ಕುಶಾಲನಗರ ಏ.21: ಸುಳ್ಳು ನೆಪವೊಡ್ಡಿ ಆ್ಯಂಬ್ಯುಲೆನ್ಸ್ ದುರುಪಯೋಗಗೊಳಿಸಿಕೊಂಡು ಬಂದ ಬೆಂಗಳೂರಿನ ಮೂವರನ್ನು ಕುಶಾಲನಗರ ಪೊಲೀಸರು ಮಡಿಕೇರಿಯ ಕೋವಿಡ್-19 ಸಮೂಹ ದಿಗ್ಬಂಧನಕ್ಕೆ ಕಳುಹಿಸಿದ್ದಾರೆ.ನಿನ್ನೆ ದಿನ ಕಾರು ಆ್ಯಂಬ್ಯುಲೆನ್ಸ್ ಗೇಟ್ ಬಳಿ ಬಂದಾಗ ಸಂಶಯ ಗೊಂಡ ಕುಶಾಲನಗರ ಪೊಲೀಸರು ಅವರನ್ನು ತಡೆದರು. ಆ್ಯಂಬ್ಯುಲೆನ್ನಲ್ಲಿ ಚಾಲಕ ಅರಿಪಾಶ ಹಾಗೂ ಪ್ರಯಾಣಿಸುತ್ತಿದ್ದ ಬೆಂಗಳೂರು ಬಾದರಾಯಣಪುರದ ನಿವಾಸಿಗಳಾದ ಅರೀಫುಲ್ಲ ಷರೀಫ್ ಮತ್ತು ಅವರ ಸ್ನೇಹಿತ ಪ್ರಭಾಕರ್ ಎಂಬವರಿದ್ದರು. ಪ್ರಭಾಕರ್ ಅವರಿಗೆ ಗಂಭೀರ ಅನಾರೋಗ್ಯದ ಕಾರಣ ಔಷಧಿಗಾಗಿ ಕುಶಾಲನಗರಕ್ಕೆ ಬಂದಿರುವದಾಗಿ ನೆಪ ಹೇಳಿದರು. ಇಂದು ಪೊಲೀಸರು ಕೂಲಂಕಷ ವಿಚಾರಣೆ ಮಾಡಿದಾಗ ಬಯಲುಗೊಂಡ ಸತ್ಯವೇ ಬೇರೆಯದ್ದಾಗಿದೆ. ಪ್ರಭಾಕರ್ ಅವರ ಪುತ್ರ ಕುಬೇರ ಎಂಬ ವಿದ್ಯಾರ್ಥಿ ಕಳೆದ ಮಾರ್ಚ್ 15 ರಂದೇ ಕುಶಾಲನಗರ ಸನಿಹದ ಚಿಕ್ಕತ್ತೂರಿಗೆ ಬಂದಿದ್ದಾನೆ. ಅಲ್ಲಿ ಪ್ರಭಾಕರ್ ಅವರ ಸ್ನೇಹಿತ ಜಿತೇಂದ್ರ ಎಂಬವರ ಮನೆಯಲ್ಲಿ ಉಳಿದುಕೊಂಡಿದ್ದಾನೆ. ನೀಟ್ ಪರೀಕ್ಷೆಗೆ ರಜೆಯಲ್ಲಿ ಓದಲಿಕ್ಕೋಸ್ಕರ ಅಲ್ಲಿಗೆ ಬಂದಿದ್ದ. ಈ ನಡುವೆ ಲಾಕ್ಡೌನ್ ಘೋಷಿಸಲ್ಪಟ್ಟಿದೆ. ವಿದ್ಯಾರ್ಥೀ ಕುಬೇರ ಅಲ್ಲಿಯೇ ಸ್ಥಗಿತಗೊಂಡಿದ್ದಾನೆ. ಬೆಂಗಳೂರಿನ ತನ್ನ ಮನೆಗೆ ತೆರಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ತನ್ನ ಪುತ್ರನನ್ನು ಹೇಗಾದರೂ ಕರೆದುಕೊಂಡು ಬರಬೇಕೆಂದು ಚಿಂತಿಸಿ ಪ್ರಭಾಕರ್ ತನ್ನ ಸ್ನೇಹಿತ ಅರೀಫುಲ್ಲ ಷರೀಫ್ನ ಸಹಾಯದಿಂದ ಆ್ಯಂಬ್ಯುಲೆನ್ಸ್ಗೆ ರೂ. 10,000 ಬಾಡಿಗೆ ಹಣ ನೀಡಿ ತನ್ನ ಮಗ ಕುಬೇರನನ್ನು ಕರೆದೊಯ್ಯಲು ಯೋಜಿಸಿ ಇವರುಗಳು ಕೊಪ್ಪ ಗೇಟ್ ತಲಪಿದ್ದಾರೆ. ಆ ನಂತರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒಂದೆಡೆ, ಆ್ಯಂಬ್ಯುಲೆನ್ಸ್ನ ದುರುಪಯೋಗ, ಸುಳ್ಳು ಮಾಹಿತಿ ಮೂಲಕ ಲಾಕ್ಡೌನ್ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಇದೀಗ ಅರಿಪಾಶ, (ಮೊದಲ ಪುಟದಿಂದ) ಅರೀಫುಲ್ಲ ಷರೀಫ್ ಹಾಗೂ ಪ್ರಭಾಕರ್ ಇವರುಗಳನ್ನು ಮಡಿಕೇರಿಯ ಸಮುದಾಯ ದಿಗ್ಬಂಧನ ಕೇಂದ್ರಕ್ಕೆ ಸೇರಿಸಲಾಗಿದೆ.
ಎಸ್ಪಿ ಡಾ. ಸುಮನ್ ಡಿ.ಪಣ್ಣೇಕರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೈಲೇಂದ್ರ, ಸಿಐ ಮಹೇಶ್ ಹಾಗೂ ಎಸ್ಐ ವೆಂಕಟರಮಣ ಇವರುಗಳು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಈ ನಡುವೆ ಇಂದು ಕುಶಾಲನಗರದಲ್ಲಿ ಲಾಕ್ಡೌನ್ ನಿರ್ಬಂಧ ಉಲ್ಲಂಘಿಸಿದ್ದಕ್ಕಾಗಿ 47 ದ್ವಿಚಕ್ರ ವಾಹನ, 14 ಕಾರು ಹಾಗೂ 1 ಮಿನಿ ಲಾರಿ ಸೇರಿ ಒಟ್ಟು 62 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡರು.