ಮಡಿಕೇರಿ, ಏ. 29: ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರಕಾರ ವಿಧಿಸಿರುವ ಲಾಕ್‍ಡೌನ್ ನಿಯಮದಂತೆ; ಜಿಲ್ಲಾಡಳಿತ ಜಾರಿಗೊಳಿಸಿರುವ ನಿರ್ಬಂಧ ಅನುಸಾರ ಚಿನ್ನದಂಗಡಿ, ಸಲೂನ್‍ಗಳು, ಸ್ಪೈಷಸ್, ಬಹುತೇಕ ಹೊಟೇಲ್ ಉದ್ಯಮಗಳ ಹೊರತಾಗಿ ಇತರ ವರ್ತಕರು ತಮ್ಮ ತಮ್ಮ ಮಳಿಗೆಗಳನ್ನು ಇಂದು ತೆರೆಯುವ ಮೂಲಕ ಸಣ್ಣ ಪುಟ್ಟ ವಹಿವಾಟು ಆರಂಭಿಸಿರುವ ದೃಶ್ಯ ಗೋಚರಿಸಿತು.ಬೆಳಿಗ್ಗೆ 10 ಗಂಟೆಯ ಬಳಿಕ ಕೊಡಗಿನ ಬಹುತೇಕ ಪಟ್ಟಣಗಳಲ್ಲಿ ಕುಟ್ಟದಿಂದ ಕೊಡ್ಲಿಪೇಟೆ ತನಕ ಹಾಗೂ ಕುಶಾಲನಗರ - ಶಿರಂಗಾಲ ಗಡಿಯಿಂದ ದಕ್ಷಿಣ ಕನ್ನಡದ ಸಂಪಾಜೆ - ಪೆರಾಜೆ ವ್ಯಾಪ್ತಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಚಾಲನೆ ಲಭಿಸುವಂತಾಯಿತು. ಬುಧವಾರವಾದ್ದರಿಂದ ಬೆಳಿಗ್ಗೆ 6 ರಿಂದ ಸಂಜೆ 4ರ ತನಕ ಲಭಿಸಿರುವ ಮೊದಲ ಈ ಅವಕಾಶವನ್ನು ವರ್ತಕರು ಮತ್ತು ಗ್ರಾಹಕರು ತಮ್ಮ ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದರು. ಗಮನ ಸೆಳೆದ ಉಡುಪಿ ಗಾರ್ಡನ್: ಮಡಿಕೇರಿ ನಗರಸಭೆ ಬಳಿಯ ಉಡುಪಿ ಗಾರ್ಡನ್ ಸಸ್ಯಾಹಾರಿ ಹೊಟೇಲ್ ಈ ವೇಳೆ ಗಮನ ಸೆಳೆಯಿತು. ಇಲ್ಲಿ ಭಾರತ ಲಾಕ್‍ಡೌನ್ ದಿನದಿಂದಲೂ; ಕರ್ತವ್ಯ ನಿರತ ಸರಕಾರಿ ಉದ್ಯೋಗಿಗಳು, ನಗರಸಭೆ ಹಾಗೂ ಬ್ಯಾಂಕ್‍ಗಳು ಸೇರಿದಂತೆ ವಿವಿಧ ಸರಕಾರಿ ಉದ್ಯೋಗಿಗಳ ಕುಟುಂಬಗಳಿಗೆ ನಿತ್ಯವೂ ಕನಿಷ್ಟ ದರದಲ್ಲಿ ಊಟ, ಉಪಹಾರ ಪೊಟ್ಟಣಗಳನ್ನು ಪಾರ್ಸಲ್ ನೀಡುತ್ತಾ ಬಂದಿರುವದು ಕಂಡು ಬಂತು. ಕೇಂದ್ರ ಸರಕಾರದ ಆದೇಶದಂತೆ ಜಿಲ್ಲಾಡಳಿತ ಕಲ್ಪಿಸಿರುವ; ಅಡುಗೆ ತಯಾರಿಯೊಂದಿಗೆ ಪೊಟ್ಟಣದಲ್ಲಿ ಊಟ - ಉಪಹಾರ ಒದಗಿಸುವ ಅವಕಾಶವನ್ನು ಇಲ್ಲಿ ಪಾಲಿಸುತ್ತಿರುವದು ಬೆಳಕಿಗೆ ಬಂತು.

ಮಾತ್ರವಲ್ಲದೆ; ನಗರಸಭೆಯಿಂದ ವಿವಿಧ ಬಡಾವಣೆಗಳಲ್ಲಿ ಮುಂಜಾನೆ ವಿತರಿಸುವ ಹಾಲು ಇತ್ಯಾದಿ ಸರಬರಾಜಿಗೆ; ಈ ಹೊಟೇಲಿನ ‘ಕ್ಯಾಟರಿಂಗ್’ ವಾಹನವನ್ನು ಮಾಲೀಕರಾದ ಜಯಂತ್‍ಪೂಜಾರಿ ಹಾಗೂ ಶಂಕರ್ ಪೂಜಾರಿ ಉಚಿತವಾಗಿ ಕಲ್ಪಿಸಿರುವ ಅಂಶ ತಿಳಿಯಿತು. ತಮಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಕೊರತೆ ನಡುವೆಯೂ; ಕೇವಲ 4 ಮಂದಿ ಉದ್ಯೋಗಿಗಳನ್ನು ಉಳಿಸಿಕೊಂಡು ಈ ರೀತಿ ಸೇವೆಯ ರೂಪದಲ್ಲಿ ಹೊಟೇಲ್ ನಿರ್ವಹಿಸುವದಾಗಿ ಅವರುಗಳು ‘ಶಕ್ತಿ’ಗೆ ತಿಳಿಸಿದರು.

