ಕೊಡಗಿನ ಗಡಿಯಾಚೆ

ಎಂಎಲ್‍ಸಿ ಪುತ್ರ ಪೊಲೀಸ್ ವಶ

ಮಂಡ್ಯ, ಏ. 25: ಕೋವಿಡ್ ಪರೀಕ್ಷೆಗಾಗಿ ಬಂದಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ (ಜೆಡಿಎಸ್) ಪುತ್ರ ಕೃಶಿಕ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ರಕರ್ತರ ಆರೋಗ್ಯ ತಪಾಸಣೆಯನ್ನು ತಮ್ಮ ಮನೆ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸುವುದಕ್ಕೆ ಶ್ರೀಕಂಠೇಗೌಡ ತಮ್ಮ ಬೆಂಬಲಿಗರೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶ್ರೀಕಂಠೇಗೌಡ, ಅವರ ಪುತ್ರ ಮತ್ತು ಬೆಂಬಲಿಗರು ಸ್ಥಳದಲ್ಲಿಯೇ ಸರ್ಕಾರಿ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಕೃಶಿಕ್ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆತನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ಕಡ್ಡಾಯ

ಚಾಮರಾಜನಗರ, ಏ. 25: ಮೇ 3 ರ ಲಾಕ್‍ಡೌನ್ ಮುಗಿದ ನಂತರ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸುವುದು ಕಡ್ಡಾಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ, ವಿದ್ಯಾರ್ಥಿಗಳು ಕೊರೊನಾ ವೈರಸ್ ಹಾಳು ಮಾಡಿರುವ ಲಾಕ್‍ಡೌನ್ ಸಮಯವನ್ನು ಓದಿನತ್ತ ಚಿತ್ತಹರಿಸಿ ಹೆಚ್ಚು ಅಂಕಗಳಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ಪರೀಕ್ಷೆಯು ಮೇ 3ರ ಲಾಕ್‍ಡೌನ್ ಮುಗಿದ ನಂತರ ನಡೆಯುವುದು ಕಡ್ಡಾಯ. ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಪ್ರತಿ ವಿಷಯಗಳು ನಡೆಯುವ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುವುದು. ಸುಮ್ಮನೆ ಪೋಷಕರು ಹಾಗೂ ವಿದ್ಯಾರ್ಥಿಗಳು ಅನಗತ್ಯ ವದಂತಿಗಳಿಗೆ ಕಿವಿಗೊಡದೆ ಓದಿನಲ್ಲಿ ತಲ್ಲೀನರಾಗಬೇಕೆಂದು ಮನವಿ ಮಾಡಿದ್ದಾರೆ.