ಜಾಗತೀಕರಣದಲ್ಲಿ ಜನರ ಮುಕ್ತ ಓಡಾಟವಿತ್ತು. ಬದಲಾಗಿ ಪ್ರಸಕ್ತ ಸಮಯದಲ್ಲಿ ಕೊರೊನಾ ವೈರಸ್‍ನ ಮುಕ್ತ ಓಡಾಟವಾಗಿದೆ. ಪ್ರಪಂಚದ ಹಲವಾರು ದೇಶಗಳಲ್ಲಿ ಕಂಡು ಕೇಳರಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ದೇಶದ ಸರಕಾರಗಳ ಕ್ಷಮತೆ, ಆರೋಗ್ಯ ಪರಿಸ್ಥಿತಿ ಅದರಲ್ಲೂ ಮುಖ್ಯವಾಗಿ ಆರ್ಥಿಕ ವ್ಯವಸ್ಥೆ ಎಲ್ಲವೂ ಚಿಂತಾಜನಕವಾಗಿದೆ. ಬೆರಳೆಣಿಕೆಯ ದೇಶಗಳು ಈ ಒಂದು ಪರಿಸ್ಥಿತಿಯಿಂದ ಪಾರಾಗಬಹುದು. ಭಾರತವು ಸೇರಿದಂತೆ ವಿಶ್ವದ ದೊಡ್ಡ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟ ಎದುರಿಸಬೇಕಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಅಮೇರಿಕಾ ವಿರುದ್ಧ ಚೀನಾ ನಡೆಸಿದ ಜೈವಿಕ ಅಸ್ತ್ರ ಎಂದು ಹೇಳಿ ಅಮೇರಿಕನ್ನರು ಚೀನಾದ ವಿರುದ್ಧ ಸ್ಥಳೀಯ ನ್ಯಾಯಾಲಯಗಳಲ್ಲಿ ದಾವೆ ಯನ್ನು ಹೂಡಿದ್ದಾರೆನ್ನಲಾಗಿದೆ. ನಂತರದ ದಿನಗಳಲ್ಲಿ ಅಮೇರಿಕಾವು ಈ ವೈರಸ್ ತಡೆಯೊಡ್ಡಲು ಬೇಕಾದ ಮಾಸ್ಕ್, ಗ್ಲೌಸ್, ಆಕ್ಸಿಜನ್ ಸಪ್ಲೈ, ಪರೀಕ್ಷೆ ಕಿಟ್ ಹಾಗೂ ಇನ್ನಿತರ ಮೆಡಿಕಲ್ ಸಲಕರಣೆಗಳಿಗೆ ಚೀನಾವನ್ನೇ ಆಶ್ರಯಿಸುವ ಪರಿಸ್ಥಿತಿ ಬಂದಿದೆ. ಪ್ರಜಾಪ್ರಭುತ್ವವಿರುವ ಅಮೇರಿಕಾ, ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಯಾವುದೇ ಒತ್ತಡವಿಲ್ಲದ ಚೀನಾ ನಾಯಕತ್ವ ಹಾಗೂ ಇನ್ನಿತರ ದೇಶಗಳಿಗೂ ಜಾಗತೀಕರಣವನ್ನು ಮುಂದೊಯ್ಯಲು ಸಾಧ್ಯವಾಗದಿರಬಹುದು. ಸೋವಿಯತ್ ಪತನದ ನಂತರ ಜಗತ್ತಿನ ದೊಡ್ಡಣ್ಣನಾಗಿ ಜಗತ್ತಿನ ಆಗೂಹೋಗು ಗಳನ್ನು ನಿರ್ಧರಿಸುವ ನಾಯಕನಾಗಿ ಮೆರೆದ ಅಮೇರಿಕಾ ವಿಶ್ವದ ಕೆಲವೊಂದು ಶ್ರೀಮಂತ ರಾಷ್ಟ್ರಗಳೊಂದಿಗೆ ಸೇರಿ ವಿಶ್ವಸಂಸ್ಥೆ, ನ್ಯಾಟೋ, ಐ.ಎಂ.ಎಫ್., ಡಬ್ಲ್ಯು.ಟಿ.