ಮಡಿಕೇರಿ, ಏ. 23: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‍ಡೌನ್ ಅನ್ನು ಸಡಿಲಗೊಳಿಸಿ ಅಗತ್ಯವಾಗಿ ಆಗಬೇಕಿರುವ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಲಭಿಸಿರುವದರಿಂದ ನಗರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ಬಳಿಯ ರಸ್ತೆ, ಪೊಲೀಸ್ ವರಿಷ್ಠಾಧಿ ಕಾರಿ ಬಂಗಲೆ ಬಳಿ ತಡೆಗೋಡೆ ನಿರ್ಮಾಣ ಹಾಗೂ ಹಳೆ ಬಸ್ ನಿಲ್ದಾಣದ ಬಳಿಯ ತಡೆಗೋಡೆ ಕಾಮ ಗಾರಿಗಳಿಗೆ ಅಧಿಕೃತ ಅನುಮೋದ&divound; Éಗಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅನುಮೋದನೆ ಪಡೆದು ಬಳಿಕ ಕೆಲಸ ವಹಿಸಲು ಕ್ರಮಕೈಗೊಳ್ಳ ಲಾಗುತ್ತಿದೆ. ಈಗಾಗಲೇ ಎಂ.ಎಂ. ವೃತ್ತದ ಬಳಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು; ಅದನ್ನು ಪೂರ್ಣ ಗೊಳಿಸಿದ ಬಳಿಕ ಉಳಿದ ರಸ್ತೆಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿ ಕೊಳ್ಳಲಾಗುವದೆಂದು ನಗರಸಭಾ ಆಯುಕ್ತ ರಮೇಶ್ ತಿಳಿಸಿದ್ದಾರೆ.ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯಬೇಕಿದೆ. ಅದರಲ್ಲೂ ಪ್ರಮುಖವಾಗಿ ಡಾಮರು ರಸ್ತೆ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣ ಕೆಲಸಗಳು ಆಗಬೇಕಿದೆ ಯಾದರೂ ಪ್ರಸ್ತುತದ ಸನ್ನಿವೇಶದಲ್ಲಿ ಡಾಮರು ಹಾಗೂ ಸಿಮೆಂಟ್‍ನ್ನು ಹೊರಭಾಗದಿಂದ ಜಿಲ್ಲೆಗೆ ಸರಬ ರಾಜು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವದಾಗಿ ಲೋಕೋಪ ಯೋಗಿ

(ಮೊದಲ ಪುಟದಿಂದ) ಇಲಾಖೆ ಅಭಿಯಂತರ ಮದನ್ ಮೋಹನ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿ ಸುಮಾರು 50 ಕೋಟಿಯಷ್ಟು ಕಾಮಗಾರಿಗಳು ನಡೆಯಬೇಕಿದೆ. ಕಾಮಗಾರಿ ಆರಂಭಿಸಲು ಸಂಬಂಧಿಸಿದ ಗುತ್ತಿಗೆದಾರರು ಬ್ಯಾಂಕ್‍ಗಳಿಂದ ಡಿಡಿ ಪಡೆದು ಇಲಾಖೆಯಲ್ಲಿ ಭದ್ರತಾ ಠೇವಣಿ ಇಡಬೇಕಿದ್ದು; ಈ ನಿಟ್ಟಿನಲ್ಲಿ ಬ್ಯಾಂಕ್‍ಗಳಿಗೆ ತೆರಳಲು ಗುತ್ತಿಗೆದಾರರಿಗೆ ಲಾಕ್‍ಡೌನ್‍ನಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗಿದ್ದು; ಒಂದೆರಡು ದಿನದಲ್ಲಿ ಪರಿಹಾರವಾಗುವ ವಿಶ್ವಾಸವಿದೆ. ನಂತರ ಕಾಮಗಾರಿಗಳು ಕೂಡ ಪ್ರಾರಂಭವಾಗಲಿವೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಅಭಿಯಂತರ ಎಸ್.ಹೆಚ್. ಪ್ರಭು ಮಾಹಿತಿ ನೀಡಿದ್ದಾರೆ.

ಖಾಸಗಿ ಕಾಮಗಾರಿಗಳಿಗೂ ಅವಕಾಶ

ಪ್ರಸ್ತುತ ಕಟ್ಟಡ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸುವದಕ್ಕಾಗಿ ಸರ್ಕಾರ ಸಡಿಲಿಕೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆಗಳ ಕಾಮಗಾರಿಗಳಲ್ಲದೆ ಖಾಸಗಿ ಕಾಮಗಾರಿಗಳನ್ನು ಕೈಗೊಳ್ಳಬಹುದೆ ಎನ್ನುವ ಕುರಿತು ಇಂದು ಅನೇಕ ಖಾಸಗಿ ಗುತ್ತಿಗೆದಾರರು ‘ಶಕ್ತಿ’ಯೊಂದಿಗೆ ಸಂಶಯ ಹೊರಗೆಡವಿದರು. ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಬಯಸಿದಾಗ ಸ್ಪಷ್ಟನೆ ದೊರಕಿದೆ. ಖಾಸಗಿ ಗುತ್ತಿಗೆದಾರರು ತಮ್ಮ ಕಾಮಗಾರಿಗಳನ್ನು ಕಾರ್ಮಿಕರ ಮೂಲಕ ನಿರ್ವಹಿಸಬಹುದಾಗಿದೆ. ಆದರೆ ಲಾಕ್‍ಡೌನ್ ನಿಯಮದಂತೆ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ, ಅಗತ್ಯ ಕೆಲಸಗಳಿಗೆ ಅಗತ್ಯವಾದ ಸಿಮೆಂಟ್ ಇತ್ಯಾದಿ ವಸ್ತುಗಳನ್ನು ವಾಹನಗಳಲ್ಲಿ ಸಾಗಾಟಗೊಳಿಸಬಹುದಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಾರ್ಡ್‍ವೇರ್ ಅಂಗಡಿಗಳನ್ನು ತೆರೆಯುವ ಅವಕಾಶ ಮಾತ್ರ ಕಲ್ಪಿಸಿಲ್ಲ ಎಂದು ಖಚಿತಗೊಂಡಿದೆ. ಈ ನಡುವೆ ಕೂಡಿಗೆ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡದ ಕಾಮಗಾರಿ ಪುನರಾರಂಭಗೊಂಡಿದೆ.