ಮಡಿಕೇರಿ, ಏ. 23: ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯೋರ್ವಳು ಬುಧವಾರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮಡಿಕೇರಿಯ ಯುವಕರ ತಂಡ ಸಂಪ್ರದಾಯಂತೆ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದರು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ಗ್ರಾಮದ ಕಾರ್ಮಿಕ ದಂಪತಿಗಳಾದ ಕವಿತ ಮತ್ತು ಚಂದ್ರ ಅವರು ಜಿಲ್ಲೆಯ ಮಾದಾಪುರದ ತೋಟವೊಂದರಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಅನಾರೋಗ್ಯದಿಂದಾಗಿ ಕವಿತ ಅವರನ್ನು 18 ದಿನಗಳ ಹಿಂದೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಾ. 22 ರಂದು ಕಾರ್ಮಿಕ ಮಹಿಳೆ ಸಾವನ್ನಪ್ಪಿದರು. ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸು ವುದು ಹೇಗೆ ಎಂಬ ಚಿಂತೆಯಲ್ಲಿದ್ದ ಕಾರ್ಮಿಕ ಚಂದ್ರ ಅವರ ಸಹಾಯಕ್ಕೆ ಬಂದವರು ಮಡಿಕೇರಿಯ ಯುವಕರ ತಂಡ.
ಮಡಿಕೇರಿಯಲ್ಲಿ ಮಳೆ ಸುರಿಯುತ್ತಿದ್ದರಿಂದ ಅಂತ್ಯಸಂಸ್ಕಾರ ನೆರವೇರಿಸಲು ಸಮಸ್ಯೆಯಾಯಿತು. ಈ ಸಂದರ್ಭ ಸಿ.ಐ ಅನೂಪ್ ಮಾದಪ್ಪ ಅವರು ಯುವಕರಿಗೆ ಕಾನೂನಿನ ಸಲಹೆ ಹಾಗೂ ಸಹಕಾರ ನೀಡುವ ಮೂಲಕ ಕುಶಾಲನಗರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿದರು. ಕುಶಾಲನಗರದ ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದರು.
ಮಡಿಕೇರಿ ಯೂತ್ ಕಮಿಟಿಯ ಸ್ಥಾಪಕಾಧ್ಯಕ್ಷ ಕಲೀಲ್ ಕ್ರಿಯೇಟಿವ್ ನೇತೃತ್ವದಲ್ಲಿ ಅಧ್ಯಕ್ಷ ಝೈನುಲ್ ಆಬಿದ್, ಮಾಜಿ ಅಧ್ಯಕ್ಷ ರಿಜ್ವಾನ್, ಸದಸ್ಯರಾದ ಶುಹೈಲ್, ಶಫೀಕ್, ಮೊಯಿನು, ಶಾಹಿನ್ಶಾ, ಮಡಿಕೇರಿ ರಕ್ಷಣಾ ವೇದಿಕೆಯ ಉಮೇಶ್, ಸಂದೀಪ್, ಸತೀಶ್, ಶ್ರೀಧರ್, ಬ್ಲಡ್ ಡೋನರ್ಸ್ ಸಂಘಟನೆಯ ಅಧ್ಯಕ್ಷ ವಿನು ಇದ್ದರು. ಶಿಫಾ ಆ್ಯಂಬ್ಯುಲನ್ಸ್ ಮಾಲೀಕ ಶುಕೂರ್ ಮೃತದೇಹವನ್ನು ಸಾಗಿಸಲು ಸಹಕಾರ ನೀಡಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಾದ ಸುರೇಶ್ ಬಾಬು ಮತ್ತು ಬಳಗ ಸಾಥ್ ನೀಡಿದರು.