ಮಡಿಕೇರಿ, ಏ. 24: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಾ. 23ರ ಸಂಜೆಯಿಂದ ಗುಡುಗು - ಮಿಂಚು ಸಹಿತವಾಗಿ ಮಳೆ ಯಾಗುತ್ತಿದ್ದು; ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಮಳೆಗಾಲದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಸಂಜೆ 4.30ರ ಸುಮಾರಿಗೆ ಗುಡುಗು ಸಹಿತವಾಗಿ ಮಳೆಯಾಗಿದ್ದು; ರಾತ್ರಿ ಮಾತ್ರವಲ್ಲದೆ ಇಂದು ಅಪರಾಹ್ನ ದವರೆಗೂ ಇದೇ ರೀತಿಯ ವಾತಾವರಣ ಉಂಟಾಗಿತ್ತು. ಕೊಡಗು ಸೇರಿದಂತೆ ರಾಜ್ಯದ ಒಳನಾಡಿನಲ್ಲಿ ತಾ. 26ರ ತನಕ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮುಂಜಾಗ್ರತೆ ನೀಡಿದ್ದು; ಯಲ್ಲೋ ಅಲರ್ಟ್ ಕೂಡ ಘೋಷಿಸಿದೆ.ಮಡಿಕೇರಿ ಮಾತ್ರವಲ್ಲದೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನಿನ್ನೆಯಿಂದ ಸುಮಾರು 50 ಸೆಂಟ್‍ನಿಂದ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಗೋಚರಿಸುತ್ತಿದ್ದು; ಆಗಾಗ್ಗೆ ತುಂತುರು ಮಳೆ ಬೀಳುತ್ತಿರುವದು ಮುಂದುವರಿದಿದೆ. ತಾ. 24ರಂದು ಲಾಕ್‍ಡೌನ್ ನಿರ್ಬಂಧ ಅಪರಾಹ್ನ 12ರ ತನಕ ಸಡಿಲಿಕೆಯಿದ್ದು; ತುಂತುರು ಮಳೆಯ ನಡುವೆ ವಹಿವಾಟು ನಡೆಯುತ್ತಿತ್ತು. ಮಡಿಕೇರಿಯಲ್ಲಿ ಜನದಟ್ಟಣೆಯೊಂದಿಗೆ ವಾಹನ ದಟ್ಟಣೆಯನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು.
ಎಡೆಬಿಡದೆ ಸುರಿದ ಮಳೆನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ 3 ಗಂಟೆಗೆ ಆರಂಭಗೊಂಡ ಮಳೆಯು ಇಂದು ಬೆಳಿಗ್ಗೆ 11.30ರ ವರೆಗೂ ಧಾರಾಕಾರವಾಗಿ ಸುರಿಯಿತು.
ಈ ಮಳೆಯು ಕಾಫಿ ತೋಟಕ್ಕೆ ರಸ ಗೊಬ್ಬರ ಹಾಕಲು ಸೂಕ್ತವಾಗಿದೆ ಎಂಬ ಕಾರಣಕ್ಕಾಗಿ ಬೆಳೆಗಾರರು ಬಿರುಸಿನ ರಸಗೊಬ್ಬರ ಖರೀದಿಯಲ್ಲಿ ತೊಡಗಿಕೊಂಡರು. ನಾಪೆÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೊಬ್ಬರ ವಿಭಾಗದಲ್ಲಿ ಗೊಬ್ಬರ ತುಂಬಿಸಲು ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವದು ಕಂಡುಬಂತು. ಈ ಮಳೆಯು
ತಾ. 26ರ ವರೆಗೆ
