ಗೋಣಿಕೊಪ್ಪಲು, ಏ. 26: ದ. ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು ಹುಲಿ ಸೆರೆಗೆ ಒತ್ತಾಯಿಸಿ ರೈತರು ಭತ್ತದ ಗದ್ದೆಯಲ್ಲಿ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಪ್ರತಿಭಟನೆ ಹಿಂಪಡೆಯುವುದಿಲ್ಲ ವೆಂದು ಆಗ್ರಹಿಸಿ ರೈತರು ಪ್ರತಿಭಟನೆಯನ್ನು ಮಧ್ಯಾಹ್ನದವರೆಗೂ ಮುಂದುವರಿಸಿದರು.

ಹುದಿಕೇರಿ ಹೋಬಳಿ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ ಗ್ರಾಮದ ರೈತರಾದ ಮುದ್ದಿಯಡ ಜಾಲಿ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಎತ್ತನ್ನು ಭಾನುವಾರ ಮುಂಜಾನೆ ಹುಲಿ ದಾಳಿ ನಡೆಸಿ ತಿಂದು ಹಾಕಿತ್ತು.ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ತೆರಳಿದ ರೈತ ಮುಖಂಡರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು, ಹುಲಿ ಸೆರೆಗೆ ಇಂದೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭತ್ತದ ಗದ್ದೆಯಲ್ಲಿಯೇ ಸುಡು ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು. (ಮೊದಲ ಪುಟದಿಂದ) ವೀರಾಜಪೇಟೆ ಡಿಎಫ್‍ಓ ಶಿವಶಂಕರ್, ಮಧ್ಯಾಹ್ನದ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಅಧಿಕಾರಿಗಳ ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆಯಿತು. ನಂತರ ಹುಲಿ ಸೆರೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸುದೀರ್ಘ ಚರ್ಚೆ ನಡೆಸಿದರು.

ಅಂತಿಮವಾಗಿ ಹುಲಿ ಸೆರೆಗೆ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಸ್ಥಳಕ್ಕೆ ಮತ್ತಿಗೋಡು ಆನೆ ಶಿಬಿರದಿಂದ ಮೂರು ಸಾಕಾನೆಗಳನ್ನು ಕರೆಸಿ ತಕ್ಷಣವೇ ಸಿಬ್ಬಂದಿಗಳ ಸಹಕಾರದಿಂದ ಹುಲಿ ಸೆರೆಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಈ ಸಂದರ್ಭ ಹುಲಿ ದಾಳಿಯಿಂದ ಜಾನುವಾರು ಕಳೆದುಕೊಂಡ ರೈತನಿಗೆ ಪರಿಹಾರ ಬದಲು ಹಸು ಕೊಡಿಸುವಂತೆ ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್ ಒತ್ತಾಯಿಸಿದರು. ಆರಂಭದಲ್ಲಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರಾದರು ಅಂತಿಮವಾಗಿ ಹಣದ ರೂಪದಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದರು. ಇದಕ್ಕೆ ಹಸುವಿನ ಮಾಲೀಕರು ಒಪ್ಪಿಗೆ ಸೂಚಿಸಿದರು.

ಸ್ಥಳದಲ್ಲಿಯೇ ಪರಿಹಾರ ಧನವನ್ನು ವಿತರಿಸಲಾಯಿತು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಬಿದ್ದಪ್ಪ,ರೈತ ಮುಖಂಡರಾದ ಪಂದಿಯಂಡ ಹರೀಶ್, ಯೋಗೇಶ್, ಮಂಡಂಗಡ ವೀಟು, ಬಿ.ಪಿ.ಕಾವೇರಪ್ಪ, ಅರಣ್ಯ ಇಲಾಖೆಯ ತಿತಿಮತಿ ಎಸಿಎಫ್ ಶ್ರೀಪತಿ, ಪೆÇನ್ನಂಪೇಟೆ ಆರ್‍ಎಫ್‍ಓ ತೀರ್ಥ, ಇತರ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. - ಹೆಚ್.ಕೆ.ಜಗದೀಶ್