ಸಣ್ಣ ಪುಟ್ಟ ಕ್ಯಾಂಟೀನ್‍ಗಳು : ಈ ನಡುವೆ ಜಿಲ್ಲೆಯಲ್ಲಿ ಪ್ರಮುಖ ಪಟ್ಟಣಗಳಲ್ಲಿನ ಸಣ್ಣ ಪುಟ್ಟ ಕ್ಯಾಂಟೀನ್‍ಗಳು ತೆರೆದುಕೊಂಡರೂ; ಗ್ರಾಹಕರಿಲ್ಲದೆ ಹೇಳಿಕೊಳ್ಳುವ ವಹಿವಾಟು ಮೊದಲ ದಿವಸ ನಡೆಯಲಿಲ್ಲ; ಒಂದೆರಡು ಸಸ್ಯಾಹಾರಿ - ಮಾಂಸಾಹಾರಿ ಹೊಟೇಲ್‍ಗಳು ತೆರೆದುಕೊಂಡರೂ ಕೈಬೆರಳೆಣಿಕೆ ಮಂದಿ ಪಾರ್ಸಲ್ ಕೊಂಡೊಯ್ದಿದ್ದಾಗಿ ಸಂಬಂಧಿಸಿದ ಮಾಲೀಕರು ಮಾಹಿತಿ ನೀಡಿದರು.

2020 ಮುಗಿದ ಅಧ್ಯಾಯ : ಕೊಡಗು ಹೊಟೇಲ್ ಉದ್ಯಮಗಳು ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ; ಈಗಿನ ಪರಿಸ್ಥಿತಿಯಲ್ಲಿ 2020ರ ವರ್ಷಾಂತ್ಯದ ತನಕ; ಜಿಲ್ಲೆಯಲ್ಲಿ ಹೊಟೇಲ್ ಉದ್ಯಮಗಳ ವ್ಯವಹಾರ ಮುಗಿದ ಅಧ್ಯಾಯವೆಂದು ಬೇಸರ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಕೆಲವೇ ಉದ್ಯಮಗಳು ಸ್ವಂತ ಕಟ್ಟಡ ಮಾಲೀಕತ್ವದಾಗಿದ್ದು; ಇನ್ನುಳಿದಂತೆ ಮಾಸಿಕ ಕನಿಷ್ಟ ರೂ. 30 ಸಾವಿರದಿಂದ 3 ಲಕ್ಷ ತನಕ ಬಾಡಿಗೆ ನೀಡಬೇಕಿದೆ. ಮಾತ್ರವಲ್ಲದೆ ವಿದ್ಯುತ್ ಬಿಲ್, ನೀರು, ತೆರಿಗೆ ಇನ್ನಿತರ ಸೇವಾ ಶುಲ್ಕಗಳ ನಡುವೆ ಕಾರ್ಮಿಕರ

(ಮೊದಲ ಪುಟದಿಂದ) ಸಂಬಳ ಕೊಟ್ಟು; ಹೊಟೇಲ್‍ಗಳಲ್ಲಿ ‘ಪಾರ್ಸಲ್’ ಕೊಟ್ಟು ನಡೆಸುವದು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮವೇ ಆಸರೆ : ಸಣ್ಣ ಪುಟ್ಟ ಉಪಹಾರ ಕೇಂದ್ರ ಹೊರತು ಕೊಡಗಿನ ಹೊಟೇಲ್‍ಗಳು ನಿಂತಿರುವದೇ ಪ್ರವಾಸೋದ್ಯಮದಿಂದ ಎಂದು ಬೊಟ್ಟು ಮಾಡಿದ ಅವರು; ಹಿಂದಿನ ಪರಿಸ್ಥಿತಿಯನ್ನು ಮರು ಸುಧಾರಿಸಲು ಇನ್ನು ಆರು ತಿಂಗಳಿಗೂ ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು. ಎಲ್ಲಿಯ ತನಕ ಕೊಡಗಿನಲ್ಲಿ ಪ್ರವಾಸೋದ್ಯಮ ಪುನರಾರಂಭಗೊಳ್ಳುವದಿಲ್ಲವೋ ಆ ತನಕ ಹೊಟೇಲ್ ಉದ್ಯಮಕ್ಕೆ ಭವಿಷ್ಯವಿಲ್ಲವೆಂದು ನೆನಪಿಸಿದರು.