(ಮೊದಲ ಪುಟದಿಂದ) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತಿ ನಿತ್ಯ ಇದೇ ರೀತಿ ಮಳೆ ಸುರಿದರೆ ತೋಟದ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು ಎನ್ನುವ ಅಭಿಪ್ರಾಯಗಳು ಬೆಳೆಗಾರರಿಂದ ಕೇಳಿ ಬರುತ್ತಿದೆ. ಮಳೆಯಿಂದ ಯಾವದೇ ಕಷ್ಟನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಸುಂಟಿಕೊಪ್ಪದಲ್ಲಿ ಭಾರೀ ಮಳೆ
ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಧ್ಯರಾತ್ರಿಯಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಶುಕ್ರವಾರ ಮಧ್ಯರಾತ್ರಿ ಆರಂಭಗೊಂಡ ಮಳೆ ಬೆಳಿಗ್ಗೆ 10 ಗಂಟೆಯವರೆಗೆ ಸುರಿಯಿತು. ಸಂಪೂರ್ಣ ಮೋಡ ಕವಿದಿದ್ದು ಮಳೆಗಾಲದ ವಾತವಾರಣ ಮೂಡಿ ಬಂದಿತು. ನಾಕೂರು, ಮಾದಾಪುರ, ಕಂಬಿಬಾಣೆ, ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ ಹಾಗೂ ಕೆದಕಲ್ ವ್ಯಾಪ್ತಿಯಲ್ಲಿ ಒಂದರಿಂದ ಎರಡು ಇಂಚಿನಷ್ಟು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಗೋಣಿಕೊಪ್ಪಲು ಭಾಗಕ್ಕೆ ಉತ್ತಮ ಮಳೆ
*ಗೋಣಿಕೊಪ್ಪಲು : ಗುಡುಗು ಸಿಡಿಲಿನ ಆರ್ಭಟದಲ್ಲಿ ಗೋಣಿಕೊಪ್ಪಲು ಸುತ್ತಮುತ್ತ ಉತ್ತಮ ಮಳೆ ಸುರಿಯಿತು. ಗುರುವಾರ ಮಧ್ಯರಾತ್ರಿ 1.30ಕ್ಕೆ ಆರಂಭಗೊಂಡ ಮಳೆ ಶುಕ್ರವಾರ ಬೆಳಿಗ್ಗೆ 8 ಗಂಟೆವರೆಗೂ ನಿರಂತರವಾಗಿ ಸುರಿಯಿತು.
ಇದರಿಂದ ಬಿಸಿಲಿನ ಬೇಗೆಯಲ್ಲಿ ಬಸವಳಿದಿದ್ದ ಪರಿಸರ ತುಸು ತಂಪಾಯಿತು. ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಆರಂಭಗೊಂಡಿತು. ಮಳೆಯ ಜತೆಗೆ ಕಿವಿಗಡಚಿಕ್ಕುವ ಗುಡುಗು ಸಿಡಿಲು ಹೆಚ್ಚಿತ್ತು. ಕೆಲವೊಮ್ಮೆ ರಭಸವಾಗಿ, ಮತ್ತೆ ಕೆಲವು ಸಲ ಸಾಧಾರಣವಾಗಿ ಸುರಿಯಿತು. ಇದರಿಂದ ಒಣಗಿ ಬಿರುಕು ಬಿಟ್ಟಿದ್ದ ಹಳ್ಳಕೊಳ್ಳಗಳು ನೀರು ತುಂಬಿ ನಳನಳಿಸಿದವು. ಗುರುವಾರ ರಾತ್ರಿ ವಿಪರೀತ ಹೆಚ್ಚಿದ್ದ ತಾಪಮಾನ ಶುಕ್ರವಾರ ಬೆಳಿಗ್ಗೆ ಕಡಿಮೆಯಾಗಿ ಚಳಿ ವಾತಾವರಣ ಮೂಡಿಸಿತು.
ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ಭೂಮಿ ತಣಿದಿದ್ದು ಕಾಫಿ, ಮೆಣಸು ಮತ್ತಿತರ ಕೃಷಿಗೆ ಅನುಕೂಲವಾಗಲಿದೆ ಎಂದು ಜನತೆ ಹರ್ಷಗೊಂಡಿದ್ದಾರೆ.ಗೋಣಿಕೊಪ್ಪಲು ಸೇರಿದಂತೆ ಅರುವತ್ತೊಕ್ಕಲು, ಅತ್ತೂರು, ತಿತಿಮತಿ, ಮಾಯಮುಡಿ, ಕೋಣನಕಟ್ಟೆ, ನಾಗರಹೊಳೆ ಅರಣ್ಯ ಮೊದಲಾದ ಕಡೆಗೆ 1.50 ಸೆಂಮೀ ವರೆಗೆ ಮಳೆ ಬಿದ್ದಿದೆ.
