ಮಡಿಕೇರಿ, ಏ. 22 : ಕೊರೊನಾ ಸಾಂಕ್ರಮಿಕ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ದಾನಿಗಳ ಸಹಯೋಗ ದೊಂದಿಗೆ ಸೇವಾ ಭಾರತಿ ಮೂಲಕ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.

ಕೊರೇನಾ ಸಾಂಕ್ರಮಿಕ ಸೋಂಕಿನ ಹಿನ್ನೆಲೆಯಲ್ಲಿ ಆಟೋ ಚಾಲನೆಯ ವೃತ್ತಿಯನ್ನು ಮಾಡುತ್ತಿದ್ದ ಚಾಲಕರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ವನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ದಾನಿಗಳಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಮನೋಹರ್ ಜಿ. ಪಾಟ್ಕರ್, ಆರ್ಥಿಕ ಲೆಕ್ಕಪತ್ರ ಪರಿಶೋಧಕ ಅನಂತಸುಬ್ಬ ರಾವ್ ಹಾಗೂ ಹೆಸರು ಹೇಳಲಿಚ್ಛಿಸದ ಇನ್ನಿಬ್ಬರು ದಾನಿಗಳ ಸಹಯೋಗ ದೊಂದಿಗೆ ಮಡಿಕೇರಿ ನಗರದ ಸುಮಾರು 40 ಆಟೋ ಚಾಲಕರಿಗೆ ತಲಾ ರೂ 1000 ದಂತೆ ನಗದು ಹಣವನ್ನು ವಿತರಿಸಲಾಯಿತು. ನಗರದ ಶ್ರೀವಳ್ಳಿ ಕ್ಲಿನಿಕ್‍ನಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅವರು ಆಟೋ ಚಾಲಕರಿಗೆ ನಗದು ಆರ್ಥಿಕ ಸಹಾಯವನ್ನು ವಿತರಿಸಿದರು. ಈ ಸಂದರ್ಭ ದಾನಿಗಳಾದ ಡಾ. ಮನೋಹರ್ ಜಿ ಪಾಟ್ಕರ್, ಡಾ.ಜಯಲಕ್ಷ್ಮಿ ಜಿ ಪಾಟ್ಕರ್, ಲೆಕ್ಕಪತ್ರ ಪರಿಶೋಧಕ ಅನಂತಸುಬ್ಬರಾವ್, ಸೇವಾ ಭಾರತಿ ಉಪಾಧ್ಯಕ್ಷ ಕೆ.ಕೆ ಮಹೇಶ್ ಕುಮಾರ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್ ಮೇದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

‘ಶಕ್ತಿ’ಯಲ್ಲಿ ಪ್ರಕಟಗೊಳ್ಳುತ್ತಿರುವ ಹಿರಿಯ ಪತ್ರಕರ್ತ ಎಚ್.ಟಿ. ಅನಿಲ್ ಅವರ ‘ಲಾಕ್‍ಡೌನ್ ಡೇ’ಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸ್ಥಿತಿಯ ಬಗ್ಗೆ ಅಂಕಣ ಪ್ರಕಟಗೊಂಡಿತ್ತು. ಇದನ್ನು ಓದಿದ್ದ ದಾನಿಗಳು ನೆರವಿಗೆ ಧಾವಿಸಿದ್ದರು.