ವೀರಾಜಪೇಟೆ, ಏ. 27 : ಕೇರಳ ರಾಜ್ಯಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಕೊರೊನಾ ಮುಂಜಾಗ್ರತೆ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು 29 ದಿನಗಳ ಹಿಂದೆ ವೀರಾಜಪೇಟೆಗೆ ಬಂದಿದ್ದು ನಂತರ ಇಲ್ಲಿನ ಬಾಳುಗೋಡು, ಆರ್ಜಿ ಗ್ರಾಮಗಳ ವಸತಿ ಶಾಲೆಯ ಕ್ವಾರಂಟೈನ್‍ನಲ್ಲಿದ್ದ 71 ಮಂದಿ ಕಾರ್ಮಿಕರುಗಳನ್ನು ಉತ್ತರ ಕರ್ನಾಟಕದ ಅವರುಗಳ ತವರೂರಿಗೆ ಕಳುಹಿಸಿ ಕೊಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶಿಸಿದ ಹಿನ್ನೆಲೆಯಲ್ಲಿ ಎಲ್ಲರನ್ನು ಮೂರು ಖಾಸಗಿ ಸಂಸ್ಥೆ ಬಸ್ಸಿನಲ್ಲಿ ನಿನ್ನೆ ದಿನ ಅವರುಗಳ ತವರಿಗೆ ಕಳುಹಿಸಲಾಯಿತು ಎಂದು ತಾಲೂಕು ತಹಶೀಲ್ದಾರ್ ಎಂ.ಎಲ್. ನಂದೀಶ್ ತಿಳಿಸಿದ್ದಾರೆ.ಕೊಡಗಿನ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕಾರ್ಮಿಕರ ಕ್ವಾರಂಟೈನ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಪಾಸಣೆ ಅವಧಿ ಮುಗಿದಿದ್ದರಿಂದ ತಮ್ಮನ್ನು ತವರಿಗೆ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದರು. ಕಾರ್ಮಿಕರುಗಳು ವಿಜಾಪುರ, ಕೊಪ್ಪಳ, ಹಾವೇರಿ, ಗದಗ್ ಇತರೆಡೆಗಳಿಂದ ಕೆಲಸಕ್ಕಾಗಿ ಕೇರಳಕ್ಕೆ ವಲಸೆ ಹೋಗಿದ್ದರು. ಐದು ಮಂದಿ ಕ್ವಾರಂಟೈನ್‍ಗೆ ಸೇರ್ಪಡೆ ಕೊಡಗು ಕೇರಳ ಗಡಿಪ್ರದೇಶದ ಅರಬ್ಬಿತಿಟ್ಟು ಬಳಿಯ ಕಾಫಿ ತೋಟದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಅರಣ್ಯ ರಕ್ಷಕರ ತಪಾಸಣೆಗೊಳಗಾಗಿ ನಂತರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದ 4ಮಂದಿಯನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ಬಿ.ಸಿ.ಎಂ. ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ಗೂ; ಅದರಂತೆ
ತಾ. 25ರಂದು ಕಾಸರಗೋಡಿನಿಂದ ವೀರಾಜಪೇಟೆಗೆ ಬಂದ ನಿವಾಸಿಯೊಬ್ಬರನ್ನು ತಪಾಸಣೆ ಗೊಳಪಡಿಸಿ ಬೇಟೋಳಿ
ಗ್ರಾಮದ ಅವರ ಮನೆಯಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ನಂದೀಶ್ ತಿಳಿಸಿದ್ದಾರೆ.
ಪ್ರಕರಣ ದಾಖಲು
ಕಳೆದ ಎರಡು ತಿಂಗಳ ಹಿಂದೆ ಕೇರಳದಿಂದ ಕರಿಮೆಣಸು ಕುಯ್ಯಲು ವೀರಾಜಪೇಟೆಗೆ ಬಂದ ನಾಲ್ವರು ಕಾರ್ಮಿಕರುಗಳನ್ನು ನಿನ್ನೆ ದಿನ ಬೆಳಗಿನ ಜಾವ ಆಟೋ ರಿಕ್ಷಾದಲ್ಲಿ ಕೆದಮುಳ್ಳೂರು ಬಳಿಯ ತೋರ ಗ್ರಾಮಕ್ಕೆ ತಲುಪಿಸಿ ಕೇರಳದ ಗಡಿ ಭಾಗಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ಅನುವು ಮಾಡಿಕೊಟ್ಟ ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟದ ಮಾಲೀಕ ಸಿ.ಬಿದ್ದಪ್ಪ ಎಂಬುವರ ವಿರುದ್ಧ ಇಲ್ಲಿನ ಗ್ರಾಮಾಂತರ ಪೊಲೀಸರು ಕೋವಿಡ್ 19 ಉಲ್ಲಂಘನೆಯ ಐ.ಪಿ.ಸಿ 269 ಹಾಗೂ 188 ರ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.