ಮಡಿಕೇರಿ, ಏ. 25: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಇಂದು ಮಡಿಕೇರಿಯ ಮುನ್ನೂರಕ್ಕೂ ಅಧಿಕ ಆಟೋಚಾಲಕರ ಕುಟುಂಬಗಳಿಗೆ ಉಚಿತವಾಗಿ ಆಹಾರ ಕಿಟ್ನೊಂದಿಗೆ ಕುಂಬಳಕಾಯಿ, ಸ್ಯಾನಿಟೈಸರ್ ವಿತರಿಸಲಾಯಿತು.ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಆಟೋಚಾಲಕರ ಸಂಘದ ಅಧ್ಯಕ್ಷ ಡಿ.ಹೆಚ್. ಮೇದಪ್ಪ ಸಲ್ಲಿಸಿದ ಮನವಿಗೆ ಆಶ್ರಮ ಅಧ್ಯಕ್ಷರಾಗಿರುವ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಹಾಗೂ ಶ್ರೀ ಗೋಪೇಂದ್ರ ಮಹಾರಾಜ್ ಸ್ಪಂದಿಸಿ ಆಹಾರ ಕಿಟ್ ಪೂರೈಸಿದರು.ಇಲ್ಲಿನ ಗಾಂಧಿ ಮೈದಾನದಲ್ಲಿ ಸರದಿಯಲ್ಲಿ ಅಂತರದೊಂದಿಗೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಆಟೋಚಾಲಕರಿಗೆ ಆಶ್ರಮದ ಸ್ವಾಮೀಜಿಗಳು ಹಾಗೂ ಸಂಘಟನೆ ಪ್ರಮುಖರೊಂದಿಗೆ ‘ಶಕ್ತಿ’ ಆಡಳಿತ ಸಂಪಾದಕರಾದ ಜಿ. ಚಿದ್ವಿಲಾಸ್ ಹಾಗೂ ಟಿ.ವಿ. 1 ಸಂಪಾದಕ ಅನಿಲ್ ಎಚ್.ಟಿ. ಆಹಾರ ಕಿಟ್ಗಳನ್ನು ವಿತರಿಸಿದರು.ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸ್ವಾಮಿಬೋಧ ಸ್ವರೂಪಾನಂದರು, ಕೊರೊನಾ ಸೋಂಕಿನ ಪರಿಣಾಮ ಹಸಿವಿನಿಂದ ದುಡಿಯುವ ವರ್ಗ ಮತ್ತು ಕೊಡಗಿನ ಆದಿವಾಸಿಗಳು ಬಳಲದಂತೆ ಈ ತನಕ 3100 ಕುಟುಂಬಗಳಿಗೆ ಆಹಾರ ಕಿಟ್ ನೀಡಿರುವುದಾಗಿ ಮಾಹಿತಿ ನೀಡಿದರು.
ಅಲ್ಲದೆ ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ದಕ್ಷಿಣ ಕೊಡಗಿನ ಗಿರಿಜನ ಹಾಡಿ ನಿವಾಸಿಗಳಿಗೆ ತರಕಾರಿ, ನಿತ್ಯೋಪಯೋಗಿ ವಸ್ತುಗಳನ್ನು ನೀಡಲು ಆಶ್ರಮದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.ದೇಶ ಹಾಗೂ ಜಗತ್ತು ಎದುರಿಸುತ್ತಿರುವ ಕೊರೊನಾದಿಂದ ಆದಷ್ಟು ಬೇಗನೆ ಮನುಕುಲ ಹೊರಬರಬೇಕಿದೆ ಎಂದು ಅಭಿಪ್ರಾಯ ಪಟ್ಟ ಅವರು, ಸ್ವಾಮಿ ವಿವೇಕಾನಂದರ ಆಶಯದಂತೆ ಕಷ್ಟದಲ್ಲಿರುವವರಿಗೆ ಆಶ್ರಮದಿಂದ ಕೈಲಾಗುವ ಸೇವೆ ನೀಡುತ್ತಿರುವುದಾಗಿ ನೆನಪಿಸಿದರು. ನಗರ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡಿದ್ದರು.