ತುಂಬಾ ಸುಸ್ತಾಗುತ್ತಿತ್ತು. ದೇಹದ ಹಿಂಭಾಗದಲ್ಲಿದ್ದ ಕ್ಯಾನ್ಸರ್ ಗೆಡ್ಡೆ ಕುಳಿತುಕೊಳ್ಳಲೂ ಕಷ್ಟಕೊಡುತ್ತಿತ್ತು. ನಿಂತೇ ಇದ್ದರೆ ತೀರಾ ನಿತ್ರಾಣ. ರಾತ್ರಿ ವೇಳೆ ನೋವಿನಿಂದ ಜೋರಾಗಿ ಕಿರುಚಿದ ಸನ್ನಿವೇಶಗಳೂ ಇತ್ತು. ಮಿತ್ರರು ಅದೆಷ್ಟೇ ಉಪಚರಿಸಿದರೂ ಕೂಡ ತಿನ್ನಲು, ನೀರು ಕುಡಿಯಲು ಕಷ್ಟವೆನಿಸುತ್ತಿತ್ತು. ಜೀವನದಲ್ಲಿ, ನರಳುವುದಕ್ಕಿಂತ ಪ್ರಾಣ ತ್ಯಜಿಸುವುದೇ ಉತ್ತಮವೆಂಬುದು ಮಿತ್ರರಿಗೂ ಇದರ ಅರಿವಾಯಿತು. ಮಾಲೀಕರಂತು ಕಾಣಲಿಲ್ಲ. ಅವರೇ ನನ್ನನ್ನು ಬೀದಿಗೆ ಬಿಟ್ಟಿದ್ದೇ ಆದರೆ, ಈಗ ಯಾಕೆ ಬರುತ್ತಾರೆ ಹೇಳಿ? ನನ್ನ ಈ ಕ್ಯಾನ್ಸರ್ ಗೆಡ್ಡೆ ಶಸ್ತ್ರ ಚಿಕಿತ್ಸೆ ಮಾಡಿದರೂ ಕೂಡ ಪುನಃ ಬೆಳೆಯುತ್ತದೆ. ಪುನಃ ಅದೇ ನೋವು, ನರಳಾಟ ತಡೆದುಕೊಳ್ಳಲು ಸಾಧ್ಯವಿಲ್ಲ. ನನ್ನಂತಹ ಮೂಕ ಪ್ರಾಣಿಗಳಿಗೆ ಗುಣವಾಗದ ಕಾಯಿಲೆ ಬಂದರೆ ಚುಚ್ಚು ಮದ್ದು ನೀಡಿ ಪ್ರಾಣ ತೆಗೆಯುವ ಅನುಮತಿ ಇದೆ.

ಮಿತ್ರರು ಡ್ರಿಪ್ಸ್ ಹಾಕಿಸಲು 2 ಬಾರಿ ವೈದ್ಯರ ಬಳಿ ಕರೆದೊಯ್ದಿದ್ದರು. ಈ ಬಾರಿಯೂ ವೈದ್ಯರ ಬಳಿ ಕರೆದುಕೊಂಡು ಹೋದಾಗ, ಯಾಕೆ ಪುನಃ ಡ್ರಿಪ್ಸ್ ಕೊಡಿಸುತ್ತಾರೆ, ನನ್ನ ನರಳಾಟ ಇವರಿಗೆ ತಿಳಿದಿಲ್ಲವೆ? ಎಂಬ ಪ್ರಶ್ನೆಗಳು ಹುಟ್ಟತೊಡಗಿತು. ಆದರೆ, ವೈದ್ಯರು ಚುಚ್ಚು ಮದ್ದನ್ನು ಹತ್ತಿರ ತಂದಾಗ, ಈ ಬಾರಿಯ ವೈದ್ಯರ ಭೆÉೀಟಿ ಕೊನೆಯದ್ದೆಂದು ಅರಿವಾಯಿತು.

ಶಾಂತಿಯಿಂದ ಜೀವ ತ್ಯಜಿಸಿದೆ. ಮಾಲೀಕರ ಯೋಚನೆ ನನಗಿನ್ನಿಲ್ಲ, ನರಳಾಟವೆಂಬ ನರಕ ದೂರವಾಯಿತು. ಮಿತ್ರರು ನನ್ನನ್ನು ಅಲ್ಲೇ ಬಿಡಲಿಲ್ಲ. ಗುಂಡಿ ತೋಡಿ ನನ್ನನ್ನು ಮುಚ್ಚಿಹಾಕಿದರು. ನನ್ನ ಮಾಲೀಕರ ಕೆಲಸವಾಗಿದ್ದ ಈ ನನ್ನ ಅಂತ್ಯ ಸಂಸ್ಕಾರವನ್ನು ಈ ಅಪರಿಚಿತ ಮಿತ್ರರು ನಡೆಸಿಕೊಟ್ಟರು. ಇವರಿಗೆ ನನ್ನ ಧನ್ಯವಾದಗಳು.

-ಪೊಮೆರೇನಿಯನ್