ನವದೆಹಲಿ, ಏ. 25: ಕೊರೊನಾ ಭೀತಿಯ ನಡುವೆ ಕೊನೆಗೂ ಕೇಂದ್ರ ಸರ್ಕಾರ ಒಂದು ತಿಂಗಳ ನಂತರ ಲಾಕ್‍ಡೌನ್ ನಿಯಮವನ್ನು ಸಡಿಲಿಕೆ ಮಾಡಿದೆ. ಈ ಹಿಂದೆ ತಾ. 15 ರಂದು ಪ್ರಕಟಿಸಿದ್ದ ಮಾರ್ಗಸೂಚಿಗೆ ಅಂಗಡಿಗಳನ್ನು ತೆರೆಯುವ ವಿಚಾರದಲ್ಲಿ ಮಾತ್ರ ಇದೀಗ ಎರಡು ತಿದ್ದುಪಡಿಗಳನ್ನು ತಂದು ಸಡಿಲಿಕೆ ಮಾಡಿದೆ. ಉಳಿದಂತೆ ತಾ. 15 ರಂದು ಪ್ರಕಟಿಸಿದ್ದ ಇತರ ಎಲ್ಲ ಮಾರ್ಗಸೂಚಿಗಳಲ್ಲಿ ಯಾವದೇ ಬದಲಾವಣೆಯಿಲ್ಲ ಎಂದು ಖಚಿತಪಡಿಸಿದೆ. ನಿನ್ನೆ ತಡರಾತ್ರಿ ಆದೇಶವನ್ನು ಹೊರಡಿಸಿದ್ದ ಸರಕಾರ ಇಂದು ಮತ್ತೆ ಕೆಲವೊಂದು ಬದಲಾವಣೆಗಳೊಂದಿಗೆ ಅಂತಿಮ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯವು ಗ್ರಾಮೀಣ ಮಟ್ಟದಲ್ಲಿ ಹಾಗೂ ಪುರಸಭಾ ವ್ಯಾಪ್ತಿಗÉ ಸೀಮಿತವಾಗಿ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಿದೆ. ಆದರೆ, ಈ ಸಡಿಲಿಕೆಯನ್ನು ಜಾರಿಗೊಳಿಸುವ ಅಧಿಕಾರವನ್ನು ಆಯಾ ರಾಜ್ಯ ಸರಕಾರಗಳ ನಿರ್ಧಾರಕ್ಕೆ ಬಿಡಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ನಗರಗಳಿಗೆ ಈ ಸಡಿಲಿಕೆÉ ಅನ್ವಯವಾಗುವುದೆ ಎನ್ನುವ ಕುರಿತು ಈ ಆದೇಶದಲ್ಲಿ ಪ್ರಸ್ತಾಪಿಸಿಲ್ಲ.

ಆದೇಶದಲ್ಲಿನ ಮಾಹಿತಿಯಂತೆ ಪುರಸಭಾ ವ್ಯಾಪ್ತಿಯಲ್ಲ್ಲಿರುವ ಹಾಗೂ ಪುರಸಭಾ ವ್ಯಾಪ್ತಿಯಿಂದ ಹೊರತಾದ (ಗ್ರಾಮೀಣ) ಪ್ರದೇಶಗಳಲ್ಲಿ ವಸತಿ ಪ್ರದೇಶದಲ್ಲಿರುವ ಎಲ್ಲ ಸರಕುಗಳ ಮಾರಾಟದ ಅಂಗಡಿ ಮುಂಗಟ್ಟುಗಳು ಹಾಗೂ ಮಾರುಕಟ್ಟೆ ಪ್ರದೇಶದಿಂದ ಹೊರತಾಗಿರುವ ಎಲ್ಲ ಸರಕುಗಳ ಮಾರಾಟದ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ, ಈ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಹಾಗೂ ಮಾರುಕಟ್ಟೆ ಸ್ಥಳಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು (ದಿನಸಿ, ತರಕಾರಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳನ್ನು ಬಿಟ್ಟು) ಹಾಗೂ ಮಲ್ಟಿ-ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್‍ಗಳನ್ನು ಮೇ 3 ರವರೆಗೆ ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರತಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ್ದಾರೆ.

ಆದರೆ, ಅಂಗಡಿಗಳನ್ನು ತೆರೆಯುವ ಮುನ್ನ ಎಲ್ಲರೂ ಸೂಕ್ತ ರೀತಿಯಲ್ಲಿ ಆರೋಗ್ಯದ ಕುರಿತು ಸರ್ಕಾರದ ಎಚ್ಚರಿಕೆ ಮತ್ತು ನಿಯಮವನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಂಗಡಿಗಳಲ್ಲಿ ಶೇ.50 ರಷ್ಟು ಸಿಬ್ಬಂದಿ ಮಾತ್ರÀ ಕೆಲಸ ಮಾಡಬೇಕು. ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಬೇಕು. ಈ ಕುರಿತು ಪುರಸಭಾ ವ್ಯಾಪ್ತಿಯ ಮತ್ತು ಪುರಸಭಾ ವ್ಯಾಪ್ತಿಯಿಂದ ಹೊರತಾದ ಪ್ರದೇಶಗಳಲ್ಲಿ (ಗ್ರಾಮೀಣ) ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ‘ಹಾಟ್‍ಸ್ಪಾಟ್’ ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಮಾತ್ರ ಈ ವಿನಾಯಿತಿ ಅನ್ವಯವಾಗುವುದಿಲ್ಲ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.