ಮಡಿಕೇರಿ, ಏ. 28: ಪ್ರಸ್ತುತ ಕೊಡಗು ಜಿಲ್ಲೆ ಕೊರೊನಾ ಮುಕ್ತವಾಗಿ ಹಸಿರು ವಲಯಕ್ಕೆ ಸೇರ್ಪಡೆ ಗೊಂಡಿದ್ದು, ಇದಕ್ಕಾಗಿ ಶ್ರಮಿಸಿದ ಕೊಡಗು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಹಕರಿಸಿದ ಸರ್ವರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದ ಉಸ್ತುವಾರಿ ಸಚಿವ ವಿ. ಸೋಮಣ್ಣ, ಕೊಡಗು ಕೊರೊನಾ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಾಮಗ್ರಿ ಖರೀದಿ ಅವಧಿ ಹಾಗೂ ದಿನವನ್ನು ವಿಸ್ತರಿಸುವುದಾಗಿ ಘೋಷಿಸಿದರು.ಜಿಲ್ಲಾ ಪಂಚಾಯತ್ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಸಚಿವರು, ಕೊಡಗಿನಾದ್ಯಂತ ಸಾರ್ವಜನಿಕರು ಅಗತ್ಯ ಸಾಮಗ್ರಿ ಖರೀದಿಸಲು ವಾರದ ನಾಲ್ಕು ದಿನ ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶ ನೀಡಲಾಗುತ್ತದೆ ಎಂದರು.
ಕೊರೊನಾ ಸಂಬಂಧ ಜಿಲ್ಲೆಯಲ್ಲಿ 13 ಚೆಕ್‍ಪೋಸ್ಟ್‍ಗಳನ್ನು ರಚಿಸಿ ಉತ್ತಮ ಬಂದೋಬಸ್ತ್ ಕೈಗೊಂಡ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ ಶೇ. 97 ರಷ್ಟು ಪಡಿತರ ವಿತರಿಸಿರುವ ಆಹಾರ ಇಲಾಖೆಯ ಶ್ರಮ ಶ್ಲಾಘನೀಯ. ಕೊಡಗನ್ನು ಕೊರೊನಾದಿಂದ ಪಾರುಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತೋರಿದ ಕಾಳಜಿಯಿಂದ ಇಂದು ಜಿಲ್ಲೆ ಕೊರೊನಾ ಮುಕ್ತವಾಗಿದ್ದು, ಇದೇ ರೀತಿಯ ಮುಂಜಾಗ್ರತೆಯನ್ನು ಮುಂದಿನ ದಿನಗಳಲ್ಲಿಯೂ ಕೈಗೊಳ್ಳು ವಂತಾಗಬೇಕು ಎಂದು ಸಚಿವ ಸೋಮಣ್ಣ ಸಲಹೆಯಿತ್ತರು.
ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಮಳೆಗಾಲ ಸಮೀಪ ದಲ್ಲಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾದ ಮರಳು, ಜೆಲ್ಲಿ ಇತ್ಯಾದಿ ಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗದಂತೆ ತಡೆಯಲು ಕಾವೇರಿ ನದಿ ಹೂಳೆತ್ತುವ ಕಾರ್ಯ ಕೈಗೆತ್ತಿ ಗೊಳ್ಳಬೇಕು. ಮರಳು ತೆಗೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ, ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನ ಗಡಿ ಸೇರಿದಂತೆ ಹಲವೆಡೆ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಅಭಿವೃದ್ಧಿ ಕೆಲಸ ಗಳನ್ನು ವಹಿಸಲಾಗಿದ್ದು, ಅವರುಗಳಿಗೆ ಕಾಮಗಾರಿಗಳನ್ನು ನಿರ್ವಹಿಸಲು ಅನುಕೂಲ ಕಲ್ಪಿಸಬೇಕು. ಸಹಕಾರ ಕ್ಷೇತ್ರದಲ್ಲಿ ಮಾಡಲಾಗಿರುವ 1 ಲಕ್ಷ ರೂ. ಸಾಲ ಮನ್ನಾದ ಉಪಯೋಗ ಜಿಲ್ಲೆಯಲ್ಲಿ
(ಮೊದಲ ಪುಟದಿಂದ) ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಇನ್ನು ಸಿಕ್ಕಿಲ್ಲ ಎಂದರು. ಈ ಬಗ್ಗೆ ಸಹಕಾರ ಸಚಿವರೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ಸಚಿವ ಸೋಮಣ್ಣ ಭರವಸೆಯಿತ್ತರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಂಪಾಜೆ ಗೇಟ್ ಮೂಲಕ ಮಂಗಳೂರಿನಿಂದ ಮೀನು ಸಾಗಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಕೊಪ್ಪ ಗೇಟ್‍ನಲ್ಲಿ ಪಿರಿಯಾಪಟ್ಟಣದಿಂದ ಹಂದಿಮಾಂಸ ಬರುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದರು.
