ ಮಧ್ಯೆ ಸಮುದ್ರಯಾನಿ ಎಂಬ ‘ಹೀರೋ’ ವಿಶ್ವದ ಸಂಪರ್ಕಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾನೆ.

ಸಮುದ್ರಯಾನದ ಸಂದರ್ಭ ಒಬ್ಬ ವ್ಯಕ್ತಿಗೆ ‘ಬದುಕಿನಲ್ಲಿ ಎಷ್ಟು ಅವಶ್ಯ ಎನ್ನುವುದಕ್ಕಿಂತ ಎಷ್ಟು ಕಡಿಮೆ ಸಾಕು’ ಎನ್ನುವುದರ ಅರಿವಾಗುತ್ತದೆ. ಕೊರೊನಾದ ಈ ಸಂದರ್ಭದಲ್ಲಿ ಸಮುದ್ರಯಾನಿಗಳ ಬದುಕು ಅತಂತ್ರವಾಗಿದ್ದರೂ ವಿಶ್ವವಾಣಿಜ್ಯ ಹಾಗೂ ಆರ್ಥಿಕ ಸ್ಥಿತಿಯ ನಿರ್ವಹಣೆ ಮಾಡಲೇಬಕಿದೆ. ಸಮುದ್ರಯಾನಿಗಳಾಗಿ ಪುರುಷರು, ಮಹಿಳೆಯರು ಕೂಡ ಸ್ವಾರ್ಥರಹಿತವಾಗಿ ದುಡಿಯುತ್ತಿದ್ದಾರೆ. ಆಹಾರ, ಔಷಧಿ, ಇಂಧನ ಹೀಗೆ ಸಾವಿರಾರು ಅಗತ್ಯ ವಸ್ತುಗಳ ಪೂರೈಕೆ ಹಡಗುಗಳಿಂದಲೇ ಆಗುತ್ತಿರುವುದರ ಅರಿವು ಎಲ್ಲರಿಗಿದ್ದರೂ ಅದರ ಸೇವಾಕರ್ತರನ್ನು ಸಮಾಜ ಗುರುತಿಸದೆ ಇರುವುದು ವಿಪರ್ಯಾಸ. ಹಡಗುಗಳಲ್ಲಿ ನೌಕರಿ ಮಾಡುವ ಸ್ನೇಹಿತರಿಗೆ ಉತ್ತಮ ದೈಹಿಕ ಸ್ಥಿತಿ ಇರಬೇಕಿದೆ. ಬೇರೆ ಬೇರೆ ವಾತಾವರಣಗಳಲ್ಲಿ ಹಲವು ರೀತಿಯ ಸಂಸ್ಕøತಿಯ ಮಧ್ಯೆ ದುಡಿಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಿದೆ. ಕೆಲಸವನ್ನು ಪ್ರೀತಿಸುವುದರ ಜೊತೆ ಸಾಹಸಿ ಮತ್ತು ಛಲವಾದಿಯಾಗಿ ತನ್ನನ್ನೇ ಬದಲಿಸಿಕೊಳ್ಳುವ ಅನಿವಾರ್ಯತೆ ಇದೆ.

ಅಂತಹ ದೇಶ ಸೇವಕರನ್ನು ಅಭಿನಂದಿಸುವುದರ ಜೊತೆಯಲ್ಲಿ ಅವರುಗಳನ್ನು ಈ ವೃತ್ತಿಗೆ ಪ್ರೋತ್ಸಾಹಿಸುವ ಕುಟುಂಬದವರನ್ನು ಕೂಡ ನಾವು ಕೃತಜ್ಞತೆಗಳಿಂದ ಕಾಣಬೇಕಾಗಿದೆ. ಕೊಡಗಿನಿಂದಲೂ ನೂರಾರು ಮಂದಿ ಕ್ಷೇತ್ರದಲ್ಲಿ ದುಡಿಯುತ್ತಿದ್ದು; ಅವರುಗಳೂ ಕೂಡ ಕ್ಷೇಮವಾಗಿ ಹಿಂದಿರುಗಲಿ ಎಂದು ನಾವೆಲ್ಲಾ ಪ್ರಾರ್ಥಿಸಬೇಕಿದೆ.

- ಶ್ರೀಮತಿ ನಿವೇದಿತಾ, ತಿ/o ನಾಟೋಳಂಡ ಅಮಿತ್ ಅಚ್ಚಪ್ಪ, ಚೀಫ್ ಮೆರೈನ್ ಇಂಜಿನಿಯರ್, ಆಂಗ್ಲೋ ಈಸ್ಟನ್ ಶಿಪ್ ಮ್ಯಾನೇಜ್‍ಮೆಂಟ್