ಶುಕ್ರವಾರ 8 ಗಂಟೆ ವರೆಗೂ ಮಳೆ ಬೀಳುತ್ತಿದ್ದುದರಿಂದ ಬಯಲಿನಲ್ಲಿ ಕೂರುತ್ತಿದ್ದ ತರಕಾರಿ, ದಿನಸಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮರೆ ಮಾಡಿಕೊಂಡಿದ್ದರು. ಗ್ರಾಹಕರು ಕೊಡೆಯ ಆಸರೆ ಪಡೆದರು. ಇದ್ದಕ್ಕಿದ್ದಂತೆ ಪರಿಸರದಲ್ಲಿ ಬಿಸಿಲಿನ ತಾಪ ಹೋಗಿ ಮಳೆಗಾಲದ ವಾತಾವರಣ ಮೂಡಿತ್ತು. ಇಡೀ ದಿನ ಮೋಡ ಕವಿದ ವಾತಾವರಣವಿತ್ತು.
ಕೂಡಿಗೆ ಭಾರೀ ಮಳೆ
ಕೂಡಿಗೆ: ಕೂಡಿಗೆ ಹೆಬ್ಬಾಲೆ ಶಿರಂಗಾಲ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಬಾರಿ ಮಳೆ ಬಿದ್ದಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಒಂದೂವರೆ ಇಂಚು ಮಳೆ ಬಿದ್ದಿದ್ದು; ಮುಂಗಾರು ಬೇಸಾಯಕ್ಕೆ ಭೂಮಿ ಸಿದ್ಧತೆಯಲ್ಲಿ ರೈತರು ಅಣಿಯಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಬಾರಿ ಬಿಸಿಲಿನ ತಾಪದಿಂದ ಜನರು ನರಳುತ್ತಿದ್ದರು ಇಂದು ಬಿದ್ದ ಮಳೆ ಸ್ವಲ್ಪ ಮಟ್ಟಿಗೆ ತಂಪು ನೀಡಿದೆ.
ಕುಶಾಲನಗರ: ಕುಶಾಲನಗರದಲ್ಲಿ ಗುರುವಾರ ತಡರಾತ್ರಿಯಲ್ಲಿ ಸುರಿದ ಮಳೆಗೆ ಕೆಲವೆಡೆ ಅಲ್ಪ ಸ್ವಲ್ಪ ಹಾನಿ ಉಂಟಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೆಲವು ಮನೆಗಳು ಕುಸಿದಿವೆ ಮತ್ತು ಕುಶಾಲನಗರ ಗಡಿಭಾಗದಲ್ಲಿ ನಿರ್ಮಿಸಲಾಗಿದ್ದ ತಪಾಸಣಾ ಕೇಂದ್ರದ ಶೆಡ್ ನೆಲಕಚ್ಚಿದೆ ಕರ್ತವ್ಯನಿರತ ಸಿಬ್ಬಂದಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ನೂತನ ಶೆಡ್ ನಿರ್ಮಿಸುವಲ್ಲಿ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಗಾಳಿ ಮಳೆಗೆ ಪೆÇಲೀಸ್ ತಪಾಸಣಾ ಕೇಂದ್ರ ಹಾರಿಹೋದ ಹಿನ್ನೆಲೆಯಲ್ಲಿ ಕೂಡಿಗೆ ಸೈನಿಕ ಶಾಲೆ ವತಿಯಿಂದ ಟೆಂಟ್ ನಿರ್ಮಾಣ ಮಾಡಲಾಗಿತ್ತು.
ಕುಶಾಲನಗರ ಗಡಿಭಾಗದಲ್ಲಿ ಪೆÇಲೀಸ್ ತಪಾಸಣಾ ಕೇಂದ್ರದ ಶಾಶ್ವತ ಕಟ್ಟಡವನ್ನು ನಿರ್ಮಿಸಲು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಕುಶಾಲನಗರ ಸಮೀಪದ ಸುಂದರ ನಗರದಲ್ಲಿ ಪುಷ್ಪಮ್ಮ ಎಂಬವರಿಗೆ ಸೇರಿದ ಮನೆ ಕಟ್ಟಡ ಮಳೆಯಿಂದ ಕುಸಿದಿದ್ದು ಯಾವುದೇ ಅಪಾಯ ಉಂಟಾಗಿಲ್ಲ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಪ್ರತಿನಿಧಿ ಜ್ಯೋತಿ ಭೇಟಿ ನೀಡಿದ್ದಾರೆ. ಶುಕ್ರವಾರ ವಾತಾವರಣ ಮೋಡಮುಸುಕಿದ ದೃಶ್ಯ ಕಂಡು ಬಂತು. ಇನ್ನೊಂದೆಡೆ ಮಳೆ ಬಿದ್ದ ಬೆನ್ನಲ್ಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತಾಪಿವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡುಬಂತು.