ಸೋಮವಾರಪೇಟೆಯ ನೋಟ

ಸೋಮವಾರಪೇಟೆ: ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ಇದ್ದಂತಹ ಲಾಕ್‍ಡೌನ್ ಬಿಗಿ ನಿಯಮದಲ್ಲಿ ಸಡಿಲಿಕೆ ಹೆಚ್ಚಿದ್ದ ಬುಧವಾರದಂದು ಸೋಮವಾರಪೇಟೆ ಪಟ್ಟಣದಲ್ಲಿ ಜನಜಂಗುಳಿ ರಹಿತ ವ್ಯಾಪಾರ ವಹಿವಾಟು ನಡೆಯಿತು. ಪಟ್ಟಣದಲ್ಲಿ ಹಲವಷ್ಟು ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿದ್ದರಿಂದ ಒಂದಿಷ್ಟು ಜನ ಸಂಚಾರ ಕಂಡುಬಂದರೂ ಎಲ್ಲಿಯೂ ನೂಕುನುಗ್ಗಲು ಉಂಟಾಗಲಿಲ್ಲ. ಲಾಕ್‍ಡೌನ್‍ನಲ್ಲಿ ಸಡಿಲಿಕೆ ಹೆಚ್ಚಿದ್ದರಿಂದ ಪಟ್ಟಣದ ವರ್ಕ್‍ಶಾಪ್‍ಗಳು, ಹಾರ್ಡ್‍ವೇರ್, ಆಟೋಮೊಬೈಲ್ ಅಂಗಡಿಗಳು, ಕಾಫಿ ಡಿಪೋ, ಕಿರಾಣಿ ಅಂಗಡಿಗಳು, ಬಟ್ಟೆ, ಪಾದರಕ್ಷೆ ಸೇರಿದಂತೆ ಇನ್ನಿತರ ಅಂಗಡಿಗಳು ತೆರೆಯಲ್ಪಟ್ಟಿದ್ದವು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವ್ಯಾಪಾರಕ್ಕೆ ಅವಕಾಶ ಇದ್ದುದರಿಂದ ಯಾವ ಅಂಗಡಿಯ ಎದುರೂ ಜನರು ಸಾಲುಗಟ್ಟಿ ನಿಲ್ಲಲಿಲ್ಲ. ಕಳೆದ ಸೋಮವಾರವಷ್ಟೇ ಸಂತೆ ನಡೆದಿದ್ದರಿಂದ ಇಂದು ನಡೆದ ಸಂತೆಗೆ ಗ್ರಾಹಕರು ಹೆಚ್ಚಾಗಿ ಬಂದಿರಲಿಲ್ಲ. ಹಾರ್ಡ್‍ವೇರ್ ಅಂಗಡಿಗಳಿಂದ ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಎಟಿಎಂಗಳ ಎದುರು ಗ್ರಾಹಕರ ಸಾಲು ಕಂಡು ಬಂತು. ಹೆಚ್ಚಿನ ಮಂದಿಯ ಖಾತೆಯಲ್ಲಿ ಹಣವಿದ್ದರೂ ಸಹ ಕೇಂದ್ರ ಸರ್ಕಾರದಿಂದ ಬಂದ ಹಣವನ್ನು ಡ್ರಾ ಮಾಡುತ್ತಿದ್ದಾರೆ. ಖಾತೆಯಲ್ಲಿ ಈ ಹಿಂದೆ ಇದ್ದ ಹಣವನ್ನು ಡ್ರಾ ಮಾಡುತ್ತಿಲ್ಲ. ಇದರಿಂದಾಗಿಯೇ ಬ್ಯಾಂಕ್‍ಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡುಬರುತ್ತಿದ್ದಾರೆ. ಇಂತವರಿಗಾಗಿಯೇ ಪ್ರತ್ಯೇಕ ಕೌಂಟರ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬ್ಯಾಂಕ್ ಸಿಬ್ಬಂದಿಗಳು ಅಭಿಪ್ರಾಯಿಸಿದರು.

ಹೊಟೇಲ್‍ಗಳು ಇಂದಿಗೂ ಮುಚ್ಚಿರುವದರಿಂದ ಹಲವಷ್ಟು ಮಂದಿ ಮಧ್ಯಾಹ್ನದ ಊಟ, ಕಾಫಿ-ಟೀ ಗಾಗಿ ಹುಡುಕಾಟ ನಡೆಸಿದರು. ಪಟ್ಟಣದಲ್ಲಿ ಎಲ್ಲಾ ಹೊಟೇಲ್‍ಗಳೂ ಬಂದ್ ಆಗಿದ್ದವು.

ಹೊಟೇಲ್‍ನಲ್ಲಿ ಈ ಹಿಂದೆ ಇದ್ದ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಇದೀಗ ಪಾರ್ಸೆಲ್ ನೀಡಲು ಅನುಮತಿ ಇದ್ದರೂ ಸಹ ಸಾರ್ವಜನಿಕರು ಹೊಟೇಲ್‍ಗಳಿಗೆ ಬರುವದು ಅನುಮಾನ. ಒಂದು ವೇಳೆ ತಯಾರಿಸಿದ್ದ ಆಹಾರ ಪದಾರ್ಥಗಳು ಉಳಿಕೆಯಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆ ಸದ್ಯದ ಮಟ್ಟಿಗೆ ಹೊಟೇಲ್ ತೆರೆಯದಿರಲು ತೀರ್ಮಾನಿಸಿದ್ದೇವೆ. ಲಾಕ್‍ಡೌನ್‍ನ ಮುಂದಿನ ಬೆಳವಣಿಗೆ ನೋಡಿಕೊಂಡು ಹೊಟೇಲ್ ತೆರೆಯಲಾಗುವದು ಎಂದು ಹೊಟೇಲ್‍ಗಳ ಮಾಲೀಕರು ಅಭಿಪ್ರಾಯಿಸಿದರು.

