ವೀರಾಜಪೇಟೆ, ಏ. 23: ವೀರಾಜಪೇಟೆ ಬಳಿಯ ರಾಮನಗರದ ಆನಂದ ಎಂಬವರ ತೋಟದಲ್ಲಿ ಸೌದೆ ಕಡಿಯುತ್ತಿದ್ದಾಗ ಶಂಕರ (41) ಎಂಬವನ ತಲೆಯ ಮೇಲೆ ಭಾರೀ ಗಾತ್ರದ ಒಣಗಿದ ಕೊಂಬೆ ಬಿದ್ದು ಆತನನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ದುರ್ಮರಣಗೊಂಡಿದ್ದಾನೆ.
ಬೇಟೋಳಿ ಗ್ರಾಮದ ವಿಜು, ಸತೀಶ್ ಹಾಗೂ ಶಂಕರ್ ಎಂಬ ಮೂವರು ಮನೆಗೆ ಸೌದೆ ತರಲೆಂದು ನಿನ್ನೆ ಅಪರಾಹ್ನ ತೋಟಕ್ಕೆ ಹೋಗಿ ಒಣಗಿದ ಕೊಂಬೆಗಳನ್ನು ಕಡಿದು ಅದನ್ನು ಕೆಳಗೆ ಬೀಳಿಸಲು ಹಗ್ಗದಿಂದ ಎಳೆಯುತ್ತಿದ್ದಾಗ ಭಾರೀ ಗಾತ್ರದ ಕೊಂಬೆ ಕಾಫಿ ಗಿಡದ ಮೇಲೆ ಬಿದ್ದು ನಂತರ ಶಂಕರನ ತಲೆ ಮೇಲೆ ಗಂಭೀರ ಸ್ವರೂಪದ ಗಾಯಗೊಂಡಿರುವುದಾಗಿ ಆತನ ಸಂಗಡಿಗರು ಇಲ್ಲಿನ ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಮೃತ ಶಂಕರನ ಮೃತದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ವಾರೀಸುದಾರಿಗೆ ಒಪ್ಪಿಸಿದ್ದಾರೆ.