ಮಡಿಕೇರಿ, ಏ. 22: ಜಿಲ್ಲೆಯಲ್ಲಿ ಲಾಕ್‍ಡೌನ್‍ನ ನಿರ್ಬಂಧ ಹಾಗೂ ಇದನ್ನು ಉಲ್ಲಂಘನೆ ಮಾಡುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ಚಿಂತನೆ ಯಂತೆ ಇದಕ್ಕೆ ಡ್ರೋನ್ ಕ್ಯಾಮರಾದ ಕಣ್ಗಾವಲಿನೊಂದಿಗೆ ಉಲ್ಲಂಘನೆಯ ವಿರುದ್ಧ ಕ್ರಮಕ್ಕೆ ಮುಂದಾಗಲಾಗುತ್ತಿದೆ.

ಅನವಶ್ಯಕವಾಗಿ ವಾಹನಗಳಲ್ಲಿ ಓಡಾಟ ನಡೆಸುವದು, ಅಲ್ಲಲ್ಲಿ ಗುಂಪು ಸೇರಿ ಆಟವಾಡುವದು, ಅಂಗಡಿ - ಮುಂಗಟ್ಟುಗಳ ಎದುರು, ಮಾರುಕಟ್ಟೆಗಳಲ್ಲಿ, ರಸ್ತೆಗಳಲ್ಲಿ ನಿರ್ಬಂಧ ಸಡಿಲಿಕೆಯ ದಿನಗಳಂದು ಜನಜಂಗುಳಿಯನ್ನು ಗಮನಿಸಿ ಈ ಬಗ್ಗೆ ಸೂಚನೆ ನೀಡುವದರೊಂದಿಗೆ ಕ್ರಮ ಜರುಗಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲಾದ್ಯಂತ ಈ ವ್ಯವಸ್ಥೆ ಮಾಡ ಲಾಗುತ್ತಿದೆ. ಇಂದು ಮಡಿಕೇರಿಯ ಚೌಕಿ ವೃತ್ತದಲ್ಲಿ ಇದಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಜರಿದ್ದರು. ಈ ಕುರಿತು ಎಸ್‍ಪಿ ಅವರು ಅಗತ್ಯ ಸೂಚನೆ ನೀಡಿರು ವದಾಗಿ ಅನೂಪ್ ತಿಳಿಸಿದ್ದಾರೆ.ಕುಶಾಲನಗರ : ಲಾಕ್‍ಡೌನ್ ನಿಯಮ ಉಲ್ಲಂಘಿಸುವ ಬಗ್ಗೆ ಕ್ಷಣ ಕ್ಷಣದಲ್ಲಿ ಗಮನಿಸಲು ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಪೊಲೀಸರು ಡ್ರೋನ್ ಕ್ಯಾಮರದ ಮೊರೆ ಹೋಗಿದ್ದಾರೆ. ಕೆಲವೆಡೆ ಅನಾವಶ್ಯಕ ವಾಹನಗಳ ಸಂಚಾರ ಮತ್ತು ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಓಡಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸುವ ಮೂಲಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಈ ಮೂಲಕ ಸಾಧ್ಯ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.