ಸೋಮವಾರಪೇಟೆ, ಏ.27: ಕೊರೊನಾ ಲಾಕ್‍ಡೌನ್ ನಿಯಮದಲ್ಲಿ ವಾರದ ಮೂರು ದಿನಗಳ ಮಟ್ಟಿಗೆ ಈ ಹಿಂದೆ ಇದ್ದ ಅವಧಿಯನ್ನು ವಿಸ್ತರಿಸಿದ್ದರಿಂದ ಪಟ್ಟಣ ಸೇರಿದಂತೆ ಮಾರುಕಟ್ಟೆಗಳಲ್ಲಿ ಜನಜಂಗುಳಿಗೆ ಅಲ್ಪ ವಿರಾಮ ಬಿದ್ದಿತು.

ಈ ಹಿಂದೆ ವಾರದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಮಂದಿ ತರಾತುರಿಯಲ್ಲಿ ಪಟ್ಟಣಕ್ಕೆ ಆಗಮಿಸಿ, ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ಮುಂಗಟ್ಟುಗಳ ಎದುರು ಮುಗಿಬೀಳುತ್ತಿದ್ದರು.

ಆದರೆ ಜಿಲ್ಲಾಡಳಿತ ಲಾಕ್‍ಡೌನ್ ಸಡಿಲಿಕೆಯ ಅವಧಿಯನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿಸಿದ್ದರಿಂದ ಜನಜಂಗುಳಿಗೆ ಅಲ್ಪವಿರಾಮ ಬಿದ್ದು, ಸಾವಕಾಶದಿಂದ ಸಾರ್ವಜನಿಕರು ಖರೀದಿಯಲ್ಲಿ ತೊಡಗಿಕೊಂಡಿದ್ದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟುಗಳು, ಮೆಡಿಕಲ್ ಶಾಪ್‍ಗಳ ಎದುರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಖರೀದಿ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.

ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ಎಲ್ಲಾ ರೀತಿಯ ವಾಹನ ಗಳ ಪ್ರವೇಶವನ್ನು ನಿಷೇಧಿಸಿದ್ದರಿಂದ ಯಾವದೇ ಗೊಂದಲಗಳಿಗೆ ಆಸ್ಪದವಾಗದಂತೆ ಸರತಿ ಸಾಲಿನಲ್ಲಿ ನಿಂತು ದಿನಸಿ, ತರಕಾರಿ, ಔಷಧಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಿದರು.

ಮಾಮೂಲಿ ಸಂತೆ ದಿನವಾದ್ದ ರಿಂದ ಸೋಮವಾರದಂದು ಪಟ್ಟಣದಲ್ಲಿ ಹೆಚ್ಚಿನ ವಾಹನ-ಜನಸಂಚಾರ ಕಂಡುಬಂತು. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಹೆಚ್ಚಿನ ಟ್ರಾಫಿಕ್ ಇತ್ತು. ಸಂತೆ ನಡೆಯುವ ಆರ್‍ಎಂಸಿ ಮಾರುಕಟ್ಟೆಯಲ್ಲೂ ಗ್ರಾಹಕರ ಓಡಾಟ ಹೆಚ್ಚಾಗಿತ್ತು.

ಗ್ರಾಮೀಣ ಭಾಗದಿಂದ ರೈತರು ತಾವು ಬೆಳೆದಿದ್ದ ಕೃಷಿ ಫಸಲನ್ನು ತಂದು ಸ್ವತಃ ಮಾರಾಟ ಮಾಡುತ್ತಿದ್ದರು. ಇತರ ಬಹುತೇಕ ಉದ್ಯಮಗಳು ಬಂದ್ ಆಗಿರುವದರಿಂದ ಪಟ್ಟಣದ ಇತರ ಅಂಗಡಿಗಳ ಮಾಲೀಕರುಗಳೂ ತರಕಾರಿ, ದಿನಸಿ ವ್ಯಾಪಾರಕ್ಕೆ ಇಳಿದಿರುವದರಿಂದ ವರ್ತಕರ ಸಂಖ್ಯೆಯಲ್ಲೂ ಏರಿಕೆ ಕಂಡಿತು.

ಪೊಲೀಸರು ಪಟ್ಟಣದಲ್ಲಿ ಆಗಾಗ್ಗೆ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡುತ್ತಿದ್ದರು. ಮಧ್ಯಾಹ್ನ 2 ಗಂಟೆಯ ವೇಳೆ ಸೈರನ್ ಮೊಳಗಿಸುತ್ತಾ ಸಂಚರಿಸಿದ ಪೊಲೀಸರು ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದರು.

ಸುಂಟಿಕೊಪ್ಪ : ಸುಂಟಿಕೊಪ್ಪ ಗ್ರಾ.ಪಂ. ವತಿಯಿಂದ ಮಾರುಕಟ್ಟೆ ಯಲ್ಲಿ ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಮಾರಾಟಕ್ಕೆ ಅನುಮತಿ ನೀಡಿದ್ದು ಗ್ರಾಹಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಆಹಾರ ಸಾಮಗ್ರಿಗಳನ್ನು ಖರೀದಿಸಿದರು.

ಈ ಹಿಂದೆ ಹೆದ್ದಾರಿ ಬದಿ ಹಾಗೂ ವಾಹನ ಚಾಲಕ ನಿಲ್ದಾಣದಲ್ಲಿ ತರಕಾರಿ ದಿನಸಿ ವ್ಯಾಪರಕ್ಕೆ ಸ್ಥಳಾವಕಾಶ ಒದಗಿಸಿದ್ದು ಇದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿರುವುದನ್ನು ಮನಗಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಲವು ತರಕಾರಿ ಹಾಗೂ ದಿನಸಿ ವ್ಯಾಪಾರಿಗಳಿಗೆ ಪರವನಾಗಿ ನೀಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದರು.

ಸೋಮವಾರ ಲಾಕ್‍ಡೌನ್ ಸಡಿಲ ವ್ಯಾಪಾರ ವಹಿವಾಟಿಗೆ ಆದೇಶದ ಹಿನೆÀ್ನಲೆ ಸುಂಟಿಕೊಪ್ಪ ವಾರದ ಸಂತೆಯಂತೆ ಮಾರುಕಟ್ಟೆ ಯಲ್ಲಿ ತರಕಾರಿ ದಿನಸಿ ಅಂಗಡಿಗಳು ತೆರೆದಿದ್ದರು. ಕೆಲವು ವ್ಯಾಪಾರಸ್ಥರು ಅನುಮತಿ ಇಲ್ಲದೆಯೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಪಿಡಿಓ ವೇಣು ಗೋಪಾಲ್ ಹಾಗೂ ಠಾಣಾಧಿಕಾರಿ ಬಿ.ತಿಮ್ಮಪ್ಪ ಗಮನಿಸಿ ಎಚ್ಚರಿಕೆ ನೀಡಿದರು. ಆಸ್ಸಾಂ ಹಾಗೂ ತಮಿಳು ನಾಡು ಮೂಲದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತರಕಾರಿ ದಿನಸಿ ಸಾಮಗ್ರಿಗಳನ್ನು ಖರೀದಿಸಿದರು.