ಸೋಮವಾರಪೇಟೆ, ಏ. 25: ಗರ್ವಾಲೆ ಗ್ರಾಮ ಸಮೀಪದ ಕೋಟೆಬೆಟ್ಟ ವ್ಯಾಪ್ತಿಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 50 ಸಾವಿರ ಮೌಲ್ಯದ ಕರ್ಪಚಕ್ಕೆಯನ್ನು ಪೊಲೀಸ್ ಹಾಗೂ ಅರಣ್ಯ ಇಲಾಖಾಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.
ಕೋಟೆಬೆಟ್ಟದ ಕಾಡು ಪ್ರದೇಶದಲ್ಲಿ ಸುಮಾರು 50 ಸಾವಿರ ಮೌಲ್ಯದ ಕರ್ಪ ಚಕ್ಕೆಯನ್ನು ಸಂಗ್ರಹಿಸಿ, ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸ್ಥಳದಲ್ಲಿದ್ದ 8 ಚೀಲಗಳಷ್ಟು ಕರ್ಪಚಕ್ಕೆಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿ ಚನ್ನಕೇಶವಯ್ಯ, ಪೇದೆ ಚಂಗಪ್ಪ, ರಮೇಶ್, ಹರೀಶ್, ಫಾರೆಸ್ಟರ್ ಜಗದೀಶ್, ಗಾರ್ಡ್ ಚೇತನ್, ಭರಮಪ್ಪ, ಪ್ರಸಾದ್, ಮಂಜುನಾಥ್ ಮತ್ತು ಆರ್.ಆರ್.ಟಿ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖಾಧಿಕಾರಿಗಳು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.