ಸಿದ್ದಾಪುರ : ನಿನ್ನೆ ಸುರಿದ ಧಾರಾಕಾರ ಗಾಳಿ ಮಳೆಗೆ ಕೊಂಡಂಗೇರಿ ಗ್ರಾಮದ ಮೊಯ್ದೀನ್ ಎಂಬವರ ಮನೆಗೆ ಅಡಿಕೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಸೀಟ್‍ಗಳು ಹಾನಿಯಾಗಿದ್ದು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್ ಹಾಗೂ ಗ್ರಾಮ ಲೆಕ್ಕಿಗ ಓಮತ್ತ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರಪೇಟೆಯಲ್ಲಿ ಗುಡುಗು ಸಹಿತ ಮಳೆ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಮಳೆ ಸುರಿಯಿತು. ಕಳೆದ ಕೆಲ ಸಮಯಗಳಿಂದ ವಾತಾವರಣದಲ್ಲಿ ತಾಪಮಾನ ಏರಿಕೆಯಿಂದ ಬಿಸಿಲ ಧಗೆ ಇದ್ದುದು, ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು. ಧಾರಾಕಾರವಾಗಿ ಸುರಿದ ಮಳೆಯಿಂದ ಗದ್ದೆ ತೋಟಗಳ ಕೃಷಿಗೆ ವರದಾನವಾಗಿದ್ದು, ಕೃಷಿಕರು ಕೃಷಿ ಚಟುವಟಿಕೆಯತ್ತ ಮುಖಮಾಡಲು ಸೂಕ್ತ ವಾತಾವರಣ ಕಲ್ಪಿಸಿತು.
ದಟ್ಟ ಮೋಡ, ಗುಡುಗು, ಮಿಂಚಿನ ಆರ್ಭಟದೊಂದಿಗೆ ಧೋ ಎಂದು ಸುರಿದ ಮಳೆಗೆ ವಾತಾವರಣವೂ ಶುದ್ಧಗೊಂಡಿತು. ಪಟ್ಟಣದ ಚರಂಡಿಗಳಲ್ಲಿ ಮಳೆ ನೀರು ಹರಿದು ಕೊಳಚೆ ದೂರಾಯಿತು. ಕಾಫಿ ತೋಟಗಳಿಗೆ ಮಳೆಯ ಅವಶ್ಯಕತೆ ಇದ್ದುದರಿಂದ ಬೆಳೆಗಾರರ ಮೊಗದಲ್ಲಿ ನೆಮ್ಮದಿ ತರಿಸಿತು. ಬಿಸಿಲಿನ ತಾಪಕ್ಕೆ ಕಾಫಿ ತೋಟದ ಗಿಡಗಳು ಒಣಗಲಾರಂಭಿಸಿದ್ದರಿಂದ ಸೌಕರ್ಯ ಇರುವವರು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದರು. ಇಂತಹ ಸಂದರ್ಭದಲ್ಲೇ ಉತ್ತಮ ಮಳೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ತಂದಿತು.
