ವೀರಾಜಪೇಟೆ, ಏ. 25: ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿರುವ ವರ್ತಕ ಎನ್.ಶ್ರೀನಿವಾಸ್ ಎಂಬವರ ಮನೆಯಿಂದ ನಿನ್ನೆ ರಾತ್ರಿ ಸುಮಾರು ರೂ. 5ಲಕ್ಷದ ಚಿನ್ನಾಭರಣ, ರೂ 5000 ನಗದು ಕಳವು ಮಾಡಲಾಗಿದೆ ಎಂದು ಇಲ್ಲಿನ ನಗರ ಪೊಲೀಸರಿಗೆ ದೂರು ದೊರೆತ ಮೇರೆಗೆ ಕಳವು ಪ್ರಕರಣ ದಾಖಲಿಸಲಾಗಿದೆ.ವೀರಾಜಪೇಟೆ ಮುಖ್ಯ ರಸ್ತೆಯ ಒತ್ತಾಗಿರುವ ಗಾಂಧಿನಗರಕ್ಕೆ ಹೋಗುವ ತಿರುವಿನಲ್ಲಿರುವ ಮನೆಯ ಹಂಚನ್ನು ತೆಗೆದು ಒಳ ನುಗ್ಗಿದ ಕಳ್ಳರು ಮನೆಯ ಮಾಲೀಕರು ಅವರ ಕುಟುಂಬದವರು ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ಅಲ್ಮೇರಾದ ಬಾಗಿಲನ್ನು ತೆಗೆದು; ಚಿನ್ನದ ಬಳೆಗಳು, ಸರಗಳು, ಓಲೆಗಳು, ಉಂಗುರಗಳು ಸೇರಿದಂತೆ ಸುಮಾರು 160 ಗ್ರಾಂಗಳ ಚಿನ್ನಾಭರಣ, ಇದರ ಜೊತೆಯಲ್ಲಿಟ್ಟಿದ್ದ ರೂ. 5000 ನಗದು ಕಳವು ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದ ಪ್ರಕಾರ ರಾತ್ರಿ 11ಗಂಟೆಯಿಂದ ಬೆಳಗಿನ 5 ಗಂಟೆ ಅವಧಿಯೊಳಗೆ ಈ ಕಳವು ನಡೆದಿರುವದಾಗಿದೆ.ಮನೆಯ ಮಾಲೀಕ ಶ್ರೀನಿವಾಸ್ ಬೆಳಿಗ್ಗೆ ಎದ್ದು ನೋಡಿದಾಗ ಅಲ್ಮೇರಾದ ಬಾಗಿಲು ತೆಗೆದು ಒಳಗಿನ ಖಾನೆಯನ್ನು ತೆರೆಯಲಾಗಿತ್ತು. ಖಾನೆಯ ಒಳಗಡೆ ಇದ್ದ ಎಲ್ಲ ಚಿನ್ನಾಭರಣ ನಗದನ್ನು ದೋಚಲಾಗಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ದೂರುದಾರರಾದ ಶ್ರೀನಿವಾಸ್ ಅವರ ಮನೆಯ ಮುಂದೆ ಹಾರ್ಡ್‍ವೇರ್ ಮಳಿಗೆ ಇದ್ದು ಮನೆ ಅದರ ಜೊತೆಯಲ್ಲಿಯೇ ಹಿಂದೆ ಇದೆ. ಯಾರೋ ಪರಿಚಯ ಇರುವ ದುಷ್ಕರ್ಮಿಗಳು ಈ ಕಳವು ನಡೆಸಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ತನಿಖಾ ತಂಡಗಳನ್ನು ರಚಿಸಿ ಶೋಧನೆ ಮುಂದುವರೆಸಿದ್ದಾರೆ.

ಶ್ವಾನ ದಳ ವಿಫಲ ನಗರ ಪೊಲೀಸರು ಮಡಿಕೇರಿಯಿಂದ ಶ್ವಾನ ದಳ ಕರೆಸಿದ್ದು ಮನೆಯ ಸುತ್ತ ಸಂಚರಿಸಿ ಅಲ್ಲಿಯೇ ನಿಂತಿದೆ. ಘಟನೆ ನಡೆದ ಸ್ಥಳದ ಕೊಠಡಿಯನ್ನು ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.