ಮಡಿಕೇರಿ, ಏ. 24: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಸುದ್ದಿ ಹರಡುವುದರೊಂದಿಗೆ; ಎರಡು ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ಸಂಚು ರೂಪಿಸಿದ್ದ ಆರೋಪಿ ಪೊನ್ನತ್ಮೊಟ್ಟೆಯ ನಾಸೀರ್ ಅಲಿಯಾಸ್ ನಸೀ (32) ಎಂಬಾತನಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯವು ಮುನ್ನೆಚ್ಚರಿಕೆ ಕ್ರಮ ವಹಿಸಿ ಜಾಮೀನು ನೀಡಿರುವುದಾಗಿ ತಿಳಿದುಬಂದಿದೆ.
ಅಲ್ಲದೆ ಆರೋಪಿ ವಿರುದ್ಧ ಸಿ.ಇ.ಎನ್. ಅಪರಾಧ ತಡೆ ಪೊಲೀಸ್ ಘಟಕವು ಪ್ರತ್ಯೇಕ ಮೊಕದ್ದಮೆ ದಾಖಲಿಸಿಕೊಂಡಿದೆ. ನಾಸೀರ್ ವೀರಾಜಪೇಟೆಯ ಮೊಬೈಲ್ ಅಂಗಡಿಯೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದು, ಆತನ ವಿರುದ್ಧ ಐ.ಟಿ. ಕಾಯ್ದೆ 67ರ ಅನ್ವಯ ಪ್ರಕರಣ ಹಾಗೂ ಐಪಿಸಿ 505 (1,2) ಮತ್ತು 504, 509ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಇನ್ನು ಮತೀಯ ಭಾವನೆ ಕೆರಳಿಸುವುದರೊಂದಿಗೆ; ಎರಡು ಧರ್ಮಗಳ ನಡುವೆ ದ್ವೇಷ ಮೂಡಿಸುವ ಯತ್ನಕ್ಕಾಗಿ ಕಾಯ್ದೆ 153 ‘ಎ’ ಅಡಿಯಲ್ಲಿಯೂ ಮೊಕದ್ದಮೆ ದಾಖಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.