ಕಾಫಿ ತೋಟಗಳಿಗೆ ಗೊಬ್ಬರ ಹಾಕಲು ಪೂರಕ ವಾತಾವರಣ ನಿರ್ಮಾಣವಾಗಿದ್ದರಿಂದ ಪಟ್ಟಣದ ಗೊಬ್ಬರದ ಅಂಗಡಿಗಳಿಂದ ಕೃಷಿಕರು ಗೊಬ್ಬರ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಇದರೊಂದಿಗೆ ಲಾಕ್‍ಡೌನ್‍ನಿಂದ ಕೃಷಿಗೆ ವಿನಾಯಿತಿ ಸಿಕ್ಕಿರುವ ಹಿನ್ನೆಲೆ ಕೃಷಿ ಸಂಬಂಧಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ಸ್ಪ್ರೇಯರ್, ವೀಡ್ ಕಟ್ಟರ್ ಯಂತ್ರಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಕೃಷಿಕರು ಮುಂದಾದರು.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೃಷಿ ಸಂಬಂಧಿತ ಅಂಗಡಿಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದವು. ನಿನ್ನೆ ರಾತ್ರಿ ಸುರಿದ ಮಳೆಗೆ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ನೀರು ಸಂಗ್ರಹವಾಗಿ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಯಿತು. ಸೋªುವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 26.2 ಮಿ.ಮೀ. ಮಳೆ ಸುರಿಯಿತು. ಇದರೊಂದಿಗೆ ಪಟ್ಟಣದ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸೂಕ್ತ ವಾತಾವರಣ ಕಲ್ಪಿಸಿತು.
ರಸ್ತೆಗೆ ಉರುಳಿದ ಮರ
ಸಿದ್ದಾಪುರ : ವೀರಾಜಪೇಟೆ ತಾಲೂಕಿನ ವೀರಾಜಪೇಟೆ - ಹಾಲುಗುಂದ ಮುಖ್ಯ ರಸ್ತೆ ನಡುವಿನ ಮೈತಾಡಿ ಅಯ್ಯಪ್ಪ ದೇವಸ್ಥಾನದ ಬಳಿ ದೊಡ್ಡ ಮರವೊಂದು ರಸ್ತೆಯ ಮಧ್ಯ ಭಾಗದಲ್ಲಿ ಗಾಳಿ ಮಳೆಗೆ ಬಿದ್ದು ವಿದ್ಯುತ್ ಲೈನ್, ಕಂಬಗಳು ನೆಲಕ್ಕೆ ಉರುಳಿ ವೀರಾಜಪೇಟೆ ಅರಣ್ಯ ವಲಯದ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಕುಮಾರ್, ಸಚಿನ್, ಅರಣ್ಯ ರಕ್ಷಕ ಅರುಣ್, ಚಂದ್ರು, ಅರ್‍ಆರ್‍ಟಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಿದ್ದಾಪುರ :ಸಿದ್ದಾಪುರ ಸುತ್ತಮುತ್ತ ನಿನ್ನೆಯಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.ಉರಿ ಬಿಸಿಲಿನಿಂದ ಕಂಗೆಟ್ಟ ಬೆಳೆಗಾರರಿಗೆ ಸುರಿದ ಮಳೆಯು ನಿಟ್ಟುಸಿರು ಬಿಡುವಂತಾಗಿದೆ.
ಕರಿಕೆ : ಕರಿಕೆ ವ್ಯಾಪ್ತಿಯಲ್ಲಿ ಎರಡು ದಿನ ಧಾರಾಕಾರ ಮಳೆ ಸುರಿದಿದ್ದು ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.ಕೆಲವು ಕಡೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ತಲೆದೋರಿದ್ದು ಇದೀಗ ನಿರಂತರ ಮಳೆಯಿಂದಾಗಿ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ.
ಸಿದ್ದಾಪುರ : ಗುರುವಾರದಂದು ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಭ್ಯತ್ ಮಂಗಲ ಒಂಟಿಯಂಗಡಿಯ ಮುಖ್ಯ ರಸ್ತೆಯಲ್ಲಿ ಮಣ್ಣು ತುಂಬಿ ಸಂಚಾರ ಅಸ್ತವ್ಯಸ್ತಗೊಂಡಿತು. ಕೂಡಲೇ ಸ್ಪಂದಿಸಿದ ವಾಲ್ನೂರು ಪಂಚಾಯತಿ ಪಿ.ಡಿ.ಓ. ಅನಿಲ್ ಕುಮಾರ್ ಕಾರ್ಮಿಕರನ್ನು ಕರೆ ತಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಲೋಡ್ ಗಟ್ಟಲೆ ಮಣ್ಣನ್ನು ಟ್ರಾಕ್ಟರ್ ಮುಖಾಂತರ ಬೇರೆಡೆಗೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.