ಬಾಳೆ ಇತ್ಯಾದಿ ಅಗತ್ಯ ವಸ್ತುಗಳನ್ನು ಸಾಗಿಸುವುದಾದರೂ ಸೂಕ್ತ ದಾಖಲಾತಿಗಳ ಪರಿಶೀಲನೆ ತಪಾಸಣಾ ಗೇಟ್‍ಗಳಲ್ಲಿ ನಡೆಯುವಂತಾಗಬೇಕೆಂದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಪಾಸಣಾ ಗೇಟ್‍ಗಳಲ್ಲಿ ಅಕ್ರಮ ಸಂಚಾರಕ್ಕೆ ಅವಕಾಶ ಸಿಗದಂತೆ ಪೊಲೀಸ್ ಇಲಖೆ ಎಚ್ಚರವಹಿಸು ವಂತೆ ಸೂಚಿಸಿದರು.
4ಜಿ ಅಡಿಯಲ್ಲಿ ವಹಿಸ ಲಾಗಿರುವ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಸಂಬಂಧಿಸಿದ ಇಲಾಖೆ ಮಾಹಿತಿ ನೀಡಬೇಕೆಂದರು. ಈ ಕುರಿತು ಸಮಗ್ರ ಮಾಹಿತಿಯನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಎರಡು ದಿನಗಳೊಳಗೆ ಜಿಲ್ಲೆಯ ಜನಪ್ರತಿ ನಿಧಿಗಳಿಗೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಲೀಡ್ ಬ್ಯಾಂಕ್‍ಗಳಲ್ಲಿ ಗ್ರಾಹಕರ ನಿರಖು ಠೇವಣಿಯನ್ನು ಅವರು ಪಡೆದ ಸಾಲಕ್ಕೆ ಮನ್ನಾ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದಾಗಿ ಹೇಳಿದರು. ಕೊಡಗಿನ ಜನತೆ ವಿದ್ಯುತ್ ಶುಲ್ಕವನ್ನು ಪ್ರಾಮಾಣಿಕ ವಾಗಿ ಪಾವತಿಸುತ್ತಾರೆ. ಪ್ರಸ್ತುತ ಸ್ಥಿತಿಯಲ್ಲಿ ಕೊಂಚ ತಡವಾಗ ಬಹುದು. ಹಾಗೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಬೇಡಿ ಎಂದು ಸೆಸ್ಕ್ ಅಧಿಕಾರಿಗೆ ಸುನಿಲ್ ಹೇಳಿದರು. ನಗರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಗಿ ನವೀಕರಣಕ್ಕೆ ಒಂದು ತಿಂಗಳ ಅವಕಾಶ ನೀಡುವಂತೆ ನಗರಸಭಾ ಆಯುಕ್ತರಿಗೆ ಸುನಿಲ್ ಸುಬ್ರಮಣಿ ಸೂಚಿಸಿದರು. ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ. ಸುಮನ್, ಜಿ.ಪಂ. ಸಿಇಓ ಲಕ್ಷ್ಮೀಪ್ರಿಯ ಇದ್ದರು.