ಕಳೆದ ಸೋಮವಾರ ಭರ್ಜರಿ ವ್ಯಾಪಾರ ನಡೆಸಿದ್ದ ಆರ್‍ಎಂಸಿ ಮಾರುಕಟ್ಟೆಯ ವರ್ತಕರು ಇಂದು ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗ್ಗಿನಿಂದ ಸಂಜೆ 4 ಗಂಟೆಯವರೆಗೂ ತರಕಾರಿ ಸೇರಿದಂತೆ ಇನ್ನಿತರ ದಿನಸಿ, ಹಣ್ಣು ಹಂಪಲಿನ ವ್ಯಾಪಾರ ನಡೆಯಿತು. ಗ್ರಾಹಕರ ಕೊರತೆಯಿಂದ ಕೆಲ ವರ್ತಕರು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಮುಚ್ಚಿದರು.

ಕುಶಾಲನಗರದ ಚಿತ್ರಣ

ಕುಶಾಲನಗರ : ಕುಶಾಲನಗರ ಪಟ್ಟಣ ಬಹುತೇಕ ಸಹಜಸ್ಥಿತಿಗೆ ಮರಳಿದಂತೆ ಕಂಡುಬಂದಿತು. ಪಟ್ಟಣದಲ್ಲಿ ಅಂಗಡಿಗಳು ತೆರೆದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಿದ್ದ ದೃಶ್ಯ ಗೋಚರಿಸಿತು; ಇನ್ನೊಂದೆಡೆ ಹೊಟೇಲುಗಳಿಗೆ ಅನುಮತಿ ನೀಡಿದ ಹಿನ್ನೆಲೆ ಕುಶಾಲನಗರ ಪಟ್ಟಣದ ಎರಡು ಹೋಟೆಲ್‍ಗಳು ಮಾತ್ರ ತೆರೆದು ಗ್ರಾಹಕರಿಗೆ ಆಹಾರ ವಸ್ತುಗಳನ್ನು ಒಯ್ಯಲು ನೀಡುತ್ತಿದ್ದ ದೃಶ್ಯ ಕಂಡುಬಂತು.

ಆದರೆ ಗ್ರಾಹಕರ ಸಂಖ್ಯೆ ಕ್ಷೀಣಿಸಿತ್ತು, ಹೋಟೆಲ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಕೊರತೆಯಿಂದ ಸಮಸ್ಯೆ ಎದುರಾಗಿದೆ ಎಂದು ಹೋಟೆಲ್ ಮಾಲೀಕ ನಾರಾಯಣ ಅವರು ‘ಶಕ್ತಿ’ ಗೆ ತಿಳಿಸಿದ್ದಾರೆ. ಹೋಟೆಲ್ ನಲ್ಲಿ ತಯಾರಿಸಿದ ಬಹುತೇಕ ತಿಂಡಿ-ತಿನಿಸುಗಳು ಕೂಡ ಗ್ರಾಹಕರ ಕೊರತೆಯಿಂದ ಉಳಿದಿರುವುದಾಗಿ ಅವರು ಮಾಹಿತಿ ಒದಗಿಸಿದರು. ಇನ್ನೂ ಕೆಲವು ದಿನಗಳ ಕಾಲ ಈ ಸಮಸ್ಯೆ ಎದುರಾಗುವುದು ಖಚಿತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೂಡಿಗೆಯ ವಹಿವಾಟು

ಕೂಡಿಗೆ: ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಹೋಟೆಲ್‍ಗಳಲ್ಲಿ ಇಂದು ಲಾಕ್ ಡೌನ್ ಸಡಿಲಿಕೆಯಿಂದ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಊಟದ ಪಾರ್ಸಲ್ ವ್ಯವಸ್ಥೆ ನಡೆಯಿತು. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈಗಾರಿಕಾ ಘಟಕಗಳಲ್ಲಿ ಶೇ.50 ರಷ್ಟು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಇವರುಗಳು ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಯ ಕಾರ್ಮಿಕರು; ಈ ಹೋಟೆಲ್‍ಗಳಿಂದ ಪಾರ್ಸಲ್ ವ್ಯವಸ್ಥೆ ಯಲ್ಲಿ ತಿಂಡಿ ಮತ್ತು ಊಟವನ್ನು ಪಡೆದುಕೊಂಡುಹೋಗುತ್ತಿದ ದೃಶ್ಯ ಕಂಡು ಬಂತು. ಈ ವ್ಯಾಪ್ತಿಯ ಹೋಟೆಲ್ ಮಾಲೀಕರು ಮತ್ತು ಅವರ ಕುಟುಂಬ ಅಡುಗೆ ಮಾಡುತ್ತಿದ್ದದ್ದು ಕಂಡು ಬಂತು.

