ಮಡಿಕೇರಿ, ಏ. 21: ಖಚಿತ ಮಾಹಿತಿ ಆಧರಿಸಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಕೊಡಗು ಜಿಲ್ಲಾ ಅಪರಾಧ ಪತ್ತೆದಳ 9 ಮಂದಿ ಜೂಜುಕೋರರನ್ನು ಬಂಧಿಸಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆಯಲ್ಲಿ ಜೂಜಿನಲ್ಲಿ ನಿರತರಾಗಿದ್ದ 9 ಮಂದಿಯನ್ನು ಬಂಧಿಸಿ; 1,00,560 ರೂ. ನಗದು ಹಾಗೂ 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ತಪ್ಪಿಸಿಕೊಂಡಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.7ನೇ ಹೊಸಕೋಟೆ ನಿವಾಸಿ, ಎಂ.ಎನ್. ಸುರೇಶ್ ಎಂಬವರಿಗೆ ಸೇರಿದ ತೋಟದೊಳಗಿನ ಶೆಡ್‍ನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ವಯ ದಾಳಿ ನಡೆಸಲಾಗಿದೆ. ಜೂಜಿನಲ್ಲಿ ತೊಡಗಿದ್ದ ಅಂದಗೋವೆ ಗ್ರಾಮದ ಎಂ.ಪಿ. ನರೇನ್ ಪಳಂಗಪ್ಪ, ಕೂಡಿಗೆ ಬಳಿಯ ಸೀಗೆಹೊಸೂರು

(ಮೊದಲ ಪುಟದಿಂದ) ಗ್ರಾಮದ ಎಸ್.ಆರ್. ರಜನಿ, ಕುಶಾಲನಗರ ಗುಂಡೂರಾವ್ ಬಡಾವಣೆಯ ಎಸ್. ಸಜಿತ್, ಗುಡ್ಡೆಹೊಸೂರುವಿನ ಬಿ.ಎಂ. ಸಂತೋಷ್, ಗುಮ್ಮನಕೊಲ್ಲಿಯ ಜಿ.ಆರ್. ಲವಕುಮಾರ್, ಗಂಧದಕೋಟೆಯ ಬಿ.ಪಿ. ರಾಜೇಶ್, ಕೆ.ಆರ್. ಪೇಟೆ, ಮಂಡ್ಯದ ಪುಟ್ಟಪ್ಪ, 7ನೇ ಹೊಸಕೋಟೆಯ ಉಮ್ಮರ್ ಹಾಗೂ ಸುರೇಶ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಒಂದು ಇಕೋ ಸ್ಪೋಟ್ರ್ಸ್, ಇನ್ನೋವ, ಡಸ್ಟರ್ ಹಾಗೂ ಆಲ್ಟೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 7ನೇ ಹೊಸಕೋಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕುಂಞಕುಟ್ಟಿ ಎಂಬಾತ ಓಡಿ ತಪ್ಪಿಸಿಕೊಂಡಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ವರ್ಷದ ಹಿಂದೆ ಕೂಡ ಇದೇ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಲಾಗಿದ್ದು; ರೂ. 4 ಲಕ್ಷ ಹಣ ವಶಪಡಿಸಿಕೊಳ್ಳಲಾಗಿತ್ತೆಂದು ಪೊಲೀಸ್ ಮೂಲಗಳು ತಿಳಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸುಂಟಿಕೊಪ್ಪ ಉಪ ನಿರೀಕ್ಷಕ ತಿಮ್ಮಪ್ಪ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಹಮೀದ್, ನಿರಂಜನ್, ಯೋಗೇಶ್‍ಕುಮಾರ್, ಅನಿಲ್, ವೆಂಕಟೇಶ್, ವಸಂತ, ಶರತ್, ಸುಮತಿ ಚಾಲಕ ಶಶಿಕುಮಾರ್ ಭಾಗವಹಿಸಿದ್ದರು.