ಮಡಿಕೇರಿ: ಎಸ್.ಬಿ.ಐ. ವತಿಯಿಂದ ನಗರದ ಕದಂಬ ಲಾಡ್ಜ್ನಲ್ಲಿ ತಂಗಿರುವ ಉತ್ತರಪ್ರದೇಶದ 8 ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು. ಇನ್ನಿತರ 4 ವಲಸೆ ಕಾರ್ಮಿಕ ಕುಟುಂಬದವರಿಗೂ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಲಾಡ್ಜ್ ಮಾಲೀಕ ಎನ್.ಎಸ್. ಬಿದ್ದಪ್ಪ ಹಾಜರಿದ್ದರು. ಮೂರ್ನಾಡು ಗ್ರಾ.ಪಂ.ನಿಂದ ಗುರುತಿಸಲ್ಪಟ್ಟ 9 ವಲಸೆ ಕಾರ್ಮಿಕ ಕುಟುಂಬಗಳಿಗೂ ಎಸ್.ಬಿ.ಐ.ನಿಂದ ಆಹಾರ ಕಿಟ್ ವಿತರಿಸಲಾಯಿತು. ಮೂರ್ನಾಡು ಗ್ರಾ.ಪಂ. ಸದಸ್ಯರುಗಳು, ಮಡಿಕೇರಿ ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ದಿನೇಶ್ ಪೈ ಹಾಗೂ ಬ್ಯಾಂಕಿನ ಅಮಿತ್ ಕುಮಾರ್, ವಿ. ಶ್ರೀವತ್ಸ, ಚಂದ್ರಶೇಖರ್ ಎಫ್.ಎ. ಹಾಜರಿದ್ದರು.ಕಡಗದಾಳು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಸರಕಾರದ ಆದೇಶದಂತೆ ಅಕ್ಷರ ದಾಸೋಹ ಆಹಾರವನ್ನು ವಿತರಿಸಲು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಒಂದನೇ ಹಂತದಲ್ಲಿ ಶೇ. 60 ರಷ್ಟು ಪೋಷಕರಿಗೆ ಆಹಾರ ವಿತರಣೆ ಮಾಡಿದರು. ಎರಡನೇ ಹಂತದಲ್ಲಿ ಕೆಲವು ಮಕ್ಕಳು ಶಾಲೆಯಿಂದ 6 ಕಿಲೋ ಮೀಟರ್ ನಡೆದುಕೊಂಡು ಬಂದು ಬಸ್ ಇಳಿದು 3 ಕಿಲೋ ಮೀಟರ್ ನಡೆದುಕೊಂಡು ಬರುವ ಮಕ್ಕಳ ಪೋಷಕರು ಕೊರೊನಾ ಭಯ ಹಾಗೂ ದೂರದಿಂದ ಬರುವುದರಿಂದ ಆಹಾರವನ್ನು ಪಡೆಯಲು ನಿರಾಕರಿ ಸಿದರು. ಈ ಸಂದರ್ಭ ಶಿಕ್ಷಕಿ ಕೆ.ಎಂ. ವಿಮಲ ಅವರು ಆ ಪೋಷಕರನ್ನು ಮನವೊಲಿಸಿ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬರಹೇಳಿ ಸಮಯವನ್ನು ನಿಗದಿಪಡಿಸಿ ಶಾಲೆಯಿಂದಲೇ ಬಟ್ಟೆಯ ಚೀಲದಲ್ಲಿ ಆಹಾರವನ್ನು ಕಾರಲ್ಲಿ ತುಂಬಿ ಪೋಷಕರಿಗೆ ಆಹಾರವನ್ನು ವಿತರಿಸಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಈ ಶಿಕ್ಷಕಿ ಶಾಲೆಯಲ್ಲಿ ಸೇವಾದಳದ ತಂಡವನ್ನು ರಚಿಸಿ ಬಡಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಶಿಕ್ಷಕಿ ಮಾಜಿ ಸೈನಿಕರಾದ ಅವರ ಪತಿಯವರು ಪ್ರೋತ್ಸಾಹ ನೀಡುತ್ತಿದ್ದಾರೆ. ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯ ಶಿಕ್ಷಕಿ ವೈ.ಎ. ತಂಗಮ್ಮ ಶಿಕ್ಷಕಿಯ ಈ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಗೋಣಿಕೊಪ್ಪಲು: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ವೀರಾಜಪೇಟೆ ತಾಲೂಕು ಬಿಜೆಪಿ ಘಟಕವು ಗೋಣಿಕೊಪ್ಪ ನಗರದಲ್ಲಿ ವಾಸ ಮಾಡುವ ಕಡುಬಡವರಿಗೆ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ವಿತರಿಸಿದರು.
ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ನೆಲ್ಲಿರ ಚಲನ್, ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೂರಾರು ಆಹಾರ ಕಿಟ್ ವಿತರಿಸಿದರು. ಈ ಸಂದರ್ಭ ಬಿಜೆಪಿ ಪಕ್ಷದ ಮುಖಂಡರಾದ ಕುಞಂಗಡ ಅರುಣ್ ಭೀಮಯ್ಯ, ಕಾಡ್ಯಮಾಡ ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಆರ್ಎಂಸಿಯ ಅಧ್ಯಕ್ಷ ಸುಜಾ ಪೂಣಚ್ಚ, ಉಪಾಧ್ಯಕ್ಷ ಸುಬ್ರಮಣಿ, ನಿರ್ದೇಶಕರಾದ ಸುವಿನ್ ಗಣಪತಿ, ಆದೇಂಗಡ ವಿನು ಚಂಗಪ್ಪ, ಅಜ್ಜಿಕುಟ್ಟಿರ ಪ್ರವೀಣ್, ಹಕೀಮ್, ಕೆ.ಟಿ. ಸುದೀರ್, ಕೊಲ್ಲೀರ ಧರ್ಮಜ, ಚೆಪ್ಪುಡೀರ ಮಾಚು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ರತಿ ಅಚ್ಚಪ್ಪ, ಸುರೇಶ್ ರೈ, ರಾಮಕೃಷ್ಣ, ಮುಂತಾದವರು ಉಪಸ್ಥಿತರಿದ್ದರು.ಮಡಿಕೇರಿ: ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ನಗರದ ವಿವಿಧ ಕಡೆಗಳಲ್ಲಿ ನೆಲೆಸಿರುವ ಹೊರರಾಜ್ಯದ ಕೂಲಿ ಕಾರ್ಮಿಕರ ವಸತಿ ಗೃಹಗಳಿಗೆ ಭೇಟಿ ಮಾಡಿ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಕಟ್ಟಡ ಕಾರ್ಮಿಕರಿಗೆ ಪಡಿತರ ವಿತರಣೆ ಮಾಡಿದರು. ಝಾರ್ಖಂಡ್, ಉತ್ತರ ಪ್ರದೇಶದ ಕೂಲಿಕಾರರು ವಾಸ್ತವ್ಯ ಹೊಂದಿರುವ ಸ್ಥಳಗಳಿಗೆ ಹಾಗೂ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಇನ್ನರ್ವೀಲ್ ಕ್ಲಬ್ ಹಾಗೂ ನಗರಸಭೆಯ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಅನ್ನು ಖೈದಿಗಳಿಗೆ ವಿತರಿಸಲಾಯಿತು. ನಗರ ಸಭೆಯ ಆಯುಕ್ತರು, ತಹಶೀಲ್ದಾರ್, ಕಾರ್ಮಿಕ ಅಧಿಕಾರಿ ಹಾಗೂ ಇನ್ನರ್ವೀಲ್ ಕ್ಲಬ್ನ ಪದಾಧಿಕಾರಿಗಳು ಹಾಜರಿದ್ದರು.ಕೂಡಿಗೆ: ಮುಳ್ಳುಸೋಗೆ ಬಿ.ಎಸ್.ಆರ್. ಗ್ರೂಪ್ನ ಚಂದ್ರು ತಂಡದ ವತಿಯಿಂದ ಮುಳ್ಳುಸೋಗೆ ಗ್ರಾಮದ ಬಡ ಗ್ರಾಮಸ್ಥರಿಗೆ ಉಚಿತವಾಗಿ ಪಡಿತರ ಆಹಾರ ವಸ್ತುಗಳನ್ನು ಅವರ ಮನೆಗೆ ತೆರಳಿ ವಿತರಣೆ ಮಾಡಿದರು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಚಂದ್ರು ತಂಡ ಕಳೆದ ಎರಡು ದಿನಗಳಿಂದ 100ಕ್ಕೂ ಹೆಚ್ಚು ಬಡತನದಲ್ಲಿರುವವರನ್ನು ಗುರುತಿಸಿ ಅಕ್ಕಿ, ಈರುಳ್ಳಿ, ತರಕಾರಿಗಳನ್ನು ಉಚಿತವಾಗಿ ನೀಡಿದರು.