ಮಡಿಕೇರಿ, ಏ. 26: ಫೇಸ್ ಬುಕ್ ಮುಖಾಂತರ ತನ್ನನ್ನು ಪರಿಚಯಿಸಿಕೊಂಡಿರುವ ಆಗಂತುಕನೊಬ್ಬ ಕಾಲೂರು ಗ್ರಾಮದ ಕೃಷಿಕರೊಬ್ಬರಿಗೆ ವಿದೇಶೀ ಆಭರಣಗಳ ಕೊಡುಗೆ ನೀಡುವುದಾಗಿ ಆಸೆ ಹುಟ್ಟಿಸಿ ಲಕ್ಷ ರೂಪಾಯಿ ಲಪಟಾಯಿಸಿರುವ ಪ್ರಸಂಗವೊಂದು ಬಹಿರಂಗಗೊಂಡಿದೆ.ಕಾಲೂರು ಗ್ರಾಮದ ಪಿ.ಜೆ. ಸರೀಶ್ ಎಂಬವರು ಜಾಕಿ ಕೆಲ್ಪಿನ್ ಹೆಸರಿನಲ್ಲಿ ಪರಿಚಯಿಸಿಕೊಂಡಿರುವ ಫೇಸ್ ಬುಕ್ ಸ್ನೇಹಿತನಿಂದ ಮೋಸ ಹೋಗಿದ್ದು, ಈ ಬಗ್ಗೆ ಸಿ.ಇ.ಎನ್. ಪೊಲೀಸ್ ಘಟಕಕ್ಕೆ ದೂರು ಸಲ್ಲಿಸುವ ಮೂಲಕ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.ಫೇಸ್ ಬುಕ್‍ನಲ್ಲಿ ಪರಿಚಯಿಸಿಕೊಂಡಿರುವ ಆಗಂತುಕ, ಕಾಲೂರಿನ ಕೃಷಿಕನಿಗೆ ಉಚಿತವಾಗಿ ಉಡುಗೊರೆ ನೀಡುವುದಾಗಿ ಪ್ರಾರಂಭದಲ್ಲಿ ಆಮಿಷವೊಡ್ಡಿದ್ದು, ವಿಳಾಸ ಇತ್ಯಾದಿ ಮಾಹಿತಿ ಪಡೆದಿದ್ದಾನೆ. ಇದಾದ ಬಳಿಕ ಮತ್ತೆ ಬೇರೊಂದು ಮಾರ್ಗದಿಂದ ಕರೆ ಮಾಡಿ, ವಿದೇಶೀ ಸ್ನೇಹಿತನಿಂದ ಕೊಡುಗೆ ಬಂದಿದ್ದು, ‘ನೀವು ತೆರಿಗೆ ವಂಚಿಸಿ ಪಡೆಯಲು ಮುಂದಾಗಿದ್ದೀರಾ’? ಎಂದು ರೈತನ ಮುಂದೆ ಪ್ರಶ್ನೆ ತೇಲಿ ಬೀಡಲಾಗಿದೆ.ಆ ಬಳಿಕ ಮುಂದೆ ಸಂದೇಶದೊಂದಿಗೆ ನಾವು ‘ಕಸ್ಟಂ’ ಅಧಿಕಾರಿಗಳು, ವಿದೇಶೀ ಆಭರಣ ಕೊಡುಗೆಯಾಗಿ ಪಡೆಯಲು ರೂ. 1.50 ಲಕ್ಷ ತೆರಿಗೆ ಕಟ್ಟಬೇಕು ಎಂದು ಬೆದರಿಸತೊಡಗಿದ್ದಾರೆ. ಇಂತಹ ಬೆದರಿಕೆಯಿಂದ ಗೌರವಕ್ಕೆ ಹೆದರಿದ ರೈತ, ವಂಚಕರ ಜಾಲ ಅರಿಯದೆ ವಿವಿಧ ಹಂತದಲ್ಲಿ ರೂಪಾಯಿ 1.32 ಲಕ್ಷ ಮೊತ್ತವನ್ನು ಆಗಂತುಕರು ತಿಳಿಸಿರುವ ಫೇಸ್ ಬುಕ್ ಸಂಪರ್ಕ ಖಾತೆಗೆ ಸಂದಾಯ ಮಾಡಿಬಿಟ್ಟಿದ್ದಾರೆ!

ಇಷ್ಟೆಲ್ಲ ಬೆಳವಣಿಗೆ ನಡುವೆ ಮತ್ತೆ ರೂ. 65 ಸಾವಿರ ಹಣ ಪಾವತಿಸಲು ಬೇಡಿಕೆ ಬಂದಿದ್ದು, ಯಾವುದೇ ಉಡುಗೊರೆ ಕೈಸೇರಿಲ್ಲ; ಹೀಗಾಗಿ ಸಂಶಯಗೊಂಡ ಕೃಷಿಕ ಸ್ನೇಹಿತರ ಬಳಿ ವಿಷಯ ಹಂಚಿಕೊಂಡಾಗ, ತಾನು ಮೋಸದ ಬಲೆಯೊಳಗೆ ಸಿಲುಕಿರುವುದು ಅರಿವಿಗೆ ಬಂದಿದೆ. ಆ ಮೇರೆಗೆ ಇದೀಗ ಅಂತರ್ಜಾಲ ಅಪರಾಧ ತಡೆ ಪೊಲೀಸ್ ಘಟಕಕ್ಕೆ ದೂರು ಸಲ್ಲಿಸುವುದರೊಂದಿಗೆ ಆಗಂತುಕರ ಪತ್ತೆಹಚ್ಚಿ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.