ಮಡಿಕೇರಿ, ಏ. 22: ದಕ್ಷಿಣ ಕೊಡಗಿನ ಗಿರಿಜನ ಹಾಡಿಗಳು ಸೇರಿದಂತೆ ಬಡ ಕಾರ್ಮಿಕ ಕುಟುಂಬಗಳು ಮತ್ತು ವಲಸೆ ತೋಟ ಕಾರ್ಮಿಕರಿಗೆ ಆಹಾರ ಕೊರತೆ ಉಂಟಾಗದಂತೆ ತಕ್ಷಣದಿಂದ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ವೀರಾಜಪೇಟೆ ತಹಶೀಲ್ದಾರ್ ನಂದೀಶ್ ಅವರಿಗೆ ಆದೇಶಿಸಿದ್ದಾರೆ. ಜಿ.ಪಂ. ಸದಸ್ಯರು ಸೇರಿದಂತೆ ಜನತೆಯ ದೂರು ಸಂಬಂಧ ಅವರು ಇಂದು ಖುದ್ದಾಗಿ ತಿತಿಮತಿ ಇನ್ನಿತರೆಡೆಗಳಲ್ಲಿ ಖುದ್ದು ಭೇಟಿ ನೀಡಿ ಮಾಹಿತಿ ಪಡೆದರು.ಈಗಿನ ಪರಿಸ್ಥಿತಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಬಡವರು ಮತ್ತು ಸಾಮಾನ್ಯ ವರ್ಗದ ಕಷ್ಟದಲ್ಲಿರುವ ಕುಟುಂಬಗಳಿಗೆ ಸರಕಾರ ಆಹಾರ ಪೂರೈಸಲು ಕ್ರಮಕೈಗೊಂಡಿರುವ ಬಗ್ಗೆ ಅವರು; ತಹಶೀಲ್ದಾರ್ ನಂದೀಶ್ ಅವರಿಗೆ ನೆನಪಿಸಿದರು. ಆಹಾರ ಕಿಟ್ ಪೂರೈಕೆಯಲ್ಲಿ ಗೊಂದಲ ಸರಿಪಡಿಸಿ; ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಗಳಿಂದ ತ್ವರಿತವಾಗಿ ಬಡವರಿಗೆ ತಲಪಿಸಲು ಗಮನ ಹರಿಸಬೇಕೆಂದು ತಿಳಿಸಿದರು. ಕೊರೊನಾ ಸೋಂಕು ಹರಡದಂತೆ ಭಾರತ ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಡಿಯುವ ವರ್ಗವನ್ನು ಮನೆಗಳಲ್ಲಿ ಕೂಡಿ ಹಾಕಿರುವ ವೇಳೆ; ಸರಿಯಾಗಿ ಆಹಾರ ಕೊರತೆ ಯಾಗದಂತೆ ನೋಡಿಕೊಳ್ಳುವದು, ಆಯಾ ಇಲಾಖೆಗಳ ಕರ್ತವ್ಯವೆಂದು ಸುನಿಲ್ ನೆನಪಿಸಿದರು. ಈ ಬಗ್ಗೆ ಸೂಕ್ತ ವ್ಯವಸ್ಥೆಗೆ ಒತ್ತು ನೀಡಲಾಗುವದು ಎಂದು ತಹಶೀಲ್ದಾರ್ ನಂದೀಶ್ ಭರವಸೆ ನೀಡಿದರು.

ಅಲ್ಲದೆ ಮಾಕುಟ್ಟ, ಕುಟ್ಟ, ಆನೆಚೌಕೂರುವಿನಂತಹ ಪ್ರಮುಖ ಗಡಿ ಚೆಕ್‍ಪೋಸ್ಟ್‍ಗಳು ವೀರಾಜಪೇಟೆ ಪೊಲೀಸ್ ಉಪ ವಿಭಾಗದಲ್ಲಿದ್ದು; ಯಾವದೇ ದೂರುಗಳು ಬಾರದಂತೆ ಕಟ್ಟುನಿಟ್ಟಿನ ಕ್ರಮ ಅವಶ್ಯಕವೆಂದು ಅವರು ಡಿವೈಎಸ್‍ಪಿ ಜಯಕುಮಾರ್ ಅವರ ಗಮನ ಸೆಳೆದರು.

ಗೇಟ್‍ನಲ್ಲಿ ಪರಿಶೀಲನೆ : ಕೊಡಗು - ಮೈಸೂರು ಗಡಿಭಾಗದ ಆನೆಚೌಕೂರು ಗೇಟ್‍ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು; ಕರ್ತವ್ಯ ನಿರತ ಪ್ರೊಬೆಷನರಿ ಪೊಲೀಸ್ ಉಪ ನಿರೀಕ್ಷಕ ಅಭಿಷೇಕ್ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸ್, ಆರೋಗ್ಯ ಸಿಬ್ಬಂದಿ, ಕಂದಾಯ ಸಿಬ್ಬಂದಿ, ಗ್ರಾ.ಪಂ. ಹಾಗೂ ಆಶಾ ಕಾರ್ಯಕರ್ತೆಯರು ಆತ್ಮವಿಶ್ವಾಸದಿಂದ ತಮ್ಮ ಪಾಲಿನ

(ಮೊದಲ ಪುಟದಿಂದ) ಕರ್ತವ್ಯವನ್ನು ನಿರ್ವಹಿಸಬೇಕೆಂದು ತಿಳಿಹೇಳಿದರು. ಮೇಲ್ಮನೆ ಸದಸ್ಯರೊಂದಿಗೆ ‘ಮೂಡಾ’ ಮಾಜಿ ಅಧ್ಯಕ್ಷ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು. ಆ ಮುನ್ನ ವೀರಾಜಪೇಟೆ ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್ ಹಾಗೂ ಡಿವೈಎಸ್‍ಪಿ ಜೊತೆಯಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ವೇಳೆ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಉಪಸ್ಥಿತರಿದ್ದರು.