ಓ. ರಕ್ಷಣಾ ವ್ಯವಸ್ಥೆ ಅದರಲ್ಲೂ ಮುಖ್ಯವಾಗಿ ವಿಶ್ವದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು, ಏರ್ಪಾಡುಗಳನ್ನು ತನಗೆ ತೋಚಿದ ರೀತಿಯಲ್ಲಿ ನಡೆಸುತ್ತಿರುವುದು, ಕಾರ್ಯಾಚರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಉತ್ಪಾದನೆಯ ಆರ್ಥಿಕ ದಕ್ಷತೆ ಹೆಚ್ಚಿಸಲು ಬೇಕಿದ್ದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿಶ್ವದ ಉತ್ಪಾದನಾ ಕೇಂದ್ರವಾಗಿ, ಜಾಗತಿಕವಾಗಿ ಮೆಲ್ಲನೆ ದಾಪುಗಾಲು ಇಡುತ್ತಿರುವ ನಮ್ಮ ಭಾರತಕ್ಕೆ ಕೊರೊನಾ ಪಿಡುಗಿನಿಂದಾಗಿ ಆರ್ಥಿಕ ಹೊಡೆತ ಬಿದ್ದಿದೆ. ಬಡತನ ರೇಖೆಗಿಂತ ಮೇಲೇರಿ ಬರುತ್ತಿರುವ ಭಾರತ ಯಾವ ರೀತಿಯಲ್ಲಿ ಇದರ ವಿರುದ್ಧ ಪುಟಿದೇಳುತ್ತದೆ ಎಂಬುದು ಸರಕಾರಗಳು ಕೈಗೊಳ್ಳುವ ಕ್ರಮಗಳಿಂದ ತಿಳಿಯಬೇಕಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲು ಕಾಣಿಸಿಕೊಂಡಿ ರುವ ಈ ವೈರಸ್ ಕ್ರಮೇಣ ವಿಶ್ವದ ಹಲವಾರು ದೇಶಗಳಿಗೆ ಹರಡಿತು. ಈ ಹೆಮ್ಮಾರಿ ವಿಶ್ವದ ಹಲವಾರು ದೇಶದ ಎಲ್ಲಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ವಿಶ್ವದಲ್ಲಿ ತಾನೇ ದೊಡ್ಡವನು, ನಾನು ದೊಡ್ಡವನಾಗಬೇಕು, ಜಗತ್ತಿನ ಅತ್ಯುತ್ತಮ ವ್ಯವಸ್ಥೆಯನ್ನೊಳಗೊಂಡ ರಾಷ್ಟ್ರ ನಮ್ಮದು, ನಾವು ಸಹ ಕಮ್ಮಿಯಿಲ್ಲ ಎಂದೆಲ್ಲಾ ಬೀಗುತ್ತಿದ್ದ ರಾಷ್ಟ್ರಗಳ ಬಾಯಿ ಮುಚ್ಚಿಸಿದೆ. ವಿಶ್ವಸಂಸ್ಥೆ ಅಂದಾಜಿಸಿದ ಜಾಗತಿಕ ಆದಾಯದಲ್ಲಿ ಕೋಟಿಗಟ್ಟಲೆ ನಷ್ಟ ಅನುಭವಿಸಲಿದ್ದು, ಇದರ ನೇರ ಪ್ರಮಾಣ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇರುತ್ತದೆ. ಜಾಗತಿಕ ಜನಸಂಖ್ಯೆಯ ಶೇ. 70 ರಷ್ಟು ಇರುವ ದೇಶಗಳಲ್ಲಿ ಹಬ್ಬಿರುವ ಈ ವೈರಸ್ ಮಹಾಮಾರಿ ಸರಕು ರಫ್ತು ಮಾಡುವ ರಾಷ್ಟ್ರಗಳ ವಿದೇಶಿ ಹೂಡಿಕೆಯಲ್ಲಿ ಮುಂದಿನ ವರ್ಷಗಳಲ್ಲಿ 2 ರಿಂದ 3 ಟ್ರಿಲಿಯನ್ ಡಾಲರ್ ನಷ್ಟವನ್ನು ತಂದೊಡ್ಡುತ್ತದೆ. ಭಾರತ, ಚೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸದ್ಯ ಸರಕಾರಿ ಪ್ಯಾಕೇಜ್‍ಗಳನ್ನು ಘೋಷಿಸಿ ಸದ್ಯದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತಿವೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚು ಸಮಸ್ಯೆ ಎದುರಿಸುವಂತೆ ಕಾಣುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಈ ಸಮಸ್ಯೆಯಿಂದ ತಪ್ಪಿಸಿಕೊಂಡರು ಇನ್ನು ಮುಂದುವರಿದರೆ ಭೀಕರ ಪರಿಣಾಮವನ್ನು ಎದುರಿಸಬೇಕಾಗಬಹುದು. ಇನ್ನು ನಮ್ಮ ಅರ್ಥ ವ್ಯವಸ್ಥೆಯನ್ನು ನೋಡುವುದಾದರೆ ನಮ್ಮಲ್ಲಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ನೋಡಬಹುದು. ನಮ್ಮಲ್ಲಿ ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಜಂಠಿ ವಲಯ ಅಸ್ತಿತ್ವದಲ್ಲಿ ಇವೆ. ಶೇ. 65ರಿಂದ ಶೇ. 68ರಷ್ಟು ಜನರು ಗ್ರಾಮಗಳಲ್ಲಿ ವಾಸಿಸುವವರಿದ್ದು ಅವರಲ್ಲಿ ಶೇ. 85 ರಷ್ಟು ಜನರು ಕೃಷಿಯ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಭಿತ ರಾಗಿದ್ದಾರೆ. ಇದು ನೇರವಾಗಿ ಪರಿಣಾಮ ಬೀರದಿದ್ದರೂ ಮೆಲ್ಲನೆ ಅರ್ಥ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ಈ ಹಿಂದಿನ ಆಟೋ ಮೊಬೈಲ್ ವಲಯದ ಬಿಕ್ಕಟ್ಟಿನ ಪರಿಣಾಮದಿಂದ ಹಾಗೂ ಇನ್ನಿತರ ಕೆಲವು ವಲಯಗಳಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆಯಿಂದ ನಿಧಾನವಾಗಿ ಮೇಲೇರಿಬರುವ ಸಂದರ್ಭದಲ್ಲಿ ಈ ಒಂದು ವೈರಸ್ ಪಿಡುಗು ಆರ್ಥಿಕ ಹಿಂಜರಿತವನ್ನು ತಂದೊಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆರ್ಥಿಕತೆಯ ನಾಡಿಮಿಡಿತ ವಾಗಿರುವ ಶೇರುಪೇಟೆಯಲ್ಲಿ ಜಾಗತಿಕವಾಗಿ ವಹಿವಾಟುಗಳು ಕುಸಿಯುತ್ತಿವೆ. ದಿನೇ-ದಿನೇ ಸೂಚ್ಯಾಂಕವು ಕುಸಿಯುತ್ತಿರುವುದ ರಿಂದ ಭೀತಿ ಉಂಟಾಗಿದೆ. ಸರಕು ಸೇವೆಗಳ ಬೇಡಿಕೆ, ಪ್ರವಾಸೋದ್ಯಮದ ಇಳಿಕೆ, ತೈಲಗಳ ಬೇಡಿಕೆ ಕಡಿಮೆಯಾಗಲಿದ್ದು, ಇದರಿಂದ ಹೂಡಿಕೆ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿಯ ಮೇಲೂ ಪರಿಣಾಮ ಬೀರಲಿದೆ. ಆದಷ್ಟು ಬೇಗ ಈ ವೈರಸ್ ಪಿಡುಗು ಹತೋಟಿಗೆ ಬರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ನಮ್ಮ ಸರಕಾರ ಗಳು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಪ್ರಗತಿ ದಾಖಲಿಸುವ ಭರವಸೆಯನ್ನು ಮೂಡಿಸಬೇಕಾಗಿದೆ.

- ಎಂ. ಎ. ಮಹಮ್ಮದ್ ಸಲೀಂ, ಎಡಪಾಲ.