ಮುಸ್ಲಿಮರ ಪವಿತ್ರ ರಂಝಾನ್ ವ್ರತಾಚರಣೆ ಪ್ರಾರಂಭಗೊಂಡಿದೆ. ಈ ವರ್ಷದ ರಂಝಾನ್ ಹಿಂದಿನ ವರ್ಷಗಳಂತೆ ಅಲ್ಲ. ಕೊರೊನಾ ಎಂಬ ಮಹಾಮಾರಿಯು ವಿಶ್ವದಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲೇ ರಂಝಾನ್ ವ್ರತಾಚರಣೆಯ ಆಗಮನವಾಗಿದೆ. ಕಳೆದ ವರ್ಷದವರೆಗೂ ಪ್ರತಿ ರಂಝಾನ್ ಆಗಮನದ ಸೂಚಕವಾಗಿ ಸುಣ್ಣಬಣ್ಣಗಳಿಂದ ವಿದ್ಯುತ್ ಅಲಂಕಾರಗಳಿಂದ ಶೋಭಿಸುತ್ತಿದ್ದ ಮಸೀದಿಗಳೆಲ್ಲ ಕೊರೊನಾದ ಕಾರಣದಿಂದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮುಚ್ಚಲ್ಪಟ್ಟಿವೆ.
ಈ ಹಿಂದೆ ಪ್ರತಿ ರಂಝಾನ್ ಸಂದರ್ಭದಲ್ಲಿ ದಿನದ ಐದು ಹೊತ್ತು ನಮಾಝ್‍ಗೆಂದು ಮಸೀದಿಗೆ ತೆರಳಿದ್ದವರು, ರಾತ್ರಿಯ ವಿಶೇಷ ‘‘ತರಾವೀ’’ ನಮಾಝ್ ಹಾಗೂ ಜಪತಪಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರಿಗೆಲ್ಲ ಈ ಬಾರಿಯ ವ್ರತಾಚರಣೆ ಬಲುವಿಚಿತ್ರ ಎನಿಸಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕೊರೊನಾ ಎಂಬ ಮಾರಣಾಂತಿಕ ರೋಗ ಜಗತ್ತಿನ ಕೋಟ್ಯಂತರ ಭಕ್ತರು ಈ ಬಾರಿಯ ರಂಝಾನ್ ಅನ್ನು ಹಿಂದಿನಂತೆ ಕೈಗೊಂಡು ಪುಣ್ಯಗಳಿಸಲು ಸಾಧ್ಯವಿಲ್ಲವಲ್ಲ ಎಂಬ ಕೊರಗಿನಲ್ಲಿರುವದು ಸಹಜ.
ಮುಸ್ಲಿಮರ ಪಾಲಿಗೆ ರಂಝಾನ್‍ನಂತಹ ಪುಣ್ಯಪ್ರದವಾದ ಬೇರೊಂದು ತಿಂಗಳಿಲ್ಲ. ಅರಿತೊ ಅರಿಯದೆಯೇ ಮಾನವ ಮಾಡಿರುವ ಪಾಪಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಜಗದೊಡೆಯನಲ್ಲಿ ಕ್ಷಮೆಯಾಚಿಸುವ ಮೂಲಕ ಒಳಿತಿನ ಹಾದಿಯನ್ನು ತುಳಿದರೆ ಪಾಪ ಪರಿಹಾರಗೊಳ್ಳುವ ಪುಣ್ಯ ಮಾಸವಾಗಿ ಇದನ್ನು ಪರಿಗಣಿಸಲಾಗಿದೆ. ಆದುದರಿಂದ ಹೆಚ್ಚು ಮಂದಿ ವ್ರತಕೈಗೊಂಡು ಬಡಬಗ್ಗರಿಗೆ ಆಹಾರಧಾನ್ಯ ಹಣ ಮುಂತಾದವುಗಳನ್ನು ದಾನ ನೀಡುತ್ತಿರುವದನ್ನೂ ಕಾಣಬಹುದಾಗಿದೆ. ಮುಸ್ಲಿಮರ ಧರ್ಮಗ್ರಂಥ ಪವಿತ್ರ ಖುರಾನ್ ಅಲ್ಲಾಹನಿಂದ ಮಹಮ್ಮದ್ ಪೈಗಂಬರ್ (ಸ)ರವರಿಗೆ ಅವತರಿಸಲ್ಪಟ್ಟ ಪುಣ್ಯ ಮಾಸ ಕೂಡ ಇದಾಗಿದೆ. ಪವಿತ್ರಗ್ರಂಥದ ಪಾರಾಯಣ ಸೇರಿದಂತೆ ಈ ತಿಂಗಳಿನಲ್ಲಿ ಭಕ್ತರು ನಡೆಸುವ ಎಲ್ಲಾ ರೀತಿಯ ಜನೋಪಯೋಗಿ ಕಾರ್ಯಕ್ರಮಗಳಿಗೆ ಅಪಾರವಾದ ಪುಣ್ಯಲಭಿಸುವ ಮಾಸ ಕೂಡ ಇದಾಗಿದೆ.
