ಶೃಣು ದೇವಿ ಮಹಾಪ್ರಾಜ್ಞೇ ಕಾವೇರಿರ್ಯಾಸ್ತೀರ್ಥ ವೈಭವಂ, ಯಚ್ಛ್ರತ್ವಾ ಪುರುಷಃ ಸ್ತ್ರೀ ವಾ ನಷ್ಟಪಾಪೋ ಭವಿಷ್ಯತಿ

ಈಶ್ವರನು ಹೇಳಿದನು:- ಮಹಾಬುದ್ಧಿಶಾಲಿನಿಯಾದ ಪಾರ್ವತಿಯೇ, ಕಾವೇರಿ ತೀರ್ಥ ಮಾಹಾತ್ಮೈಯನ್ನು ಕೇಳು. ಅದನ್ನು ಕೇಳುವದರಿಂದ ಪುರುಷರಾಗಲಿ, ಮಹಿಳೆಯರಾಗಲಿ ಪಾಪವನ್ನು ಕಳೆದುಕೊಳ್ಳುವರು. ಪೂರ್ವಕಾಲದಲ್ಲಿ ಸರ್ವಶಾಸ್ರ್ತಾರ್ಥ ತತ್ವಜ್ಞನೂ, ಸರ್ವ ಜೀವಿಗಳ ಕಲ್ಯಾಣವನ್ನು ಬಯಸುವವನೂ ಆದ ಕವೇರನೆಂಬ ಬ್ರಾಹ್ಮಣೋತ್ತಮನಿದ್ದನು. ಆತನು ತನ್ನ ಧರ್ಮಪತ್ನಿಯೊಡಗೂಡಿ ಸರ್ವತೀರ್ಥಗಳಿಗೂ ಆಶ್ರಯವಾದ ಸಹ್ಯಾಚಲವೆಂಬ ಬೆಟ್ಟಕ್ಕೆ ಹೋದನು. ಪವಿತ್ರವಾದ ಸಹ್ಯಾಚಲಕ್ಕೆ ಸೇರಿದ ಬ್ರಹ್ಮಗಿರಿಯಲ್ಲಿ ಆ ಕವೇರನು ಮಾನವರಿಗೆ ಅಸಾಧ್ಯವಾದ ರೀತಿಯಲ್ಲಿ ತಪಸ್ಸನ್ನು ಮಾಡಿದನು.ಅವನು ತನ್ನ ಮನಸ್ಸನ್ನು ಏಕಾಗ್ರಗೊಳಿಸಿಕೊಂಡನು. ಶಾಶ್ವತ ಪರಬ್ರಹ್ಮವನ್ನು ಮನಸ್ಸಿನಲ್ಲಿ ಗ್ರಹಿಸಿಕೊಂಡನು. ಸಹಸ್ರ ವರ್ಷಗಳವರೆಗೆ ತಪಸ್ಸು ಮಾಡಿದನು. ಅವನ ದೇಹದಿಂದ ಉತ್ಪನ್ನವಾದ ಬೆಂಕಿಯು ಆಶ್ಚರ್ಯಕರವಾಗಿ ಕಾಣಿಸಿಕೊಂಡಿತು. ಪುಟಕ್ಕಿಟ್ಟ ಬಂಗಾರದಂತೆ ತಪಸ್ಸಿನ ಅಗ್ನಿಯು ಬೆಳಗುತ್ತಿತ್ತು. ಸರ್ವ ದಿಕ್ಕುಗಳನ್ನೂ ಬೆಳಗುತ್ತಾ, ತ್ರಿಲೋಕಕ್ಕೂ ಭಯವುಂಟು ಮಾಡುವಂತೆ ವೃದ್ಧಿಹೊಂದುತ್ತಿತ್ತು. ಪಾರ್ವತಿಯೇ, ಕೇಳು:-ಆ ತಪೋಜ್ವಾಲೆಯಿಂದ ಸರ್ವ ಜಗತ್ತೂ ನಡುಗತೊಡಗಿತು. ದಿಗ್ಗಜಗಳೂ, ಲೋಕಪಾಲಕರೂ, ಸಮುದ್ರಗಳೂ, ದ್ವೀಪವಾಸಿಗಳೂ ಗಾಬರಿಗೊಂಡು ದುಃಖಕ್ಕೀಡಾ ದರು. ಭೂಮಿಯೆಲ್ಲವೂ ಕಂಪಿಸಿತು. ದೇವತೆಗಳೂ ಭಯ ಪೀಡಿತ ರಾದರು. ಋಷಿಗಳೂ, ಪಿತೃದೇವತೆಗಳೂ ಬ್ರಹ್ಮನನ್ನು ಮೊರೆಹೊಕ್ಕರು. ಎಲ್ಲರೂ ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನ ಮುಂದೆ ಕೈ ಜೋಡಿಸಿ ನಿಂತು ಹೀಗೆ ಪ್ರಾರ್ಥಿಸಿದರು:-“ನಾಲ್ಕು ಮೊಗದವನೂ, ಸರ್ವ ಲೋಕ ಪಿತಾಮಹನೂ, ಜಗತ್ಕಾರಣನೂ, ವಿಶ್ವರೂಪಿಯೂ, ಚತುರ್ಮೂರ್ತಿಯೂ, ಜಗತ್ಸ್ವಾಮಿಯೂ ಆದ ಬ್ರಹ್ಮನೇ, ಹದಿನಾಲ್ಕು ಲೋಕಗಳೂ ಕವೇರನ ತಪೋಮಹಿಮೆಯಿಂದ ನಡುಗುತ್ತಿವೆ. ಅಖಿಲ ವಿಶ್ವವನ್ನೂ, ಭೀತರಾಗಿರುವ ನಮ್ಮನ್ನೂ ರಕ್ಷಿಸು.” ಲೋಕ ಪಿತಾಮಹನೂ, ಕಮಲ ಸಂಭವನೂ ಆದ ಬ್ರಹ್ಮನು ಅವರ ಮಾತನ್ನು ಕೇಳಿ ದೇವತೆ ಗಳೊಂದಿಗೆ ಬ್ರಹ್ಮಗಿರಿ ಪರ್ವತಕ್ಕೆ ಬರುತ್ತಾನೆ. ಬ್ರಹ್ಮನು ಹೋಮಾಗ್ನಿ ಯಂತೆ ಪ್ರಜ್ವಲಿಸುತ್ತಿದ್ದ ಕವೇರನ ದೇಹಕ್ಕೆ ತನ್ನ ಕೈಯಿಂದ ನೀರನ್ನು ಸಂಪ್ರೋಕ್ಷಿಸಿ ಆತನನ್ನು ಪ್ರಜ್ಞಾವಸ್ಥೆಗೆ ಬರುವಂತೆ ಮಾಡುತ್ತಾನೆ. ಆ ಸಂದರ್ಭ ತೇಜೋವಂತನಾದ ಕವೇರನು ತಪಸ್ಸಿನಿಂದ ಎಚ್ಚತ್ತು ಮೆಲ್ಲನೆ ತನ್ನ ಕಣ್ಣುಗಳನ್ನು ತೆರೆಯುತ್ತಾನೆ. ದೇವತೆಗಳು, ಬ್ರಾಹ್ಮಣ ರೊಡಗೂಡಿ ತನ್ನ ಮುಂದೆ ಪ್ರತ್ಯಕ್ಷನಾದ ಬ್ರಹ್ಮದೇವನನ್ನು ನೋಡು ತ್ತಾನೆ. ಕವೇರನು ಅಘ್ರ್ಯಾದಿಗಳಿಂದ ಬ್ರಹ್ಮ ದೇವನನ್ನು ಉಪಚರಿಸುತ್ತಾನೆ. ಪ್ರಣಾಮ ಮಾಡುತ್ತಾನೆ. ಆಗ ಬ್ರಹ್ಮ ದೇವನು ಪ್ರಸನ್ನ ವದನನಾಗಿ ಕವೇರನನ್ನು ಹರಸಿ ಹೇಳುತ್ತಾನೆ:- ಕವೇರ ಮುನಿಯೇ, ನಿನ್ನ ಈ ತಪಸ್ಸಿನ ಉದ್ದೇಶವೆನು ? ನಿನ್ನ ಮುಖ್ಯ ಕೋರಿಕೆ ಏನು ? ನಿನಗೆ ಬೇಕಾದ ವರ ಕೇಳು, ಅದಕ್ಕೋಸ್ಕರವೇ ನಾನು ಇಲ್ಲಿಗೆ ಬಂದಿದ್ದೇನೆ”. ಕವೇರನು ವಿನಮ್ರನಾಗಿ ಬ್ರಹ್ಮನನ್ನು ಕುರಿತು:- ಪದ್ಮದಿಂದ ಸಂಜಾತ ನಾದ ಬ್ರಹ್ಮನೇ, ನಿನ್ನ ದರ್ಶನದಿಂದ ನಾನು ಕೃತಾರ್ಥನಾದೆನು, ನೀನು ವರಪ್ರದ ನಾಗಿರುವದಾದರೆ ನಾನು ವರವೊಂದನ್ನು ಕೇಳುವೆನು. ಜಗದ್ಗುರು ವಾದ ಬ್ರಹ್ಮನೇ, ಮಕ್ಕಳಿಲ್ಲದ ನನಗೆ ಮಕ್ಕಳನ್ನು ಕರುಣಿಸು” ಎಂದು ವರವನ್ನು ಕೋರುತ್ತಾನೆ. ಇದಕ್ಕೆ ಉತ್ತರಿಸಿದ ಬ್ರಹ್ಮನು “ ಕವೇರನೆ, ಮಕ್ಕಳ ಭಾಗ್ಯವಿಲ್ಲದ ನಿನಗೆ ನಾನು ಹೇಗೆ ಮಕ್ಕಳನ್ನು ದಯಪಾಲಿಸಲಿ ? ಮಕ್ಕಳನ್ನು ಹೊಂದಲು ಬೇಕಾದ ಧರ್ಮವನ್ನು ನೀನು ಪೂರ್ವಜನ್ಮದಲ್ಲಿ ಮಾಡಿರುವದಿಲ್ಲ ವಾದ್ದರಿಂದ ಕ್ರಮವಾಗಿ ಮುಂದೆ ನಿನಗೆ ಪುತ್ರ ಪೌತ್ರಾದಿಗಳು ಹೇಗೆ ಲಭಿಸುವರು ? ಬ್ರಾಹ್ಮಣೋತ್ತಮನೇ, ಆದ್ದರಿಂದ “ಲೋಪಾಮುದ್ರೇತಿ ವಿಖ್ಯಾತಾಂ ತವ ವಂಶ ವಿವರ್ಧಿನೀಂ” ಅಂದರೆ, ಲೋಪಾಮುದ್ರೆಯೆಂದು ಹೆಸರುಳ್ಳ ನಿನ್ನ ವಂಶೋದ್ಧಾರಕಳಾಗುವ, ಈ ನನ್ನ ಮಗಳನ್ನು ನಿನಗೆ ಕೊಡುವೆನು. ಕವೇರನೇ, ನಿನಗೆ ಇಷ್ಟವಿದ್ದರೆ ಮಕ್ಕಳಿಗಾಗಿ ಇವಳನ್ನು ತೆಗೆದುಕೊ, ಈ ಬಾಲೆಯಿಂದ ಸರ್ವಧರ್ಮಗಳೂ, ಅಧಿಕ ಕೀರ್ತಿಯೂ ನಿನಗೆ ಲಭ್ಯವಾಗುತ್ತದೆ.” ಎಂದು ಬ್ರಹ್ಮದೇವನು ಆಶ್ವಾಸನೆಯಿತ್ತನು. ಕವೇರನು ಆ ಮಾತುಗಳನ್ನು ಕೇಳಿ ಆನಂದಗೊಂಡು ತನ್ನ ಪತ್ನಿಯ ಸಹಿತನಾಗಿ ಆ ಬಾಲೆಯನ್ನು ಸ್ವೀಕರಿಸಿದನು. ಈಶ್ವರನು ಹೇಳುತ್ತಾನೆ “ ಪಾರ್ವತಿಯೇ “ ಲೋಪಾಮುದ್ರಾ ತು ಸಾ ದೇವೀ ವರಂ ವವ್ರೇ ಚತುರ್ಮುಖಾತ್, ಲೋಕಪ್ರಿಯಕರಂ ಪುಣ್ಯಂ ಸರ್ವ ಭೂತ ಹಿತೈಷಿಣೀ” ಲೋಪಾಮುದ್ರೆಯು ಸರ್ವಜೀವಿಗಳಿಗೂ ಹಿತವನ್ನು ಮಾಡಲು ಬಯಸಿ ಲೋಕಕ್ಕೆ ಪ್ರೀತಿಯನ್ನುಂಟು ಮಾಡುವ ಪುಣ್ಯಕರವಾದ ವರವನ್ನು ಆ ಸಂದರ್ಭ ಬ್ರಹ್ಮನಿಂದ ಪಡೆದಳು. ಆಕೆ ಬ್ರಹ್ಮನೊಂದಿಗೆ ಕೇಳುತ್ತಾಳೆ:- ‘ಇಹ ವತ್ಸ್ಯಾಮಿ ದೇವೇಶ ಲೋಕಾನಾಂ ಹಿತಕಾಮ್ಯಯಾ ತ್ವತ್ಪ್ರಾಸಾದಾನ್ನದೀಭೂತ್ವಾ ತಪಸಾ ಚ ವಿಶೇಷತಃ’ ಬ್ರಹ್ಮದೇವನೇ, ಲೋಕೋಪಕಾರಕ್ಕಾಗಿ ನಾನು ಇಲ್ಲಿ ತಪಸ್ಸಿನಿಂದಲೂ, ನಿನ್ನ ಅನುಗ್ರಹದಿಂದಲೂ ಮುಂದೆ ನದಿಯಾಗಿ ವಾಸಿಸುವೆನು. ಬ್ರಹ್ಮನು “ತಥಾಸ್ತು” ಎಂದು ಆಕೆ ಕೇಳಿದ ವರವನ್ನು ಅನುಗ್ರಹಿಸಿ ಕವೇರನಿಂದ ನಮಸ್ಕøತ ನಾಗಿ ತನ್ನ ಅನುಚರರೊಡನೆಯೂ, ದೇವತೆಗಳೊಡನೆಯೂ ಸತ್ಯಲೋಕಕ್ಕೆ ತೆರಳಿದನು. ಈ ಪುಣ್ಯ ಸನ್ನಿವೇಶದ ಬಳಿಕ

‘ಕವೇರೋಪಿ ಸುತಾಂದೃಷ್ಟ್ವಾ ವಿಮಾನಸ್ಥಾಮ ಜಾತ್ಮಜಾಂ, ಸಹಸ್ರಾದಿತ್ಯ ಸಂಕಾಶಾಂ ಲೋಪಾ ಮುದ್ರಾಂ ಶುಚಿಸ್ಮಿತಾಂ ಸರ್ವ ಲಕ್ಷಣ ಸಂಪನ್ನಾಂ ಸರ್ವಾಭರಣಭೂಷಿತಾಂ, ಪುಂಡರೀಕ ವಿಶಾಲಾಕ್ಷೀ ಮೂನಷೋಡಶವಾರ್ಷಿಕೀಂ’

ವಿಮಾನಾರೂಢಳಾಗಿ ಆಗಮಿಸಿದ್ದ, ಸಹಸ್ರ ಸೂರ್ಯ ಪ್ರಕಾಶಿತೆಯಾಗಿದ್ದ, ಶುಚಿಸ್ಮಿತೆಯಾಗಿದ್ದ, ಸರ್ವ ಲಕ್ಷಣಗಳಿಂದೊಪ್ಪುವವಳಾಗಿದ್ದ, ಸರ್ವಾಭರಣ ಭೂಷಿತೆಯಾಗಿದ್ದ, ಕಮಲದಂತೆ ವಿಶಾಲವಾದ ನೇತ್ರಗಳುಳ್ಳವಳಾದ ಹದಿನಾರು ವರ್ಷ ತುಂಬಿದವಳಾಗಿದ್ದ ಆಕಾಶದಿಂದ ಕೆಳಗಿಳಿದವಳಾದ ಬ್ರಹ್ಮ ಕುವರಿಯೂ ಆದ ಲೋಪಾಮುದ್ರೆಯನ್ನು