ಶ್ರೀಮಂಗಲ ವ್ಯಾಪ್ತಿಯ ನೋಟ

ಶ್ರೀಮಂಗಲ: ಇಂದು ನೀಡಿದ ಹೆಚ್ಚಿನ ಸಡಿಲಿಕೆಯಿಂದ ದಕ್ಷಿಣ ಕೊಡಗಿನ ಹಲವು ಪಟ್ಟಣಗಳಲ್ಲಿ ಸಾಮಾನ್ಯ ಸ್ಥಿತಿಯಂತೆ ಜನರ ವ್ಯವಹಾರ ನಡೆಯಿತು. ಪಟ್ಟಣಗಳಲ್ಲಿ,ಮುಖ್ಯ ರಸ್ತೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಸಮಯ ಮಧ್ಯಾಹ್ನದವರೆಗೆ ವಾಹನ ಸಂಚಾರ ಹೆಚ್ಚು ಕಡಿಮೆ ಮಾಮೂಲಿಯಂತಿತ್ತು. ಮಧ್ಯಾಹ್ನದ ನಂತರ ಪಟ್ಟಣ ಮತ್ತು ರಸ್ತೆಗಳಲ್ಲಿ ವಾಹನ ಸಂಚಾರ ತೀರ ಕಡಿಮೆ ಇತ್ತು.

ಶ್ರೀಮಂಗಲ,ಪೆÇನ್ನಂಪೇಟೆ, ಹುದಿಕೇರಿ,ಮತ್ತು ಕುಟ್ಟದಲ್ಲಿ ಹಲವು ಹೋಟೆಲ್‍ಗಳು ತೆರೆದಿದ್ದವು. ಆದರೇ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು. ಮಾಮೂಲಿನಂತೆ ಹೋಟೆಲ್ ನಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ತಿಂಡಿ,ಆಹಾರ ತಯಾರು ಮಾಡಿರಲಿಲ್ಲ. ಕೇವಲ ಕಾಫಿ,ಟೀ ಗಳಷ್ಟೇ ಕಂಡು ಬಂತು. ಗ್ರಾಹಕರು ಮುಂಚಿತವಾಗಿ ಆರ್ಡರ್ ಮಾಡಿದರೆ ಮಾತ್ರ ಆಹಾರ ತಯಾರಿಸಲು ಮತ್ತು ತಯಾರಿಸಿದ ಆಹಾರ ಪಾರ್ಸೆಲ್ ನೀಡಲು ಮುಂದಾಗುವುದಾಗಿ ಹೋಟೆಲ್ ನಡೆಸುವವವರು ತಿಳಿಸಿದರು.

ಶ್ರೀಮಂಗಲದಲ್ಲಿ ಹೋಟೆಲ್ ನಡೆಸುತ್ತಿರುವವರೊಬ್ಬರು ಲಾಕ್ ಡೌನ್ ನಿಂದ ಹೋಟೆಲ್ ಮುಚ್ಚಲ್ಪಟ್ಟ ಹಿನ್ನಲೆ,ತಮ್ಮ ಹೋಟೆಲ್ ಎದುರು ಜೀವನೋಪಾಯಕ್ಕಾಗಿ ತರಕಾರಿ ತಂದು ಮಾರುತ್ತಿರುವುದು ಕಂಡು ಬಂತು. ಲಾಕ್ ಡೌನ್ ನಂತ ಇದೇ ಮೊದಲ ಬಾರಿಗೆ ಆಟೋಮೊಬೈಲ್ ವರ್ಕ್‍ಶಾಪ್ ಗಳು ತೆರೆದಿರುವುದು. ಶ್ರೀಮಂಗಲ, ಪೆÇನ್ನಂಪೇಟೆಯಲ್ಲಿ ಕಂಡು ಬಂತು.

ಸಿದ್ದಾಪುರ: ಲಾಕ್ ಡೌನ್ ಸಡಿಲಿಕೆಯ ಸಮಯ ಹೆಚ್ಚು ಮಾಡಿರುವ ಹಿನ್ನೆಲೆ ಸಾಮಗ್ರಿ ಖರೀದಿಸಲು ಬರುವವರ ಸಂಖ್ಯೆ ವಿರಳವಾಗಿದ್ದು, ನೂಕು ನುಗ್ಗಲು ಕಂಡುಬಂದಿಲ್ಲ. ಬಹುತೇಕ ಅಂಗಡಿಗಳು ಗ್ರಾಹಕರ ಕೊರತೆಯಿಂದ ಮಧ್ಯಾಹ್ನದ ನಂತರ ಮುಚ್ಚಿದ್ದ ದೃಶ್ಯ ಕಂಡುಬಂತು.

