ಕೇಂದ್ರ ಸರ್ಕಾರ ಘೋಷಿಸಿರುವ ಅವಧಿ ಸಾಲಗಳ ಮಾಸಿಕ ಕಂತು ಪಾವತಿ ಮುಂದೂಡಿಕೆ ನಿರ್ಧಾರದ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆ ಯಿಂದ ಇರುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಿದೆ.
ಇ.ಎಂ.ಐ. ಮುಂದೂಡಿಕೆ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಂದು ಬಾರಿಯ ರಹಸ್ಯ ಸಂಖ್ಯೆ (ಒ.ಟಿ.ಪಿ) ಹಂಚಿಕೊಳ್ಳುವಂತೆ ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ಈ ಕುರಿತು ಬ್ಯಾಂಕ್‍ಗಳಿಂದ ಎಸ್‍ಎಂಎಸ್ ಹಾಗೂ ಇಮೇಲ್ ಕಳುಹಿಸುವ ಮೂಲಕ ಗ್ರಾಹಕರಿಗೆ ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತಿವೆ. ಯಾವುದೇ ಕಾರಣಕ್ಕೂ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಓ.ಟಿ.ಪಿ., ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಸಿ.ವಿ.ವಿ., ಪಿನ್, ಆನ್‍ಲೈನ್ ಬ್ಯಾಂಕಿಂಗ್ ಪಾಸ್‍ವರ್ಡ್ ಅಥವಾ ಪಿನ್‍ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಸ್ಪಷ್ಟ ಸೂಚನೆ ನೀಡಿದೆ. ಅನಿರೀಕ್ಷಿತವಾಗಿ ಒಂದು ಕಾಲ್ ಬರುತ್ತದೆ. ಅದರಲ್ಲಿ ಹೀಗೆ ಹೇಳುತ್ತಾರೆ, ಸರ್ಕಾರದ ಕಡೆಯಿಂದ ಕೊರೊನಾ ಸೋಂಕಿತರಿಗಾಗಿ ಹಣ ನೀಡುತ್ತಿದ್ದೇವೆ, ಇಲ್ಲವೇ ಪ್ರಧಾನಮಂತ್ರಿಗಳ ಜನ್‍ಧನ್ ಖಾತೆಗೆ ಹಣ ಬರುತ್ತದೆ. ನಿಮಗೆ ಒಂದು ಓ.ಟಿ.ಪಿ. ಬರುತ್ತದೆ. ಆ ಓ.ಟಿ.ಪಿ. ನಮಗೆ ಹೇಳಿದ ತಕ್ಷಣ ನಿಮ್ಮ ಖಾತೆಗೆ ಹಣ ಜಮೆ ಆಗುತ್ತೆ ಎಂದು ವಂಚಿಸುವ ಸಾಧ್ಯತೆ ಇದೆ. ಓ.ಟಿ.ಪಿ.ಯನ್ನು ಕಾಲ್ ಮಾಡಿದವರಿಗೆ ನೀಡಿದರೆ, ಆಗ ನಿಮ್ಮ ಖಾತೆಯಲ್ಲಿ ರುವ ಹಣವೆಲ್ಲಾ ಅವರ ಖಾತೆಗಳಿಗೆ ವರ್ಗಾಯಿಸಲ್ಪಡುತ್ತದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಆರ್. ಕೆ. ಬಾಲಚಂದ್ರ ತಿಳಿಸಿದ್ದಾರೆ.