ಕಂಡು ಆಕೆಯನ್ನು ತನ್ನ ಮಗಳಾಗಿ ಸ್ವೀಕರಿಸಿದ ಕವೇರನು ತನ್ನ ಪುತ್ರಿಯಾದರೂ ಅದ್ಭುತ ದೈವಿಕ ಶಕ್ತಿಯಾಗಿ ಧರೆಗಿಳಿದ ಅವಳನ್ನು ಹೀಗೆ ಸ್ತುತಿಸುತ್ತಾನೆ:- “ಜಯದೇವಿ ಜಗನ್ಮಾತರ್ಲೋಪಾಮುದ್ರೇ ಪುರಾತನೇ, ಜಯ ಭಕ್ತಪ್ರಿಯೇ ಭದ್ರೇ ಮಂಗಳೇ ಮಂಗಳಪ್ರದೇ, ಜಯೇಶ್ವರಿ ಮಹಾಮಾಯೇ, ವ್ಯಕ್ತಾವ್ಯಕ್ತ ಸನಾತನೇ, ಸರ್ವಭೂತ ಹಿತಾರ್ಥಾಯ ಭವ ಪಾಪಹರೇ ಶುಭೇ” ಅಂದರೆ:-“ಜಗಜ್ಜನನಿಯೇ, ಲೋಪಾಮುದ್ರೆಯೇ, ಭಕ್ತಪ್ರಿಯಳೇ, ಕಲ್ಯಾಣಿಯೇ, ಮಂಗಳಾತ್ಮಕಳೇ, ಮಂಗಳದಾತ್ರಿಯೇ, ಒಡತಿಯೇ, ಮಹಾಮಾಯೆಯೇ, ವ್ಯಕ್ತ ಹಾಗೂ ಅವ್ಯಕ್ತಳೇ, ಸನಾತನೆಯೇ, ಪಾಪಹಾರಿಣಿಯೇ, ಶೋಭನೆಯೇ, ಜಯ-ವಿಜಯೀಭವ” ಎಂದು ಕೊಂಡಾಡುತ್ತಾನೆ. ಆಗ ಕಾವೇರಿಯು ತನ್ನನ್ನು ಪುತ್ರಿಯಾಗಿ ಸ್ವೀಕರಿಸಿದ ತಂದೆಗೆ ಹೀಗೆ ವಚನವೀಯುತ್ತಾಳೆ:-“ ಅಹಂ ನದೀ ಭವಿಷ್ಯಾಮಿ, ಪ್ರವೇಕ್ಷ್ಯಾಮಿ ಮಹೋದಧಿಂ, ಹೇ ತಾತ ಭವಿತಾ ನಿತ್ಯಂ ಜಂತೂನಾಂ ಪಾಪಹಾರಿಣೀ, ಬ್ರಹ್ಮಾತ್ಮಜೇತಿ ಮಾಯೇತಿ ಕಾವೇೀರೀತಿ ಚ ಮಾಂ ವಿದಃ, ಭವಾಮಿ ಚ ತತಸ್ತಾತ ಪ್ರಾಣಿನಾಂ ಪಾಪನಾಶಿನೀ, ಯೇ ಪಾಪಕಾರಿಣಃ ಕಷ್ಟಾಃ ಗೋಬ್ರಾಹ್ಮಣವಿದೂಷಕಾಃ ಸುರಾಪಾ ವೃಷಲೀಕಸ್ತಾಃ ಪಾಷಂಡಾಃ ಪಾಪಯೋನಯಃ, ತೇಷಾಂ ಪಾಪಂ ದ್ವಿಜಶ್ರೇಷ್ಠ ನಾಶಯಿಷ್ಯಾಮ್ಯಹಂ ಸದಾ, ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ, ಪುಣ್ಯಕ್ಷೇತ್ರೇ ಕೃತಂ ಪಾಪಂ ಮಮಾಂಭಸಿ ವಿನಶ್ಯತಿ, ಯೋ ಮಾಂ ದ್ರಷ್ಟುಮಿಹ ಪ್ರಾಪ್ತಃ ತಸ್ಯ ಜನ್ಮಶತೈಃ ಕೃತಂ, ಗೃಹಾತ್ಪ್ರವ್ರಜಿತಶ್ಚಾಥ ಪದೇ ಪಾಪಂ ವಿನಶ್ಯತಿ” ಅಂದರೆ, “ತಂದೆಯೇ, ನಾನು ನದೀರೂಪವನ್ನಾಂತು ಸಮುದ್ರವನ್ನು ಪ್ರವೇಶಿಸುವೆನು. ಯಾವಾಗಲೂ ಜೀವಿಗಳ ಪಾಪವನ್ನು ಪರಿಹರಿಸು ವೆನು. ಬ್ರಹ್ಮನ ಮಗಳೆಂದೂ, ಮಾಯೆಯೆಂದೂ, ಕಾವೇರಿಯೆಂದೂ ನನ್ನನ್ನು ತಿಳಿಯುವರು. ತಂದೆ ಬ್ರಾಹ್ಮಣೋತ್ತಮನೇ, ಪಾಪಾಚಾರಿಗಳ, ಕಷ್ಟಕ್ಕೊಳಗಾದವರ, ಗೋಬ್ರಾಹ್ಮಣರನ್ನು ವಿಶೇಷವಾಗಿ ದೂಷಿಸುವವರ, ಮದ್ಯಪಾನಿಗಳ, ವಿಜಾತಿ ಸ್ತ್ರೀಯರ ಸಂಗ ಮಾಡಿದವರ, ನಾಸ್ತಿಕರೇ ಮೊದಲಾದವರ ಪಾಪಗಳನ್ನು ನಿತ್ಯವೂ ನಾಶ ಮಾಡುವೆನು. ಇತರ ಕ್ಷೇತ್ರಗಳಲ್ಲಿ ಮಾಡಿದ ಪಾಪವು ಪುಣ್ಯಕ್ಷೇತ್ರ ಗಳಿಗೆ ಹೋಗುವದರಿಂದ ನಾಶವಾಗುವದು, ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ನನ್ನಲ್ಲಿ ನಾಶವಾಗುವದು. ನನ್ನನ್ನು ಇಲ್ಲಿಗೆ ಬಂದು ನೋಡಲು ಮನೆಯಿಂದ ಪ್ರಯಾಣ ಹೊರಟು ಒಂದು ಹೆಜ್ಜೆ ನಡೆಯುವಷ್ಟರಲ್ಲಿಯೇ ಜನ್ಮ ಜನ್ಮಾರ್ಜಿತವಾದ ಪಾಪಗಳೆಲ್ಲವೂ ನಾಶವಾಗುವವು” ಎಂದು ಲೋಪಾಮುದ್ರೆ ತನ್ನ ತಂದೆಗೆ ವಚನ ನೀಡುತ್ತಾಳೆ. ಇದನ್ನು ಆಲಿಸಿದ ಬ್ರಾಹ್ಮಣೋತ್ತಮನೂ, ವಿದ್ವಾಂಸನೂ ಆದ ಕವೇರನು ಕಾವೇರಿಯ ಪ್ರಭಾವದಿಂದ ತನ್ನ ಜನ್ಮ ಸಾರ್ಥಕ ವಾಯಿತೆಂದು ತಿಳಿದು ಭಾರ್ಯಾ ಸಮೇತನಾಗಿ ಶರೀರ ತ್ಯಾಗ ಮಾಡಿ ಸತ್ಯಲೋಕಕ್ಕೆ ತೆರಳಿದನು.

(ಮುಂದಿನ ವಾರ: ದ್ವಿತೀಯೋಧ್ಯಾಯದ ಮುಂದುವರಿಕೆ.

ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈ ಅನುವಾದಕರು : ದಿ.ಟಿ.ಪಿ ನಾರಾಣಾಯಣಾಚಾರ್ಯರು)