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯಲ್ಲಿ ಸಾಕಷ್ಟು ಹೊಟೇಲ್‍ಗಳು ಇದ್ದರೂ ಕೂಡ ಹೊಟೇಲ್‍ಗಳು ತೆರೆದಿರಲಿಲ್ಲ. ವ್ಯಾಪ್ತಿಯ ಒಂದು ಹೊಟೇಲ್‍ನಲ್ಲಿ ಮಾತ್ರ ಕಾರ್ಮಿಕರ ಕೊರತೆಯಿಂದ ಮನೆಯಿಂದಲೇ ತಿನಿಸುಗಳನ್ನು ತಯಾರಿಸಿ ಅಗತ್ಯ ಉಳ್ಳವರಿಗೆ ಮನೆಯಿಂದಲೇ ಪಾರ್ಸಲ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಂಸ ಹಾಗೂ ಮೀನು ಖರೀದಿಸಲು ಬರುವವರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆ ಮಳಿಗೆಗಳಲ್ಲಿ ಮೀನು ಮಾಂಸಗಳ ಖರ್ಚಾಗದಿರುವುದು ಕಂಡುಬಂತು. ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಅಗ್ಗದ ದರದಲ್ಲಿ ಜೀವದ ಕೋಳಿಗಳನ್ನು ಕೆ.ಜಿ ಒಂದಕ್ಕೆ ರೂ. 120 ರ ಪ್ರಕಾರ ಪಿಡಿಓ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ವಾರ್ಡ್‍ಗಳಲ್ಲಿ ಸದಸ್ಯರು ಮನೆ ಮನೆಗೆ ತೆಗೆದುಕೊಂಡು ವಾಹನದಲ್ಲಿ ಮಾರಾಟ ಮಾಡಿದರು.

ನಾಪೆÇೀಕ್ಲುವಿನಲ್ಲಿ ಬಾಗಿಲು ತೆರೆಯದ ಹೊಟೇಲುಗಳು

ನಾಪೆÇೀಕ್ಲು: ಹೊಟೇಲುಗಳಲ್ಲಿ ಆಹಾರಗಳನ್ನು ಪಾರ್ಸಲ್ ಮೂಲಕ ನೀಡಲು ಸರಕಾರ ಅವಕಾಶ ಕಲ್ಪಿಸಿದ್ದರೂ ಕೂಡ ನಾಪೆÇೀಕ್ಲು ಪಟ್ಟಣದಲ್ಲಿರುವ ಹೊಟೇಲುಗಳನ್ನು ವರ್ತಕರು ತೆರೆಯುವ ಸಾಹಸ ಮಾಡಲಿಲ್ಲ.

ನಾಪೆÇೀಕ್ಲು ಪಟ್ಟಣಕ್ಕೆ ಹೆಚ್ಚಿನ ಜನ ಸ್ಥಳೀಯರೇ ಆಗಮಿಸುತ್ತಾರೆ. ಪ್ರವಾಸಿಗರ ಆಗಮನ ಸ್ವಲ್ಪ ವಿರಳವೇ. ಈ ಹಿನ್ನೆಲೆಯಲ್ಲಿ ಮಾಮೂಲಿನ ದಿನಗಳಲ್ಲಿ ಕೂಡ ವ್ಯಾಪಾರ ಅಷ್ಟಕಷ್ಟೇ. ಕೆಲವರು ಹೊಟೇಲ್ ನಡೆಸಿ ಕೈಸುಟ್ಟುಕೊಂಡವರೂ ಇದ್ದಾರೆ. ಕೊರೊನಾ ಸಮಸ್ಯೆಯಿಂದ ಪ್ರವಾಸಿಗರ ಆಗಮನವೂ ಇಲ್ಲ. ಹಾಗಾಗಿ ಪಾರ್ಸಲ್ ಕೊಳ್ಳುವವರೂ ಇಲ್ಲವಾದರೆ ತಾವು ಮಾಡಿದ ತಿಂಡಿ ತಿನಿಸುಗಳು ಉಳಿದು ನಷ್ಟ ಸಂಭವಿಸಬಹುದು ಎನ್ನುವ ಭೀತಿಯಲ್ಲಿ ಹೊಟೇಲು ತೆರೆಯಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಬಾಗಿಲು ತೆರೆದ ಏಕೈಕ ಕ್ಯಾಂಟೀನ್: ನಾಪೆÇೀಕ್ಲು ಪಟ್ಟಣದಲ್ಲಿ ಒಂದು ಕ್ಯಾಂಟೀನ್ ಮಾತ್ರ ಬಾಗಿಲು ತೆರೆದಿತ್ತು. ಆದರೆ ಕಾಫಿ, ಟೀ ವ್ಯವಸ್ಥೆ ಇರಲಿಲ್ಲ. ಉದ್ದಿನ ವಡೆ, ಮಸಾಲ ವಡೆ, ಬಜ್ಜಿ, ಮತ್ತಿತರ ತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸಿ ಪೆÇಟ್ಟಣದಲ್ಲಿರಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೂ ಯಾರೂ ಅತ್ತ ಸುಳಿದ ಹಾಗೆ ಕಂಡು ಬರಲಿಲ್ಲ.

