ಮಡಿಕೇರಿ, ಏ. 22 : ಕೋವಿಡ್-19 ನಿಗ್ರಹ ಸಂಬಂಧ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಸಮಯದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ಅಗತ್ಯ ನಿರ್ದೇಶನ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಸದ್ಯ ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಮೀಪಿಸುತ್ತಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ಮೂಲಭೂತ ಸೌಕರ್ಯಗಳ ನಿರ್ಮಾಣ, ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಂಡು ಪೂರ್ಣ ಗೊಳಿಸಬೇಕಾದ ಅನಿವಾರ್ಯತೆ ಇರುವ ಕಾರಣ ಜಿಲ್ಲೆಯ ಹಲವು ನಾಗರಿಕರು ಈ ಬಗ್ಗೆ ಅನುಮತಿ ನೀಡಲು ಕೋರುತ್ತಿದ್ದಾರೆ.

ಸರ್ಕಾರದ ತಾ. 22 ರ ಸುತ್ತೋಲೆಯಲ್ಲಿ ತಾ. 23 ರ ಸಮಯ 00:00 ರಿಂದ ಅನ್ವಯಿಸುವಂತೆ ಲಾಕ್ ಡೌನ್ ಅವಧಿಯಲ್ಲಿ ಕೈಗೆತ್ತಿಕೊಳ್ಳ ಬಹುದಾದ ಕಾಮಗಾರಿಗಳ ಕುರಿತು ಕೆಲವು ವಿನಾಯಿತಿಗಳನ್ನು ನೀಡಿದೆ. ಸರ್ಕಾರದ ಆದೇಶ ಮತ್ತು ಜಿಲ್ಲೆಯ ನಾಗರಿಕರ ಕೋರಿಕೆಯಂತೆ ಹಾಲಿ ಸ್ಥಗಿತಗೊಂಡಿರುವ ನಿರ್ಮಾಣ, ದುರಸ್ತಿ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ತಾ. 23 ರಿಂದ ಅನ್ವಯಿಸುವಂತೆ ಷರತ್ತುಬದ್ದವಾಗಿ ಅವಕಾಶ ಕಲ್ಪಿಸಲಾಗಿದೆ.

ತಡೆಗೋಡೆ, ಸೇತುವೆ, ರಸ್ತೆ ಕಾಮಗಾರಿಗಳು, ನೀರಾವರಿ ಯೋಜನೆಗಳು, ಕಟ್ಟಡ ಸೇರಿದಂತೆ ಎಲ್ಲಾ ವಾಣಿಜ್ಯ ಯೋಜನೆಗಳು, ಈ ಕಾರ್ಯಗಳಿಗೆ ಸ್ಥಳೀಯವಾಗಿ ಲಭ್ಯರಿರುವ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ.

ಮುಂದಿನ ಆದೇಶದವರೆಗೆ ಹೊರ ಜಿಲ್ಲೆ, ರಾಜ್ಯದಿಂದ ಕಾರ್ಮಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ, ಕಾರ್ಮಿಕರಿಗೆ ಕಾಮಗಾರಿ ನಡೆಸುವ ಸ್ಥಳದ ಆಸುಪಾಸಿನಲ್ಲಿಯೇ ವಸತಿ ಸೌಕರ್ಯವನ್ನು ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಕಲ್ಪಿಸುವಂತೆ ಸೂಚಿಸಲಾಗಿದೆ.

ಜೊತೆಗೆ ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ಆಹಾರ, ಹ್ಯಾಂಡ್ ಸ್ಯಾನಿಟೈಸರ್, ಸೋಪು ಮತ್ತಿತರ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸುವುದು, ಅನುಷ್ಠಾನಾಧಿಕಾರಿ ಗುತ್ತಿಗೆದಾರರು, ಕಾರ್ಮಿಕರು ಕೆಲಸದ ವೇಳೆ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಕಾಮಗಾರಿ ಪ್ರದೇಶ ಸ್ಥಳದ ಹೊರತಾಗಿ ವಿನಾ ಕಾರಣ ಹೊರ ಪ್ರದೇಶದಲ್ಲಿ ತಿರುಗಾಡಬಾರದು. ಒಂದೇ ಕಡೆ ಜಮಾವಣೆಗೊಳ್ಳುವುದು ಅಥವಾ ಗುಂಪುಗೂಡುವುದು ಮಾಡಬಾರದು. ಯಾವುದೇ ರೀತಿಯಲ್ಲಿ ಅಸ್ವಸ್ಥತೆ ಇರುವ ಬಗ್ಗೆ ಕಂಡುಬಂದಲ್ಲಿ ಅಥವಾ ಸಂಶಯವಿದ್ದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಾರ್ಮಿಕರನ್ನು ಕರೆದೊಯ್ಯುವುದು, ಕಾಮಗಾರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಮೆಡಿಕಲ್ ಸ್ಕ್ರೀನಿಂಗ್ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕಾಮಗಾರಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಸಾಗಾಣಿಕೆಗೆ ಜಿಲ್ಲೆಯೊಳಗೆ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ಪಡೆಯುವ ಅಗತ್ಯತೆ ಇರುವುದಿಲ್ಲ. ಆದಾಗ್ಯೂ ಚಾಲಕ ಮತ್ತು ಒಬ್ಬ ಸಹಾಯಕರಿಗೆ (ಒಟ್ಟು ಇಬ್ಬರು ಮಾತ್ರ) ಸಂಚಾರಕ್ಕೆ ಅವಕಾಶ, ಕಾಮಗಾರಿ ನಡೆಸುವ ಸ್ಥಳದಲ್ಲಿ ಶುಚಿತ್ವ, ನೈರ್ಮಲ್ಯ ಕಾಪಾಡುವುದು ಮತ್ತು ಸೋಂಕು ನಿವಾರಕಗಳ ಸಿಂಪಡಣೆ ಯನ್ನು ಮಾಡುವುದು, ಮತ್ತಿತರ ಅಂಶಗಳ ಪಾಲನೆ (ಮೊದಲ ಪುಟದಿಂದ) ಮಾಡುವುದು ಸಂಬಂಧಪಟ್ಟ ಕಾಮಗಾರಿ ನಿರ್ವಹಿಸುವ ಮತ್ತು ನಡೆಸುತ್ತಿರುವ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಈ ಅವಕಾಶವನ್ನು ಜಿಲ್ಲೆಯ ಸಾರ್ವಜನಿಕ ಹಿತಾಸಕ್ತಿಯಿಂದ ಕಲ್ಪಿಸಲಾಗಿದ್ದು, ಉಲ್ಲಂಘನೆಯಾದಲ್ಲಿ ಅಥವಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಅನಾರೋಗ್ಯ ಪರಿಸ್ಥಿತಿ ಉಂಟಾದಲ್ಲಿ ಸಂಬಂಧಪಟ್ಟ ಅನುಷ್ಠಾನಾಧಿಕಾರಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.