*ಗೋಣಿಕೊಪ್ಪ, ಏ. 27: ಒಂದಿಷ್ಟು ಮಂದಿ ಕೊಡಗಿನ ಮೂಲೆ ಮೂಲೆಗಳಲ್ಲಿ, ಕೆಲವರು ಬೆಂಗಳೂರು, ಮಂಗಳೂರು, ದಾವಣಗೆರೆ, ಬಾದಾಮಿ, ಗೋಕಾಕ್, ಮೈಸೂರು, ಮಂಡ್ಯ, ಕುಂಬಳೆ ಬಳ್ಳಾರಿ, ಕೋಲಾರ, ಅಷ್ಟೇ ಏಕೆ ಆಸ್ಟ್ರೇಲಿಯಾದಲ್ಲಿ ಕುಳಿತಿದ್ದರು.., ಅಲ್ಲಿಂದಲೇ ತಾವು ರಚನೆ ಮಾಡಿದ ಕವನಗಳನ್ನು ವಾಚನ ಮಾಡಿದರು.., ಆದರೆ, ಎಲ್ಲರೂ ಒಟ್ಟಾಗಿಯೇ ಕವನದ ಸ್ವಾದವನ್ನು ಸವಿದರು...!

ಇದು ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಆನ್‍ಲೈನ್ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಮನಸುಗಳಿಗಾದ ಅನುಭವ. ಲಾಕ್‍ಡೌನ್‍ನಿಂದಾಗಿ ಎಲ್ಲ ಚಟುವಟಿಕೆಗಳಂತೆ ಸಾಹಿತ್ಯ ಚಟುವಟಿಕೆಗಳೂ ಕೂಡ ಸ್ಥಗಿತಗೊಂಡಿವೆ. ಹಾಗಾಗಿ ಕೆಲವರು, ಕೆಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಅದರಂತೆ ಸಿರಿಗನ್ನಡ ವೇದಿಕೆ ವತಿಯಿಂದ ಆನ್‍ಲೈನ್‍ನಲ್ಲಿ ಜೂಮ್ ಆ್ಯಪ್ ಮೂಲಕ ಕೊರೊನಾ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ, ಕೊಡವ, ಅರೆಭಾಷೆ, ತುಳು ಭಾಷೆಗಳಲ್ಲಿ ಮೂವತ್ತು ಮಂದಿ ಕವಿಗಳು ಕವನ ವಾಚನ ಮಾಡಿದರು.

ಆ್ಯಪ್ ಮೂಲಕ ಕವಿಗಳು ಒಬ್ಬರಾದ ನಂತರ ಒಬ್ಬರು ಸರತಿಯಲ್ಲಿ ಕವನ ವಾಚನ ಮಾಡಿದರೆ, ಉಳಿದ ಕವಿಗಳು ಅವರ ಕುಟುಂಬಸ್ಥರು, ಸಂಬಂಧಿಗಳೇ ಕವನಗಳಿಗೆ ಕವಿಯಾಗಿದ್ದರು.

ಕೆ. ಬಾಡಗದ ಅಲ್ಲಾರಂಡ ರಂಗ ಚಾವಡಿಯಿಂದ ಆರಂಭಗೊಂಡ ಕವಿಗೋಷ್ಠಿಯನ್ನು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಅರೆಭಾಷೆಯಲ್ಲಿ ‘ಕೊರೊನಾ ಇದ್ ಸರಿನಾ..’ ಎನ್ನುವ ಕವನ ವಾಚನ ಮಾಡುವುದರೊಂದಿಗೆ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಲಾಕ್‍ಡೌನ್‍ನಿಂದ ಮನೆಯಿಂದ ಹೊರ ಬಾರಲಾಗದ ಪರಿಸ್ಥಿತಿಯಲ್ಲಿ ಇಂತಹ ಚಟುವಟಿಕೆಗಳ ಮೂಲಕ ಸಾಹಿತ್ಯದ ಬೆಳವಣಿಗೆಯೊಂದಿಗೆ ಪರಸ್ಪರ ಪರಿಚಯಕ್ಕೂ ನಾಂದಿ ಹಾಡಿದಂತಾಗಿದೆ ಎಂದು ಹೇಳಿದರು.

ಅತಿಥಿಯಾಗಿ ಸುಳ್ಯದ ಬಡ್ಡಡ್ಕದಿಂದ ಮಾತನಾಡಿದ ಸಾಹಿತಿ ಕುಡೆಕಲ್ಲು ವಿದ್ಯಾಧರ್ ಅವರು, ಮೇಲು ನೋಟಕ್ಕೆ ಬಡವ ಶ್ರೀಮಂತರನ್ನು ಒಂದು ಮಾಡಿ ಸಮಾನತೆಯನ್ನು ಕೊರೊನಾ ಸೃಷ್ಟಿಸಿದೆ ಎಂದು ಕಂಡು ಬಂದರೂ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದು ಹೇಳಿದರು.

ಮೇಲು ವರ್ಗ ಮತ್ತು ಮಧ್ಯಮ ವರ್ಗದ ಜನತೆಗೆ ಇದರ ಬಾಧೆ ಅಷ್ಟಾಗಿ ತಟ್ಟದಿರಬಹುದು. ಆದರೆ ಶೇ. 80 ರಷ್ಟು ಬಡವರ್ಗದವರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ವೆಂಕಟರಾಮಯ್ಯ ಮಾತನಾಡಿ ಯಾರೂ ಒಂದು ಕಡೆ ಸೇರಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಂತ್ರಜ್ಞಾನ ಬಳಸಿಕೊಂಡು ವಿನೂತನ ಮಾದರಿಯಲ್ಲಿ ಕವಿಗೋಷ್ಠಿ ಆಯೋಜಿಸಿದುದು ಶ್ಲಾಘನೀಯ. ಕೊರೊನಾ ಗೃಹ ಬಂಧನದಲ್ಲಿದ್ದುಕೊಂಡು ಒಂದು ಕಡೆ ಸೇರಲು ತವಕಿಸುತ್ತಿದ್ದ ಕವಿ ಮನಸ್ಸುಗಳಿಗೆ ಆನ್ ಲೈನ್ ಕವಿಗೋಷ್ಠಿ ಸಂತಸ ತಂದಿದೆ. ಖರ್ಚಿಲ್ಲದೆ ಆಯೋಜಿಸಿದ್ದ ಕವಿಗೋಷ್ಠಿ ಅತ್ಯಂತ ಯಶಸ್ವಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಸಾಮಾಜಿಕ ಸೂತಕ ಬಿತ್ತಿರುವ ಕೊರೊನಾ ವೈರಸ್ ನಿಂದಾಗಿ ಒಂದೆಡೆ ಸೇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು ಆನ್ ಲೈನ್ ಕವಿಗೋಷ್ಠಿ ನಡೆಸುವ ಪ್ರಯತ್ನಕ್ಕೆ ಕೈ ಹಾಕಲಾಯಿತು ಎಂದರು.

ಹಾಸನದ ಲೇಖಕಿ ಸುಜಾತ ತಳವಾರ, ಬೆಂಗಳೂರಿನ ಸಿನಿಮಾ ಮಾಧ್ಯಮದ ಗೋಪಿಪೀಣ್ಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕೊಡಗಿನ ಕವಿಗಳಾದ ಡಾ. ಜೆ. ಸೋಮಣ್ಣ, ಪಿ.ಎಸ್. ವೈಲೇಶ್, ಕೇಡನ ಪ್ರಗತಿ, ವೀಣಾರಾವ್, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಯಾಲದಾಳು ಕುಮುದಾ ಜಯಪ್ರಶಾಂತ್, ಸಿಡ್ನಿಯಲ್ಲಿರುವ ಐಮಂಡ ಜಗದೀಶ್ ಅವರುಗಳು ಕನ್ನಡದಲ್ಲಿ, ಬಾರಿಯಂಡ ಜೋಯಪ್ಪ ಅರೆಭಾಷೆಯಲ್ಲಿ, ಉಳುವಂಗಡ ಕಾವೇರಿ, ಚಂಗಚಂಡ ರಶ್ಮಿ ಅವರುಗಳು ಕೊಡವ ಭಾಷೆಯಲ್ಲಿ ಕವನ ವಾಚನ ಮಾಡಿದರು.

ಗಾಯಕ ಲಿಯಾಕತ್ ಆಲಿ ತಮ್ಮ ಮನೆಯಿಂದಲೇ ಪ್ರಾರ್ಥನಾಗೀತೆ ಹಾಡಿದರೆ, ಕೊಡವ ಮಕ್ಕಳ ಕೂಟದ ಸಂಚಾಲಕ ಬೊಳ್ಳಜೀರ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಅಲ್ಲಾರಂಡ ರಂಗಚಾವಡಿಯ ಮುಕುಲ್ ನಂಜಪ್ಪ ನಿರ್ವಹಿಸಿದರು.