ಸೋಮವಾರಪೇಟೆ,ಏ.25: ಸರ್ಕಾರದ ಕೆಲಸ-ದೇವರ ಕೆಲಸ ಎಂಬ ಮಾತಿದೆ. ಕರ್ತವ್ಯದಲ್ಲಿ ದೇವರನ್ನು ಕಾಣುವ ಅನೇಕ ನೌಕರರು ಸಮಾಜದಲ್ಲಿ ಕಾಣಸಿಗುತ್ತಾರೆ. ಕೊರೊನಾ ವೈರಸ್‍ನ ಈ ಸಂದರ್ಭದಲ್ಲಂತೂ ಸರ್ಕಾರದ ಆರೋಗ್ಯ, ಪೊಲೀಸ್ ಸೇರಿದಂತೆ ಅನೇಕ ಇಲಾಖೆಯ ನೌಕರರು ಜನಸಾಮಾನ್ಯರ ಆರೋಗ್ಯ ಕಾಪಾಡುವ ದೇವರಂತಾಗಿದ್ದಾರೆ. ಇಂತಹ ಸಂದರ್ಭದಲ್ಲೇ ಸಾರ್ವಜನಿಕರಿಗೆ ಸೇರಬೇಕಾದ ಅಂಚೆಗಳನ್ನು ಮೂಟೆಕಟ್ಟಿ ರಸ್ತೆ ಬದಿಗೆ ಎಸೆದ ಅಂಚೆ ಪೇದೆಯ ಕರ್ತವ್ಯಲೋಪ ಬಯಲಾಗಿದೆ.ಇದೇ ಘಟನೆಗೆ ಸಂಬಂಧಿಸಿ ದಂತೆ ಕಳೆದ ಜನವರಿ ತಿಂಗಳವರೆಗೆ ಸೂರ್ಲಬ್ಬಿಯಲ್ಲಿ ಅಂಚೆ ಪೇದೆ ಆಗಿ ಕೆಲಸ ನಿರ್ವಹಿಸಿ, ಇತ್ತೀಚೆಗಷ್ಟೇ ನಾಪೋಕ್ಲು ಸಮೀಪದ ಚೆಯ್ಯಂಡಾಣೆಯ ಅಂಚೆಕಚೇರಿಗೆ ವರ್ಗವಾಗಿದ್ದ ಎ.ಯು. ಮಹೇಶ್ ಎಂಬಾತನ ವಿರುದ್ಧ ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಕಳೆದ ತಾ. 21ರಂದು ಸೋಮವಾರಪೇಟೆ ತಾಲೂಕಿನ ಗರ್ವಾಲೆ ಮತ್ತು ಮಡಿಕೇರಿಯ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಯಲ್ಲಿರುವ ಹಮ್ಮಿಯಾಲ-ಮುಟ್ಲು ಮುಖ್ಯರಸ್ತೆಯ ಜಂಕ್ಷನ್‍ನ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮೂಟೆಯೊಳಗೆ ನೂರಾರು ಆಧಾರ್‍ಕಾರ್ಡ್, ಪಾನ್‍ಕಾರ್ಡ್, ಎಟಿಎಂಗಳು, ಚೆಕ್‍ಬುಕ್, ಶಾಲಾ ದಾಖಲಾತಿ, ಎಲ್‍ಐಸಿ ದಾಖಲಾತಿ, ಪಿಂಚಣಿಗೆ ಸಂಬಂಧಿಸಿದ ದಾಖಲಾ ತಿಗಳು, ಸೈನ್ಯಕ್ಕೆ ಸಂಬಂಧಿಸಿದ ದಾಖಲೆಗಳು ಕಂಡುಬಂದಿದ್ದವು. ಇವೆಲ್ಲವೂ ಸೂರ್ಲಬ್ಬಿ ಅಂಚೆ ಕಚೇರಿಯಿಂದ ಸಾರ್ವಜನಿಕರಿಗೆ ಬಟವಾಡೆಯಾಗಬೇಕಿದ್ದ ಅಂಚೆಗಳು ಎಂಬದು
(ಮೊದಲ ಪುಟದಿಂದ) ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಇವುಗಳನ್ನು ಸೂರ್ಲಬ್ಬಿಯ ನಿವಾಸಿ ಜಯಂತಿ ಎಂಬವರು ತಮ್ಮ ಮನೆಗೆ ಸಾಗಿಸಿದ್ದರು.
