ಪ್ರತಿ ದಿನ 2.6 ಲಕ್ಷ ಊಟ ಪೂರೈಕೆ
ನವದೆಹಲಿ, ಏ. 23: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಪ್ರತಿ ದಿನ 2.6 ಲಕ್ಷ ಊಟವನ್ನು ಪೂರೈಕೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಈ ವ್ಯವಸ್ಥೆ ಅಗತ್ಯವಿರುವವರಿಗೆ ಲಭ್ಯವಾಗಲಿದ್ದು, ರೈಲ್ವೆಯ ಭಾಗವಾಗಿರುವ ಐಆರ್‍ಸಿಟಿಸಿ ಕೇಟರಿಂಗ್ ಸಿದ್ಧಪಡಿಸಿದ ಆಹಾರವನ್ನು 15 ರೂಪಾಯಿಗಳಿಗೆ ರಾಜ್ಯ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ಸೌಲಭ್ಯದ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಜೋನ್‍ಗಳ ಮಟ್ಟದಲ್ಲಿ ಲಭ್ಯವಿರುವ ವ್ಯವಸ್ಥೆ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ. ರಾಜ್ಯಗಳು ಹಣವನ್ನು ನಂತರ ಪಾವತಿ ಮಾಡಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ರೈಲ್ವೆ ಇಲಾಖೆಯ ಐಆರ್‍ಸಿಟಿಸಿ ಪಾಕಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ 2.6 ಲಕ್ಷ ಊಟ ಪೂರೈಕೆ ಮಾಡುವ ಯೋಜನೆ ಹೊಂದಲಾಗಿದೆ. ಅಗತ್ಯವಿದ್ದಲ್ಲಿ ಇದನ್ನು ಏರಿಕೆ ಮಾಡಲಾಗುವುದು ಎಂದು ರೈಲ್ವೆ ಹೇಳಿದೆ. ಅಗತ್ಯವಿರುವವರಿಗೆ ರೈಲ್ವೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದು, ತಾ. 21 ರಂದು ಇದು 20 ಲಕ್ಷಕ್ಕೆ ತಲುಪಿದೆ.
ಗುತ್ತಿಗೆ ವೈದ್ಯರ ಸಂಬಳ ಹೆಚ್ಚಳ
ಬೆಂಗಳೂರು, ಏ. 23: ಕೋವಿಡ್‍ಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಸ್‍ಆರ್‍ಟಿಸಿ ನೂರಾರು ಕೋಟಿ ನಷ್ಟದಲ್ಲಿದೆ. ಹೀಗಾಗಿ ಬಸ್‍ಗಳನ್ನು ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯಗಳಿಸಲು ಖಾಸಗಿ ಕಂಪೆನಿಗಳಿಗೆ ಬಸ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಯಿತು. ಕೋವಿಡ್-19 ರ ನಂತರ ಅಭಿವೃದ್ಧಿ ಕುಂಠಿತಗೊಂಡಿರುವ ಹಿನ್ನೆಲೆ ಆಡಳಿತ ಯಂತ್ರ ಚುರುಕುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು. ರೈತರು ಬೆಳೆದ ತರಕಾರಿಗಳು ಕೋವಿಡ್‍ನಿಂದಾಗಿ ಬೆಲೆಕಳೆದುಕೊಂಡಿದ್ದು ಅದನ್ನು ಸರ್ಕಾರವೇ ಕೊಂಡುಕೊಂಡು ಕೋಲ್ಡ್ ಸ್ಟೋರೇಜ್‍ನಲ್ಲಿ ಇಟ್ಟು ತದನಂತರ ಮಾರಾಟ ಮಾಡುವಂತೆ ಸೂಚಿಸಲಾಯಿತು.
