ಮಡಿಕೇರಿ, ಏ. 22: ಜಿಲ್ಲೆಯಲ್ಲಿರುವ ವಯೋವೃದ್ಧರು, ದುರ್ಬಲರ ಆರೋಗ್ಯದ ಬಗ್ಗೆ ಮತ್ತು ಅವರ ರಕ್ಷಣೆ ಬಗ್ಗೆ ಮತ್ತು ಕೋವಿಡ್-19 ರ ಹರಡುವಿಕೆಯಿಂದ ಈ ವರ್ಗದ ಜನರ ಮೇಲೆ ಆಗುವ ದುಷ್ಪರಿಣಾಮವನ್ನು ತಡೆಗಟ್ಟುವ ಉದ್ಧೇಶದಿಂದ ಯೋಜನೆಯನ್ನು ರೂಪಿಸಲು ಜಿಲ್ಲೆಯಲ್ಲಿರುವ ವಯೋವೃದ್ಧರ ಮತ್ತು ದುರ್ಬಲ ವರ್ಗದವರ ಮಾಹಿತಿಯನ್ನು ಕ್ರೋಢೀಕರಿಸಲು ಜಿಲ್ಲಾಡಳಿತ ಸಮೀಕ್ಷೆ ಆರಂಭಿಸಿದೆ.

ಈ ಸಂಬಂಧ ಈಗಾಗಲೇ ನೇಮಿಸಲಾಗಿರುವ ಹೋಬಳಿವಾರು ನೋಡಲ್ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆಗಳಿಗೆ ತೆರಳಿ ಈಗಾಗಲೇ ನೀಡಲಾಗಿರುವ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕ್ರೋಢೀಕರಿಸುತ್ತಿದ್ದಾರೆ. ಇದರೊಂದಿಗೆ ವಯೋವೃದ್ಧರ ಮತ್ತು ದುರ್ಬಲರ ಆರೈಕೆ, ಔಷಧೋಪಚಾರ ಇತ್ಯಾದಿಗಳ ಬಗ್ಗೆ ಕುಟುಂಬ ಸದಸ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಜೊತೆಗೆ ವಯೋವೃದ್ಧರು-ದುರ್ಬಲರು ಒಬ್ಬರೇ ಇರುವಂತಹ ಪ್ರಕರಣಗಳಲ್ಲಿ ಸ್ಥಳೀಯ ಪಂಚಾಯತಿಯಿಂದ ಸಹಕಾರ ನೀಡಲಾಗುತ್ತಿದ್ದು, ಅವರ ತಕ್ಷಣದ ಸಂಪರ್ಕಕ್ಕಾಗಿ ಹತ್ತಿರದ ಅಥವಾ ನೆರೆಹೊರೆಯವರ ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ಪಡೆಯಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಲು ಜಿಲ್ಲಾಡಳಿತ ಕೋರಿದೆ.