ಮೊದಲ ದಿನವಾಗಿದ್ದರಿಂದ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಎಂದಿನಂತೆ ವ್ಯಾಪಾರ ಆಗಬಹುದು ಎಂದು ಕ್ಯಾಂಟೀನ್ ಮಾಲಿಕ ಅಬೂಬಕ್ಕರ್ `ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಲಾಕ್‍ಡೌನ್ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಹಾಗೂ ಸಮಯ ಹೆಚ್ಚಿಸಿದ ಕಾರಣ ಜನ ಸಂಖ್ಯೆ ಎಂದಿಗಿಂತ ವಿರಳವಾಗಿ ಕಂಡು ಬಂತು.

ಶನಿವಾರಸಂತೆ: ಪಟ್ಟಣ ಎಂದಿನಂತೆ ಜನ ಜಂಗುಳಿಯಿಂದ ಕೂಡಿತ್ತು. ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ತರಕಾರಿ, ಮಾಂಸ ಖರೀದಿಸಲು ಜನರು ಮುಗಿಬೀಳುತ್ತಿದ್ದರು. ವಾಹನಗಳ ಓಡಾಟ ಮಾಮೂಲಿಗಿಂತ ಹೆಚ್ಚಾಗಿತ್ತು. ಆದರೆ ಜಿಲ್ಲಾಡಳಿತ ಜನರು ಅಂಗಡಿಗೆ ಬರಲು ಸಂಜೆ 4 ಗಂಟೆಯವರೆಗೆ ಸಮಯ ವಿಸ್ತರಿಸುವ ಮಾಹಿತಿ ಗೊತ್ತಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಹಿಂದೆ ನಿಗದಿಪಡಿಸಿದ ಸಮಯದಂತೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅಂಗಡಿಯಲ್ಲಿ ಬಿರುಸಿನಿಂದ ದಿನಸಿ ಪದಾರ್ಥ ಖರೀದಿಸಿ ಜಾಗ ಖಾಲಿ ಮಾಡಿದರು. ಮಧ್ಯಾಹ್ನ ಮೇಲೆ ಜನರು ಅಂಗಡಿಗಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅಂಗಡಿ ಬಾಗಿಲು ತೆರೆದಿದ್ದರೂ ಗ್ರಾಹಕರಿಗಾಗಿ ಕಾಯುವ ಹಾಗೆ ಬಿಕೋ ಎನ್ನಿಸುತ್ತಿತ್ತು. ಕೆಲವೊಂದು ಹೊಟೇಲ್‍ಗಳಲ್ಲಿ ಪಾರ್ಸಲ್ ಊಟ ಕೊಡುತ್ತಿದ್ದರು.

ವೀರಾಜಪೇಟೆ ವರದಿ

ವೀರಾಜಪೇಟೆ: ಲಾಕ್‍ಡೌನ್ ಅವಧಿಯನ್ನು ಸಡಿಲಿಕೆಯ ಬೆಳಗಿನ 6ಗಂಟೆಯಿಂದ ಅಪರಾಹ್ನ 4ಗಂಟೆಯವರೆಗೆ ವಿಸ್ತರಿಸಿದರೂ; ಇಂದು ಬುಧವಾರ ಸಂತೆ ದಿನ ವೀರಾಜಪೇಟೆ ಪಟ್ಟಣದಲ್ಲಿ ಜನ ವಾಹನ ಸಂಚಾರ ಕಡಿಮೆ ಇತ್ತು. ವೀರಾಜಪೇಟೆ ಸುತ್ತ ಮುತ್ತಲಿನ ಪ್ರದೇಶದ ಜನರು ಇಂದು ಪಟ್ಟಣಕ್ಕೆ ಬರಲಿಲ್ಲ.

ವೀರಾಜಪೇಟೆ ವಿಭಾಗದಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದುದರಿಂದ ಇಲ್ಲಿನ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿಯೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಹೆಚ್ಚಿನ ರೋಗಿಗಳು ಕಂಡು ಬಂದಿಲ್ಲ. ವೀರಾಜಪೇಟೆ ಖಾಸಗಿ ಬಸ್ಸು ನಿಲ್ದಾಣ ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದಲ್ಲಿ ಹಣ್ಣು ಹಂಪಲು ತರಕಾರಿ ಅಂಗಡಿಗಳಿದ್ದರೂ ವ್ಯಾಪಾರಿಗಳು, ಗ್ರಾಹಕರಿಲ್ಲದೆ ಪರದಾಡುತ್ತಿದ್ದರು. ವೀರಾಜಪೇಟೆ ತಾಲೂಕಿನ ಕುಟ್ಟ ಹಾಗೂ ಮಾಕುಟ್ಟ ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ಭದ್ರತೆ ಕಲ್ಪಿಸಿರುವುದರಿಂದ ಕೇರಳದಿಂದ ಕಾಲ್ನಡಿಗೆಯಲ್ಲಿ ಬರುವವರಿಗೂ ತಡೆ ಮಾಡಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ಕೇರಳದ ಗಡಿಯಿಂದ ಯಾರೂ ನುಸುಳದಂತೆ ಸಿ.ಸಿ.ಕ್ಯಾಮೆರಾದ ಕಣ್ಗಾವಲಿರಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಂ.ಎಲ್.ನಂದೀಶ್ ತಿಳಿಸಿದರು.