ಪ್ರಧಾನಿಯನ್ನು ಕೊಂಡಾಡಿದ ಶಾ
ನವದೆಹಲಿ, ಏ. 23: ಕೊರೋನಾ ವೈರಸನ್ನು ಸಮರ್ಥವಾಗಿ ನಿಭಾಯಿಸಿದ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೋದಿಯವರನ್ನು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶ ಸಮರ್ಥ ನಾಯಕತ್ವದಡಿಯಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಈ ಸಮೀಕ್ಷಾ ವರದಿಯೇ ಸಾಕ್ಷಿ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವ ನಾಯಕರ ಪಟ್ಟಿಯನ್ನು ಅಮೇರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನ ಪಡೆದಿದ್ದರು. ಈ ಸಂತಸದ ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದರು. ಈ ಸಮೀಕ್ಷಾ ವರದಿಯನ್ನು ಆಧರಿಸಿ ಅಮಿತ್ ಶಾ ಅವರು ಇದೀಗ ಮೋದಿಯವರ ನಾಯಕತ್ವವನ್ನು ಕೊಂಡಾಡಿದ್ದಾರೆ.
ಶುಲ್ಕ ಕಟ್ಟಲು ಒತ್ತಡ ಹೇರಿದರೆ ಕ್ರಮ
ಬೆಂಗಳೂರು, ಏ. 23: ಲಾಕ್‍ಡೌನ್ ಸಂದರ್ಭದಲ್ಲಿ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮಕ್ಕೆ ಮುಂದಾಗಲು ಆಯುಕ್ತರಿಗೆ ನಿರ್ದೇಶನವನ್ನು ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡಲು ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಮಾಡಿರುವ ಮನವಿಯನ್ನು ಸುರೇಶ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಂಕರಮೂರ್ತಿಗೆ ಕರೆ ಮಾಡಿದ ಪ್ರಧಾನಿ
ಶಿವಮೊಗ್ಗ, ಏ. 23: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, ಇದಕ್ಕೆ ಶಂಕರಮೂರ್ತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ 8.40ರ ಸಮಯದಲ್ಲಿ ಮನೆಯಲ್ಲಿ ಪತ್ರಿಕೆ ಓದುತ್ತಿದ್ದೆ. ಈ ವೇಳೆ ನನ್ನ ಮೊಬೈಲ್‍ಗೆ ಒಂದು ದೂರವಾಣಿ ಕರೆ ಬಂತು. ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು ಡಿ.ಹೆಚ್. ಶಂಕರಮೂರ್ತಿ ಅವರಿಗೆ ಫೋನ್ ಕೊಡಿ ಅಂದರು. ನಾನು ನಾನೇ ಶಂಕರಮೂರ್ತಿ ಮಾತನಾಡುತ್ತಿದ್ದೇನೆ ಎಂದಾಗ ಪ್ರಧಾನಮಂತ್ರಿ ಅವರ ಕಚೇರಿಯಿಂದ ಮಾತನಾಡುತ್ತಿದ್ದೇನೆ. ಪ್ರಧಾನಿಯವರು ತಮ್ಮ ಜೊತೆ ಮಾತನಾಡಬೇಕಂತೆ. ಇನ್ನು ಐದು ನಿಮಿಷದಲ್ಲಿ ಕರೆ ಬರಬಹುದು ತಮ್ಮ ಮೊಬೈಲ್ ಬ್ಯುಸಿ ಇಟ್ಟುಕೊಳ್ಳಬೇಡಿ ಎಂದಾಗ ಎಲ್ಲಿಲ್ಲದ ಸಂತಸವಾಯಿತೆಂದು ಶಂಕರಮೂರ್ತಿ ಹೇಳಿದ್ದಾರೆ.