ಕೊರೊನಾ ಎಂಬ ಮಾರಕ ರೋಗದ ಭೀತಿ ಯಿಂದಾಗಿ ಇಡಿಯ ದೇಶವೇ ಎಲ್ಲಾ ಚಟುವಟಿಕೆ ಗಳಿಂದ ಮುಕ್ತವಾಗಿ ಪ್ರಜೆಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ರೋಗ ತಡೆಗೆ ಬೇಕಾದ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಇಂತಹ ಒಂದು ಸಂದಿಗ್ಧ-ಸಂಕಷ್ಟದ ನಡುವೆ ಪವಿತ್ರ ರಂಝಾನ್‍ನ ವ್ರತಾಚರಣೆಯ ಸಮಯ ಎದುರಾದಾಗ ಭಕ್ತ ಸಮೂಹವು ಏನು ಮಾಡಬೇಕು ಎಂಬದನ್ನು ಕೂಡ ಧರ್ಮ ತಿಳಿಸಿದೆ. ಹಿಂದಿನಿಂದಲೂ ವ್ರತಾಚರಣೆಯ ಕಾಲದಲ್ಲಿ ಸತ್ಕರ್ಮಗಳನ್ನು ನಡೆಸಿಕೊಂಡು ಬಂದಿರುವ ಭಕ್ತರು ಈ ಬಾರಿಯೂ ಅದನ್ನು ಕ್ರಮಬದ್ಧವಾಗಿಯೇ ನಿರ್ವಹಿಸಬೇಕೆಂಬ ಬಯಕೆ ಹೊಂದಿ ದೃಢ ಸಂಕಲ್ಪವನ್ನೂ ಮಾಡಿರುತ್ತಾರೆ. ಇನ್ನು ಅನೇಕರು ಈ ರಂಝಾನ್‍ನಲ್ಲಾದರೂ ತಾವು ಮಸೀದಿಗೆ ತಪ್ಪದೇ ತೆರಳಿ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಸದುದ್ದೇಶವನ್ನು ಹೊಂದಿರುತ್ತಾರೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಮಸೀದಿಗೆ ಹೋಗುವ ಹಾಗಿಲ್ಲ. ಹೋಗಲೂ ಬಾರದು, ಈ ಕುರಿತು ಧರ್ಮವು ಈ ರೀತಿ ಹೇಳುತ್ತದೆ. ‘‘ಸಾಮೂಹಿಕವಾಗಿ ಜನರನ್ನು ಕಾಡುವ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಮೂಲಕ ಜನರ ಪ್ರಾಣಕ್ಕೆ ಕುತ್ತಾಗುವ ಯಾವದೇ ರೋಗ-ರುಜಿನಗಳು ಕಾಣಿಸಿಕೊಂಡಾಗ ಜನರು ಪರಸ್ಪರ ಬೆರೆಯದೇ ತಮ್ಮ ಮನೆಗಳಲ್ಲೇ ಉಳಿದು ಕೊಂಡು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸಬೇಕು, ಪ್ರಾರ್ಥನಾ ಕಾರ್ಯಗಳನ್ನು ಮಸೀದಿಗೆ ತೆರಳದೇ ಮನೆಯಲ್ಲೇ ನಿರ್ವಹಿಸ ಬೇಕು. ವಿಪತ್ತಿನ ಸಂದರ್ಭ ತಮ್ಮ ತಮ್ಮ ಮನೆಗಳಲ್ಲಿ ನೆಲೆಸಿ ಸಲ್ಲಿಸುವ ಪ್ರಾರ್ಥನೆಗಳಿಗೂ ಪುಣ್ಯ ಲಭಿಸಲಿದೆ. ಪುಣ್ಯ ಪ್ರವಾದಿಯ ಈ ಸದುಪದೇಶ ವನ್ನು ಪಾಲಿಸುವಲ್ಲಿ ಮುಸ್ಲಿಮರು ಕಟಿಬದ್ಧರಾಗಬೇಕು. ಇದಿಷ್ಟು ಮಾತ್ರವಲ್ಲ ಊರಿನ, ರಾಜ್ಯದ ಹಾಗೂ ರಾಷ್ಟ್ರದ ಆಡಳಿತ ನಡೆಸು ವವರು ಜನತೆಯ ಆರೋಗ್ಯ ರಕ್ಷಣೆಗಾಗಿ ವಿಪತ್ತಿನ ಕಾಲದಲ್ಲಿ ಕೈಗೊಳ್ಳುವ ನಿಯಮಗಳನ್ನೂ ಪಾಲಿಸಬೇಕು ಎಂದು ಧರ್ಮವು ತಿಳಿಸಿದೆ. ಆದುದರಿಂದ ವ್ರತಕೈಗೊಳ್ಳುವ ಭಕ್ತರು ವಿಚಲಿತರಾಗಬೇಕಾಗಿಲ್ಲ. ತಮ್ಮ ಉದ್ದೇಶಿತ ಪ್ರಾರ್ಥನಾ ಕಾರ್ಯ ಗಳನ್ನು ಮನೆಯಲ್ಲೇ ನಿರ್ವಹಿಸುವ ಮೂಲಕ ಪುಣ್ಯಗಳಿಸೋಣ. ಕೊರೊನಾ ನಿರ್ಮೂಲನೆಗಾಗಿ ಜಗದೊಡೆಯನಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ, ಜನರ ಆರೋಗ್ಯ ಸಂರಕ್ಷಕರಿಗೆ, ರಕ್ಷಣೆ ಒದಗಿಸುವವರಿಗೆ ಆಡಳಿತ ನಡೆಸುವವ ರಿಗೆ ಸಹಕಾರ ನೀಡೋಣ. ಪವಿತ್ರರಂಝಾನ್ ಸರ್ವರಿಗೂ ಸನ್ಮಂಗಳ ವನ್ನುಂಟು ಮಾಡಲಿ. ?ಅಶ್ರಫ್ ಎಂ. ಇ.