ಮಡಿಕೇರಿ, ಏ. 23: ವಿಶ್ವವ್ಯಾಪಿಯಾಗಿ ತಲ್ಲಣ ಸೃಷ್ಟಿಸಿರುವ ಕೊರೊನಾವನ್ನು ಮೆಟ್ಟಿ ನಿಲ್ಲಲು ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಸಮರೋಪಾದಿಯ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಅದರಲ್ಲೂ ವೈದ್ಯ ಸಮೂಹ ಆರೋಗ್ಯ ಸಂಬಂಧಿತವಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ತೀರಾ ಸ್ಮರಣೀಯರು.ಇಂತಹ ಪ್ರಯತ್ನದ ನಡುವೆ ಮೊನ್ನೆ ತಾನೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಈ ‘ಆರೋಗ್ಯ ಯೋಧರ’ ಮೇಲಿನ ದೌರ್ಜನ್ಯವೊಂದು ತಲೆತಗ್ಗಿಸು ವಂತದ್ದು. ಆದರೆ ಅಮೇರಿಕಾ ರಾಷ್ಟ್ರದಲ್ಲಿ ಕೊರೊನಾ ವಿರುದ್ಧ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಸಮೂಹದಲ್ಲಿ ಒಬ್ಬರಾಗಿರುವ ಕರ್ನಾಟಕದ ಇಬ್ಬರು ವೈದ್ಯರನ್ನು ಅವರ ಸೇವೆಯನ್ನು ಗುರುತಿಸಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಬ್ಬರು ಮೈಸೂರು ಮೂಲದವರಾದ ಡಾ. ಉಮಾ ಅವರಾದರೆ ಮತ್ತೊಬ್ಬರು ನಮ್ಮ ಕೊಡಗಿನವರು.ಬಿರುನಾಣಿ ಮೂಲದವರಾಗಿ ರುವ ಕೀಕಣಮಾಡ ಡಾ. ಸುಬ್ರಮಣಿ (ಸುಗುಣ) ಅವರ ಪತ್ನಿ ಡಾ. ಪ್ರೀತಿ ಸುಬ್ರಮಣಿ ಅಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.ಇವರು ಈ ಹಿಂದೆ ಬೆಂಗಳೂರಿನಲ್ಲಿ ವೈದ್ಯ ಶಿಕ್ಷಣ ಪೂರೈಸಿ ಇದೀಗ ಯುನೈಟೆಡ್ ಸ್ಟೇಟ್ಸ್‍ನ ಸೌತ್ ವಿಂಡ್‍ಸರ್‍ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಅಲ್ಲಿನ ಸೈಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೋವಿಡ್-19ರ ವಿರುದ್ಧದ ಸೇವೆಯಲ್ಲಿ ಡಾ. ಪ್ರೀತಿ ತೊಡಗಿಸಿಕೊಂಡಿದ್ದಾರೆ.
ಹೇಗಿತ್ತು ಗೌರವ...ಡಾ. ಪ್ರೀತಿ ಹಾಗೂ ಡಾ. ಉಮಾ ಅವರುಗಳು ಒಟ್ಟೊಟ್ಟಿಗೇ ಅಲ್ಲಿ ನೆಲೆಸಿದ್ದಾರೆ. ಇವರ ಅತ್ಯಮೂಲ್ಯ ಸೇವೆಯನ್ನು ಗೌರವಿಸಿ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸಾರ್ವಜನಿಕರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತಿತರರು ನೂರಾರು ಸಂಖ್ಯೆಯಲ್ಲಿ ಇವರ ಮನೆಯ ಎದುರು ಉದ್ದನೆಯ ರಸ್ತೆಯಲ್ಲಿ ವಾಹನಗಳಲ್ಲಿ ಸಾಗಿ ಧನ್ಯವಾದ ಸಮರ್ಪಿಸಿದ್ದಾರೆ.