ಗೋಣಿಕೊಪ್ಪಲು ಮಾಹಿತಿ

ಗೋಣಿಕೊಪ್ಪಲು: ಕೊಡಗಿನಲ್ಲಿ ಲಾಕ್ ಡೌನ್ ನಾಲ್ಕು ದಿನಗಳ ಮಟ್ಟಿಗೆ ಸಡಿಲಗೊಂಡರು ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಯಾವುದೇ ಹೊಟೇಲ್‍ಗಳು ತೆರೆಯುವ ಪ್ರಯತ್ನ ಕಂಡುಬಂದಿಲ್ಲ. ಹೊಟೇಲ್‍ಗಳಲ್ಲಿ ಕೇವಲ ಪಾರ್ಸಲ್ ನೀಡುವದಕ್ಕೆ ಮಾತ್ರ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಹೊಟೇಲ್ ಮಾಲೀಕರು ಇಂತಹ ಸಾಹಸಕ್ಕೆ ಮುಂದೆ ಬರಲಿಲ್ಲ.

ನಗರದಲ್ಲಿ ಕೆಲಕಾಲ ವಾಹನ ದಟ್ಟಣೆ ಅಧಿಕವಾಗಿ ಕಂಡು ಬಂದರೂ ಪೆÇಲೀಸರು ವಿವಿಧ ಕಡೆಗಳಲ್ಲಿ ಹೆಚ್ಚಿನ ಸಮಯ ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಿದ್ದರು. ಹಗಲು 10 ಗಂಟೆಯ ವರೆಗೂ ಜನಸಂಖ್ಯೆ ವಿರಳವಾಗಿತ್ತು. ನಂತರದಲ್ಲಿ ಸ್ವಲ್ಪ ಮಟ್ಟಿಗೆ ಜನರು ನಗರಕ್ಕೆ ಆಗಮಿಸಿದ್ದರು. ಅಷ್ಟಾಗಿ ಜನ ಸಂದಣಿ ಕಂಡು ಬರಲಿಲ್ಲ. ಸಂಜೆಯ ನಾಲ್ಕು ಗಂಟೆಗೆ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದವು. ಬಹುತೇಕ ಜನರು ಮಾಸ್ಕ್ ಧರಿಸಿಕೊಂಡು ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ್ದರು. ಆರ್.ಎಂ.ಸಿ.ಯ ತರಕಾರಿ ಮಾರುಕಟ್ಟೆಗೆ ಆಗಮಿಸುವ ನಾಗರಿಕರಿಗೆ ಕೆಲವು ವ್ಯಾಪಾರಸ್ಥರು ಉಚಿತವಾಗಿ ಮಾಸ್ಕ್ ವಿತರಿಸಿ ಜಾಗ್ರತೆ ಮೂಡಿಸಿದರು. ಒಟ್ಟಾರೆ ಜನರು ಕೊರೊನಾ ವೈರಸ್ ಭೀತಿಯಿಂದ ಹೊರಬಂದಂತೆ ಕಾಣಲಿಲ್ಲ. ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ವೈದ್ಯಕೀಯ ತಪಾಸಣೆ ನಡೆಸಿದರು.

ಆಟೋರಿಕ್ಷಾ ವಶಕ್ಕೆ

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣದಲ್ಲಿ ಲಾಕ್‍ಡೌನ್ ಸಡಿಲಿಕೆಯಿಂದ ಅಂಗಡಿ ಮುಗಟ್ಟು ಮೊಬೈಲ್, ವರ್ಕ್‍ಶಾಪ್ ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದರೂ ಜನರಿಲ್ಲದೆ ಬಣಗುಟ್ಟುತ್ತಿತು. ಜೌಷಧಿ ಹಾಗೂ ಹಾಲು ಅಂಡಿಗಳಲ್ಲಿ ಜನರ ಸುಳಿದಾಟವಿದ್ದರೂ ದಿನಸಿ ಮತ್ತಿತರ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಸಂಜೆ 4 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದ್ದರೂ 2 ಗಂಟೆಯ ನಂತರ ಬಿಕೋ ಎನ್ನುತ್ತಿತ್ತು.

ಆಟೋ ರಿಕ್ಷಾ ವಶಕ್ಕೆ: ಆಟೋ ರಿಕ್ಷಾ ಚಾಲನೆ, ಸಲೂನ್ ಹಾಗೂ ಬ್ಯೂಟಿಪಾರ್ಲರ್ ಅಂಗಡಿ ತೆರೆಯಲು ಅನುಮತಿ ನೀಡಿರಲಿಲ್ಲ ಆದರೂ 11 ಮಂದಿ ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ದು ಬಾಡಿಗೆಯಲ್ಲಿ ನಿರತರಾಗಿದ್ದಾಗ ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ನಿಲ್ಲಿಸಿದರು.

- ವರದಿ : ವಿಜಯ್, ವಾಸು, ಸಿಂಚು, ಪ್ರಭಾ, ಹರೀಶ್ ಮಾದಪ್ಪ, ನಾಗರಾಜಶೆಟ್ಟಿ, ನರೇಶ್ಚಂದ್ರ, ಜಗದೀಶ್, ಡಿ.ಎಂ.ಆರ್.