34 ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು
ಭೋಪಾಲ್, ಏ. 23: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‍ದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 34 ಪೊಲೀಸ್ ಸಿಬ್ಬಂದಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದಕ್ಕೆ ತಬ್ಲಿಘಿ ಜಮಾಅತ್ ಕಾರ್ಯಕ್ರಮವೇ ಕಾರಣ ಎಂದು ಅಧಿಕಾರಿಗಳು ದೂರಿದ್ದಾರೆ. ಇಂದು ಸೈಬರ್ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಇದುವರೆಗೆ ಅಧಿಕಾರಿಗಳು ಸೇರಿದಂತೆ 34 ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಭೋಪಾಲ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಉಪೇಂದ್ರ ಜೈನ್ ತಿಳಿಸಿದ್ದಾರೆ. ವೈರಸ್ ಹರಡದಂತೆ ತಡೆಯವುದಕ್ಕಾಗಿ ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿಡಲು ನಗರದ ಸುಮಾರು 2,100 ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಮುಗಿದ ನಂತರವೂ ಮನೆಗೆ ತೆರಳುತ್ತಿಲ್ಲ. ಈ ಎಲ್ಲಾ ಸಿಬ್ಬಂದಿ ಹೊಟೇಲ್‍ನಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಟ್ಟಿಭತ್ಯೆ ಪ್ರಸ್ತಾಪ ಕೈಬಿಟ್ಟ ಸರ್ಕಾರ
ನವದೆಹಲಿ, ಏ. 23: ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ತೆರಿಗೆ ಸಂಗ್ರಹಕ್ಕೆ ಸಮಸ್ಯೆಯಾಗಿರುವ ಹಿನ್ನೆಲೆ ಕೇಂದ್ರ ನೌಕರರ ಹೆಚ್ಚುವರಿ ತುಟ್ಟಿಭತ್ಯೆ (ಡಿಎ-ಡಿಆರ್) ಹೆಚ್ಚಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 12 ರಿಂದ 17ಕ್ಕೆ ಹೆಚ್ಚಿಸಬೇಕೆಂದು ತಾನು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ತಡೆಹಿಡಿಯಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರದ ಈ ಕ್ರಮವು ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ಹೆಚ್ಚುವರಿ ಭತ್ಯೆ ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಂದಾಯವಾಗುವ ಡಿಎಗಳನ್ನು 2020 ರ ಜನವರಿ 1ರಿಂದ ಅನ್ವಯಿಸುವಂತೆ ಪಾವತಿಸಲು ಸಾಧ್ಯವಿಲ್ಲ ಸರ್ಕಾರಿ ಹೇಳಿಕೆಯಲ್ಲಿ ಹೇಳಿದೆ.
ತುರ್ತು ಸಾಲ ಪಡೆದುಕೊಂಡ ಪಾಕ್
ಇಸ್ಲಾಮಾಬಾದ್, ಏ. 23: ಆರ್ಥಿಕ ದಿವಾಳಿತನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ 1.39 ಬಿಲಿಯನ್ ಡಾಲರ್ ನಷ್ಟು ತುರ್ತು ಸಾಲವನ್ನು ಪಡೆದುಕೊಂಡಿದೆ. ಆದಾಯ ಅಸಮತೋಲನ ಸಮಸ್ಯೆಯಿಂದಾಗಿ 6 ಬಿಲಿಯನ್ ಡಾಲರ್ ಆರ್ಥಿಕ ನೆರವಿಗಾಗಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಹಿ ಹಾಕಿದ ಪಾಕಿಸ್ತಾನ ಇದೀಗ ಹೆಚ್ಚುವರಿಯಾಗಿ 1.39 ಬಿಲಿಯನ್ ನಷ್ಟು ಸಾಲವನ್ನು ಪಡೆದುಕೊಂಡಿದೆ. ಕ್ಷಿಪ್ರ ಹಣಕಾಸು ಸಾಧನ- ಆರ್‍ಪಿಐ ಅಡಿಯಲ್ಲಿ ಐಎಂಎಫ್‍ನಿಂದ 1.39 ಬಿಲಿಯನ್ ಡಾಲರ್‍ನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಪಡೆದುಕೊಂಡಿರುವುದಾಗಿ ಸೆಂಟ್ರಲ್ ಬ್ಯಾಂಕ್ ಟ್ವೀಟ್ ಮಾಡಿದೆ.