ಈ ವ್ಯಾಪ್ತಿಯಲ್ಲಿ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸುತ್ತಿದ್ದ ಸೇವಾ ಕೇಂದ್ರದ ಸಂಚಾಲಕರಾದ ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್ ಸೋಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ವ್ಯವಸ್ಥಾಪಕ ವಿ.ಟಿ. ಮದನ್, ಪ್ರಮುಖರಾದ ಪುದಿಯೊಕ್ಕಡ ರಾಜ ಅವರುಗಳಿಗೆ ಕಳೆದ ತಾ. 23ರಂದು ಜಯಂತಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮನೆಗೆ ತೆರಳಿ ಪರಿಶೀಲಿಸಿದ ಸಂದರ್ಭ ಸೂರ್ಲಬ್ಬಿ ಅಂಚೆಕಚೇರಿಯಲ್ಲಿ ಅಂಚೆ ಪೇದೆ ಆಗಿದ್ದ ಮಹೇಶ್ ಎಂಬಾತನ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ.
ಮಡಿಕೇರಿಯ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು, ಹಮ್ಮಿಯಾಲ, ಸೋಮವಾರಪೇಟೆಯ ಗರ್ವಾಲೆ ಗ್ರಾಮ ಪಂಚಾಯಿತಿಯ ಮಂಕ್ಯ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ ವ್ಯಾಪ್ತಿಯ ಸಾರ್ವಜನಿಕರಿಗೆ ಕಳೆದ 2017ರಿಂದ ಬಂದಿದ್ದ ನೂರಾರು ಅಂಚೆಗಳು ಮೂಟೆಯೊಳಗೆ ಇದ್ದುದು ಪತ್ತೆಯಾಗಿದೆ. ಸಾರ್ವಜನಿಕರಿಗೆ ಬಂದಂತಹ ಅಂಚೆಗಳನ್ನು ಸಮರ್ಪಕವಾಗಿ ವಿತರಣೆ ಮಾಡದೇ, ಕರ್ತವ್ಯ ಲೋಪ ಎಸಗಿದ ಅಂಚೆ ಪೇದೆ ಮಹೇಶ್, ಕರ್ತವ್ಯದಲ್ಲಿ ನಿರ್ಲಕ್ಷ್ಯತನ, ದುರುದ್ದೇಶ, ನಂಬಿಕೆದ್ರೋಹ ಎಸಗಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೇವಾ ಕೇಂದ್ರದ ಸಂಚಾಲಕರಲ್ಲೊಬ್ಬರಾದ ತೇಲಪಂಡ ಪ್ರಮೋದ್ ಸೋಮಯ್ಯ ಅವರು ಇಂದು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆ, ಠಾಣಾಧಿಕಾರಿ ಶಿವಶಂಕರ್ ಅವರು, ಅಂಚೆ ಪೇದೆ ಮಹೇಶ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಅದರಂತೆ ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್‍ನನ್ನು ಪೊಲೀಸರು ವಶಕ್ಕೆ ಪಡೆದು, ಸೋಮವಾರಪೇಟೆಗೆ ಕರೆತಂದು ತನಿಖೆಗೊಳಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತಮಗೆ ಬರಬೇಕಾಗಿದ್ದ ಅಂಚೆಗಳು ರಸ್ತೆ ಬದಿಯ ಮೂಟೆಯಲ್ಲಿ ಕೊಳೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು, ಅಂಚೆ ಪೇದೆ ಮಹೇಶ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ ಚೀಲ ಸಂಗ್ರಹಿಸಿದ್ದ ಮಹಿಳೆ ಪೊಲೀಸ್ ದೂರು ನೀಡುವ ಬದಲು ತಡವಾಗಿ ಸಾರ್ವಜನಿಕರಿಗೆ ದೂರು ನೀಡಿದ್ದೇಕೆ ಎಂದೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.